ಸಾಗರ: ತಾಲ್ಲೂಕಿನ ಮಡಸೂರು ಗ್ರಾಮದ 7 ರೈತರ ಮೇಲೆ ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾದ ವಿಷಯದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಒತ್ತಾಯಿಸಿದರು.
‘ಭೂ ಮಂಜೂರಾತಿ ವಿಷಯದಲ್ಲಿ ಹಲವು ದಶಕಗಳಿಂದ ಕಾಗೋಡು ತಿಮ್ಮಪ್ಪ ಅವರು ಪ್ರಾಮಾಣಿಕ ಹೋರಾಟ ನಡೆಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾವುದೆ ರೈತರನ್ನು ಜೈಲಿಗೆ ಕಳುಹಿಸಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ 7 ರೈತರನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
‘ಮಡಸೂರು ಗ್ರಾಮದಲ್ಲಿ ತಹಶೀಲ್ದಾರರ ದೂರಿನ ಆಧಾರದ ಮೇಲೆ ರೈತರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗುವಂತಹ ಯಾವುದೆ ಘಟನೆ ನಡೆದಿಲ್ಲ. ತಹಶೀಲ್ದಾರರು ರೈತರಿಗೆ ಮಂಜೂರಾಗಿರುವ ಭೂಮಿಯಲ್ಲಿ ಅಗಳ ತೋಡಲು ಮುಂದಾದಾಗ ಮಾತಿಗೆ ಮಾತು ಬೆಳೆದಿದೆ. ಆದಾಗ್ಯೂ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಆರೋಪಿಸಿದರು.
‘ಸಾಗರ ಕ್ಷೇತ್ರದಲ್ಲಿ ಇತ್ತೀಚೆಗೆ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರನ್ನು ಮಕ್ಕಳಂತೆ ನೋಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಶಾಸಕ ಗೋಪಾಲಕೃಷ್ಣ ಬೇಳೂರು ಮಡಸೂರು ಗ್ರಾಮದ ಮತ್ತಷ್ಟು ರೈತರ ಮೇಲೆ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ’ ಎಂದು ದೂರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭರ್ಮಪ್ಪ, ಬಗರ್ ಹುಕುಂ ಸಮಿತಿ ಮಾಜಿ ಸದಸ್ಯ ರೇವಪ್ಪ ಕೆ.ಹೊಸಕೊಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.