ಸೋಮವಾರ, ಜನವರಿ 17, 2022
19 °C

ಶಿವಮೊಗ್ಗ | ಓಮೈಕ್ರಾನ್‌ ಭೀತಿಗೆ ಸೊರಗಿದ ಗ್ರಾಮೀಣ ಜಾತ್ರೆಗಳು

ಕುಮಾರ್ ಅಗಸನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಳೆಹೊನ್ನೂರು: ನಾಲ್ಕೈದು ವರ್ಷಗಳಿಗೊಮ್ಮೆ ಆಚರಿಸುವ ಮಾರಿ ಜಾತ್ರಾ ಮಹೋತ್ಸವದ ವಿಷಯದಲ್ಲಿ ಈ ಬಾರಿ ಗ್ರಾಮಸ್ಥರೇ ತಟಸ್ಥ ನೀತಿ ಅನುಸರಿಸುತ್ತಿದ್ದಾರೆ. ಕಾರಣ ಮತ್ತೊಮ್ಮೆ ಕೋವಿಡ್‌ ಕರಿನೆರಳು ಗ್ರಾಮೀಣ ಜನರನ್ನು ಕಾಡುತ್ತಿದೆ.

ಎರಡು ವರ್ಷಗಳಿಂದ ಕೊರೊನಾ ಹಾಗೂ ಅದರ ರೂಪಾಂತರಿ ತಳಿಗಳಿಂದಾಗಿ ಜನರು ಸಂಕಷ್ಟಕ್ಕೆ ಈಡಾದರೂ ಈ ಬಾರಿಯಾದರೂ ಅದ್ದೂರಿಯಾಗಿ ಮಾರಿ ಜಾತ್ರಾ ಮಹೋತ್ಸವ ನೆರವೇರಿಸಲು ಕೆಲವು ಗ್ರಾಮದ ಮುಖಂಡರು ಭರದ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಓಮೈಕ್ರಾನ್‌ ತಲ್ಲಣ ಸೃಷ್ಟಿಸುತ್ತಿದೆ. ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುವುದೋ ಎಂಬುದನ್ನು ಕಾದು ನೋಡುವ ತಂತ್ರಕ್ಕೆ ಜಾತ್ರೆ ನಡೆಸಲು ಸಿದ್ಧತೆ ನಡೆಸಿರುವ ಹಳ್ಳಿಗಳ ಗ್ರಾಮಸ್ಥರು ಶರಣಾಗಿದ್ದಾರೆ.

ಭದ್ರಾವತಿ ತಾಲ್ಲೂಕಿನ ಗ್ರಾಮಗಳಾದ ಹನುಂತಾಪುರ, ಶ್ರೀನಿವಾಸಪುರ, ಕಲ್ಲಜ್ಜನಾಳ್, ಅರಬಿಳಚಿ, ಮಂಗೋಟೆ, ಸನ್ಯಾಸಿಕೋಡಮಗ್ಗಿ ಮೊದಲಾದ ಗ್ರಾಮಗಳಲ್ಲಿ ಈಗಾಗಲೇ ಮಾರಿ ಜಾತ್ರೆ ಆಚರಣೆಗೆ ಘೋಷಣೆ ಹೊರಡಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ದಿನ ಸಹ ನಿಗದಿ ಮಾಡಲಾಗಿದೆ. ಬಹುತೇಕ ಗ್ರಾಮಗಳಲ್ಲಿ ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಕುರಿ, ಕೋಳಿ, ಕೋಣಗಳನ್ನು ಖರೀದಿಸಿ ತಂದು ಸಲಹುತ್ತಿದ್ದಾರೆ.

ಮಂಗೋಟೆ ಗ್ರಾಮದಲ್ಲಿ ನಡೆಯಬೇಕಿದ್ದ ಮಾರಿ ಜಾತ್ರೆ ಈಗಾಗಲೇ ರದ್ದಾಗಿದೆ. ಬೇರೆ ಗ್ರಾಮಗಳಲ್ಲಿ ಹಬ್ಬದ ಸಿದ್ಧತೆ ಜೋರಾಗಿದೆ. ಮನೆಗಳಿಗೆ ಸುಣ್ಣಬಣ್ಣ ಹಚ್ಚಲಾಗುತ್ತಿದೆ. ಮನೆಗೆ ಬರುವ ನೆಂಟರಿಷ್ಟರಿಗೆ ಹೊದಿಕೆ, ಚಾಪೆಗಳನ್ನು ಖರೀಸಲಾಗಿದೆ. ಅಲ್ಲದೇ ಕೆಲವು ಸಮಿತಿಗಳು ಜಾತ್ರಾ ಮಹೋತ್ಸವಕ್ಕೆ ದೀಪಾಲಂಕಾರ ಹಾಗೂ ಶಾಮಿಯಾನ, ಮಂಗಳವಾದ್ಯ, ಪಟಾಕಿಯವರಿಗೆ ಲಕ್ಷಾಂತರ ರೂಪಾಯಿ ಮುಂಗಡ ಹಣ ನೀಡಲಾಗಿದೆ.

ಹನುಮಂತಾಪುರ ಗ್ರಾಮದಲ್ಲಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಜಾತ್ರೆಯನ್ನು ಒಂದು ದಿನದಮಟ್ಟಿಗೆ ಆಚರಣೆ ಸಮ್ಮಿತಿ ದೊರೆಯದ ಕಾರಣ ಹಾಗೂ ಹಬ್ಬವನ್ನು ಸರಳವಾಗಿ ಆಚರಿಸುವುದಕ್ಕೆ ಗ್ರಾಮಸ್ಥರು ಒಪ್ಪದ ಕಾರಣ ಮುಂದಿನ ವರ್ಷಕ್ಕೆ ಮುಂದೂಡಲಾಯಿತು.

ಅರಬಿಳಚಿ ಗ್ರಾಮದಲ್ಲಿಯೂ ಸಹ ಜಾತ್ರಾ ಮಹೋತ್ಸವವನ್ನು ನಿಲ್ಲಿಸಲಾಗಿದೆ. ಸರಳವಾಗಿ ಆಚರಿಸಲು ಸಾಧ್ಯವಿಲ್ಲ. ನೆಂಟರಿಷ್ಟರನ್ನು ಬಿಟ್ಟು ಹಬ್ಬ ಮಾಡಲು ಸಾಧ್ಯವಿಲ್ಲ ಆದ್ದರಿಂದ ಗ್ರಾಮ ಸಮಿತಿಯಿಂದ ಹಬ್ಬವನ್ನು ಮುಂದೂಡಲಾಗಿದೆ.

ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಗ್ರಾಮದ ಸಮಿತಿಗಳು ಪಂಚಾಯಿತಿ ನಡೆಸಿದರೂ ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ಈಗ ತಾನೆ ಮೊದಲ ವಾರಾಂತ್ಯ ಕರ್ಫ್ಯೂ ಮುಗಿದಿದೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಜಾರಿಯಾದರೇ ಜಾತ್ರಾ ಮಹೋತ್ಸವವನ್ನು ಸರ್ಕಾರವೇ ರದ್ದುಗೊಳಿಸುತ್ತದೆ ಎಂಬುದು ಕೆಲವರ ವಾದ. ಮತ್ತೆ ಕೆಲವರು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಆಗುವುದಿಲ್ಲ. ಹಬ್ಬವನ್ನು ಸರಳವಾಗಿ ಆಚರಿಸಬಹುದು ಎಂದು ವಾದ ಮಂಡಿಸುತ್ತಾರೆ.

ಲಾಕ್‌ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಮುಂದಿನ ದಿನಗಳಲ್ಲೂ ವಾರಾಂತ್ಯ ಕರ್ಫ್ಯೂ ಮುಂದುವರಿದರೆ ಜಾತ್ರಾ ಮಹೋತ್ಸವ ಆಚರಿಸಬೇಕೋ ಅಥವಾ ಬಿಡಬೇಕೋ ಎಂಬ ಗೊಂದಲ ಗ್ರಾಮದ ಸಮಿತಿಗಳಲ್ಲಿದೆ. ನಂತರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕಾಗುತ್ತದೆ ಎನ್ನುತ್ತಾರೆ ಅರಬಿಳಚಿ ಗ್ರಾಮಸ್ಥ ಪರಶುರಾಮ್.

ಜಾತ್ರಾ ಮಹೋತ್ಸವದಲ್ಲಿ ಕೊರೊನಾ ಅತ್ಯಂತ ಅಪಾಯಕಾರಿ. ರಾಜ್ಯದಲ್ಲಿಯೂ ಹೆಚ್ಚು ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆಡಳಿತ ಮಂಡಳಿ ಗ್ರಾಮದ ಮುಖಂಡರನ್ನು ಭೇಟಿ ಮಾಡಿ ಜಾತ್ರೆ ಆಚರಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಮಿತಿಗೆ ಧಮ್ಕಿ: ‘ಹಿಂದಿನ ವರ್ಷದಿಂದಲೇ ಹಬ್ಬಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಈಗ ಕೈಬಿಡಬೇಕೆಂದರೆ ಹೇಗೆ ಸಾಧ್ಯ? ನಿಮ್ಮಿಂದ ಜಾತ್ರಾ ಮಹೋತ್ಸವ ನಡೆಸಲು ಸಾಧ್ಯವಾಗದಿದ್ದರೆ ಬಿಡಿ ನಾವು ಮುಂದೆ ನಿಂತು ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆ’ ಎಂದು ಹಲವು ಗ್ರಾಮಗಳ ಗ್ರಾಮಸ್ಥರು ಗ್ರಾಮ ಸಮಿತಿ ಮುಖಂಡರಿಗೆ ಧಮ್ಕಿ ಹಾಕುತ್ತಿದ್ದಾರೆ.

ಬೇರೆ ಗ್ರಾಮಗಳ ಜನರಿಗೆ ಆಹ್ವಾನವಿಲ್ಲ: ಕೆಲವು ಗ್ರಾಮಗಳಲ್ಲಿ ಸರಳವಾಗಿ ಆಚರಣೆ ಮಾಡುವಂತಾಗಿದೆ. ಜಾತ್ರಾ ಮಹೋತ್ಸವದ ದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುವುದು. ಬೇರೆ ಗ್ರಾಮದ ಜನರನ್ನು ಆಹ್ವಾನಿಸುವುದಿಲ್ಲ. ನೆಂಟರಿಷ್ಟನ್ನು ಕರೆಯುವುದು ಸರ್ಕಾರದ ಮುಂದಿನ ನಿರ್ಧಾರ ಮೇಲೆ ಅವಲಂಬಿತವಾಗಿದೆ ಎನ್ನುವುದು ಕೆಲವರ ಅನಿಸಿಕೆ.

‘ಈಗಾಗಲೇ ಪೊಲೀಸರು ವಾರಾಂತ್ಯದ ಕರ್ಫ್ಯೂ ಜತೆಗೆ ಮಾರಿ ಜಾತ್ರಾ ಮಹೋತ್ಸವನ್ನು ಆಚರಿಸದಂತೆ ಗ್ರಾಮ ಸಮಿತಿಗೆ ಮನವಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಸಮಿತಿಗಳ ಜತೆ ಚರ್ಚಿಸಿ ಸರ್ಕಾರ ನಿರ್ಧಾರಗಳನ್ನು ಪಾಲನೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಹೊಳೆಹೊನ್ನೂರು ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮೀಪತಿ.

ರಾಜ್ಯದಲ್ಲಿ ದೇವಾಲಯಗಳಿಗೂ ಬೀಗ ಬೀಳುವ ಸಾಧ್ಯತೆ ಇದೆ. ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಪೂಜೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಗಾಗಿ, ಜಾತ್ರಾ ಮಹೋತ್ಸವಗಳು ಬಹುತೇಕ ಬಂದ್ ಆಗುವ ಸಾಧ್ಯತೆ ಇದೆ.

ಜಾತ್ರೆಯಲ್ಲಿ ಖರೀದಿ ಇಳಿಕೆ
-
ನಿರಂಜನ ವಿ.
ತೀರ್ಥಹಳ್ಳಿ: ಕೋವಿಡ್‌ ನಿರ್ಬಂಧದ ಪರಿಣಾಮ ತಾಲ್ಲೂಕಿನಲ್ಲಿ ನಡೆದ ಜಾತ್ರೆಯಲ್ಲಿ ಖರೀದಿ ಅಷ್ಟಾಗಿ ಕಾಣಿಸಲಿಲ್ಲ. ಹೊಸವರ್ಷದ ಕನಸು ಮೊದಲ ವಾರದಲ್ಲಿಯೇ ಕಮರಿ ಹೋಗುವಂತೆ ಮಾಡಿತ್ತು. ಈಗ ಸಂಕ್ರಾಂತಿ ಸಡಗರಕ್ಕೂ ಓಮೈಕ್ರಾನ್‌ ಭೀತಿ ಆವರಿಸಿದೆ.

ಶ್ರೀರಾಮೇಶ್ವರ, ಗಾಳಿ ಮಾರಮ್ಮ, ಬಾಳಗಾರು, ಮಂಡಗದ್ದೆ ಎಳ್ಳಮಾವಾಸ್ಯೆ ಜಾತ್ರೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ನಿರ್ಬಂಧದ ನಡುವೆಯೂ ಪಾಲ್ಗೊಂಡಿದ್ದರು. ವ್ಯಾಪಾರ, ವಹಿವಾಟು ನಡೆಸುವಾಗ ಮಾತ್ರ ಹೆಚ್ಚಿನ ಖರೀದಿಗೆ ಮುಂದಾಗಲಿಲ್ಲ.

ದೀಪಾವಳಿ ಮುಗಿಯುತ್ತಿದ್ದಂತೆ ಆರಂಭವಾದ ವರ್ಷದ ಕೃಷಿ ಚಟುವಟಿಕೆ ಡಿಸೆಂಬರ್‌ ವೇಳೆಗೆ ಬಹುತೇಕ ಮುಗಿಸಿದ್ದರು. ಕ್ರಿಸ್‌ಮಸ್‌, ಹೊಸವರ್ಷ, ಎಳ್ಳಮಾವಾಸ್ಯೆಯಲ್ಲಿ ಒಂದಷ್ಟು ವಾರ್ಷಿಕ ಖರೀದಿ ನಡೆಯಲಿಲ್ಲ. ಕೋವಿಡ್‌ ಭಯಕ್ಕಿಂತ ಲಾಕ್‌ಡೌನ್‌ ಭಯ ಜಾಸ್ತಿ ಕಾಣಿಸುವಂತಾಗಿತ್ತು.

ಜನವರಿ 18ರವರೆಗೆ ಲಾಕ್‌ಡೌನ್‌ ನಿರ್ಬಂಧ ಇರುವುದರಿಂದ ಸಂಕ್ರಾಂತಿಯಲ್ಲಿ ನಡೆಯುವ ಎರಡು ಜಾತ್ರೆಯೂ ಇದೆ ಸಂಕಷ್ಟ ಎದುರಿಸುವಂತಾಗಿದೆ. ಜನವರಿ 14ರಂದು ಪಟ್ಟಣದ ಕಲ್ಲಾರೆ ಗಣಪತಿ ರಥೋತ್ಸವ ಹಾಗೂ ಬೆಜ್ಜವಳ್ಳಿಯಲ್ಲಿ ನಡೆಯುವ ಅಯ್ಯಪ್ಪಸ್ವಾಮಿ ಗರುಡ ದರ್ಶನ ಕಳೆಗುಂದುವ ಆತಂಕ ಎದುರಾಗಿದೆ.

ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮುಗಿಯದ ಕೃಷಿ ಚಟುವಟಿಕೆ ಸಂಕ್ರಾಂತಿ ವೇಳೆಗೆ ಸಂಪೂರ್ಣ ಮುಗಿಯುತ್ತಿತ್ತು. ಗ್ರಾಮೀಣ ಪ್ರದೇಶದ ಜನರು ದೊಡ್ಡ ಜಾತ್ರೆ ಸಾಧ್ಯವಾಗದಿದ್ದಾಗ ಚಿಕ್ಕ ಜಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕಾರ್ಯದ ಜತೆಗೆ ಸ್ವಕಾರ್ಯದಿಂದ ಸಂಭ್ರಮಿಸುತ್ತಿದ್ದರು. ಜಾತ್ರೆಯಲ್ಲಿ ನಿರೀಕ್ಷಿತ ವ್ಯಾಪಾರವಾಗದೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ವ್ಯಾಪಾರಸ್ಥರು ನಷ್ಟದ ಆಂತಕದಲ್ಲಿದ್ದಾರೆ.

ಶಬರಿಮಲೆ ಯಾತ್ರೆ ಮೇಲೂ ಕರಿನೆರಳು
ಮಕರ ಸಂಕ್ರಮಣದ ಮುನ್ನ ಜಿಲ್ಲೆಯಲ್ಲೂ ಸಾಕಷ್ಟು ಸಂಖ್ಯೆಯ ಭಕ್ತರು ಮಾಲೆ ಧರಿಸುತ್ತಿದ್ದರು. ಶಬರಿ ಮಲೆಗೆ ಹೋಗಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡುತ್ತಿದ್ದರು. ಈ ಬಾರಿ ಮಾಲಾಧಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಶಿವಮೊಗ್ಗ ನಗರದ ಗುಂಡಪ್ಪ ಶೆಡ್‌ನಿಂದ 1963ರಲ್ಲಿ ಆರಂಭವಾದ ಶಬರಿಮಲೆ ಯಾತ್ರೆ ಐದೂವರೆ ದಶಕಗಳಿಂದ ನಿರಂತರವಾಗಿ ಸಾಗಿದೆ. ಗುರುಸ್ವಾಮಿಗಳಾದ ಮೇಲಾಯುಧನ್, ಕುಮಾರನ್ ನಾಯರ್ ಮೊದಲ ಬಾರಿ ಮಾಲೆ ಧರಿಸಿದ್ದರು. ಅವರ ನೇತೃತ್ವದಲ್ಲಿ ಆರಂಭವಾಗಿದ್ದ ಯಾತ್ರೆ ಇಂದಿಗೂ ನಿಂತಿಲ್ಲ. ಪ್ರತಿ ವರ್ಷವೂ ಮಾಲಾಧಾರಿ ಭಕ್ತರ ಸಂಖ್ಯೆ ಬೆಳೆಯುತ್ತಾ ಸಾಗಿತ್ತು. ತಮಿಳುನಾಡಿನಲ್ಲಿ ಗುರುವೆಂದೇ ಪೂಜಿಸುವ ರೋಜಾ ಷಣ್ಮುಗಂ ಅವರ ಅನುಯಾಯಿಗಳ ಸಂಖ್ಯೆಯೂ ಅಪಾರವಾಗಿದೆ.

ಗುಂಡಪ್ಪ ಶೆಡ್‌ನಲ್ಲಿ ಆರಂಭದ ದಿನಗಳಲ್ಲಿ ಭಜನಾ ಮಂದಿರ ಸ್ಥಾಪಿಸಿಕೊಂಡು ಅಯ್ಯಪ್ಪ ಸ್ಮರಣೆ, ಮಾಲೆ ಧರಿಸುತ್ತಿದ್ದ ನಾಯರ್ ನೇತೃತ್ವದ ಭಕ್ತ ಸಮೂಹ ನಂತರ 1974ರಲ್ಲಿ ಮೊದಲ ಬಾರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ಕಟ್ಟಿದ್ದರು. ನಂತರ ರಾಮಣ್ಣ ಶ್ರೇಷ್ಠಿಪಾರ್ಕ್, ವಿನೋಬನಗರ, ಶಾಮತಿನಗರ, ಗಾಡಿಕೊಪ್ಪ, ಆಲ್ಕೊಳ, ಗೋಪಾಳ, ಇಂದಿರಾ ನಗರಗಳಲ್ಲೂ ದೇವಸ್ಥಾನ ತಲೆ ಎತ್ತಿವೆ. ಅಲ್ಲೆಲ್ಲ ಮಾಲಾಧಾರಿಗಳ ಪೂಜೆ, ಪುನಸ್ಕಾರಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಓಮೈಕ್ರಾನ್‌ ಭೀತಿ ಅಯ್ಯಪ್ಪ ಭಕ್ತರ ಮೇಲೂ ಪರಿಣಾಮ ಬೀರಿದೆ.

*

ಸರ್ಕಾರ ನಿಯಮಗಳನ್ನು ಉಲ್ಲಂಘಿಸಿ ಜಾತ್ರಾ ಮಹೋತ್ಸವ ನೆರವೇರಿಸಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ವತಿಯಿಂದ ಮಾರಿಕಾಂಬ ಸಮಿತಿಯವರಿಗೆ ಹಾಗೂ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
-ಕಿರಣ್ ಎಚ್.ಬಿ. ಅಧ್ಯಕ್ಷರು, ಅರಬಿಳಚಿ ಗ್ರಾಮ ಪಂಚಾಯಿತಿ

*

ನಾಲ್ಕೈದು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ರದ್ದಾದರೆ ಜನರಿಗೆ ಸಾಕಷ್ಟು ನೋವಾಗುತ್ತದೆ.
-ದಾನೇಶಪ್ಪ,ಶ್ರೀನಿವಾಸಪುರ ಗ್ರಾಮಸ್ಥ

*

ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಗೆ ಸುಣ್ಣಬಣ್ಣ ಹಚ್ಚಲಾಗಿದೆ. ಹಬ್ಬಕ್ಕೆ ಕುರಿ ಖರೀದಿಸಲಾಗಿದೆ. ಜಾತ್ರಾ ಮಹೋತ್ಸವ ರದ್ದಾದರೆ ಮಾಡಿದ ಎಲ್ಲಾ ಖರ್ಚು ವ್ಯರ್ಥವಾಗುತ್ತದೆ.
-ಸುರೇಶಪ್ಪ, ಹನುಮಂತಾಪುರ

*

ಹಬ್ಬದ ಸಂದರ್ಭದಲ್ಲಿ ಖರೀದಿ ಹೆಚ್ಚಿರುತ್ತದೆ. ಕೋವಿಡ್‌ ನಿರ್ಬಂಧದಿಂದ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಜಾತ್ರೆಯಲ್ಲಿ ಸಮಯದ ಗಡುವು ನಷ್ಟಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳನ್ನು ಸಾಲ ಪಡೆದು ಕೊಳ್ಳುತ್ತಾರೆ. ಇತರೆ ವ್ಯಾಪಾರಿಗಳು ಉಸಿರಾಡುವುದು ಕಷ್ಟವಾಗಿದೆ.
-ಸರ್ಫ್ರಾಜ್‌ ಅಹಮದ್‌, ವ್ಯಾಪಾರಿ, ತೀರ್ಥಹಳ್ಳಿ

*

ಆರಂಭಿಕ ಉದ್ದಿಮೆದಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ದಿನದ ದುಡಿಮೆ ಮಾಡುವುದು ಕಷ್ಟವಾಗಿದೆ. ಯುವ ಸಮುದಾಯ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದೆ. ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
-ಪ್ರಶಾಂತ್, ಅಧ್ಯಕ್ಷರು, ಪಟ್ಟಣ ಯುವ ಕಾಂಗ್ರೆಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.