ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಲ್ಲಿ ನಿರಂತರ ಮುಸಲಧಾರೆ

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಚುರುಕುಗೊಂಡ ಕೃಷಿ ಚಟುವಟಿಕೆ
Last Updated 6 ಜುಲೈ 2022, 4:02 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನಲ್ಲಿ ಏಳು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ನಿರಂತರ ಮುಸಲಧಾರೆಯಿಂದಾಗಿ ತೋಟ, ಗದ್ದೆ, ಹಳ್ಳ–ಕೊಳ್ಳ, ಕೆರೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ಜೂನ್‌ನಲ್ಲಿ ಕೈಕೊಟ್ಟಿದ್ದ ಮಳೆ ಜುಲೈ ತಿಂಗಳ ಮೊದಲ ವಾರದಲ್ಲಿ ಜೋರಾಗಿ ಬರುತ್ತಿರುವುದು ಕೃಷಿ ಚಟುವಟಿಕೆ ಗರಿಗೆದರಲು ಸೂಕ್ತ ವಾತಾವರಣ ನಿರ್ಮಿಸಿದೆ. ಮಳೆಯ ನಡುವೆಯೂ ರೈತರು ಬಿತ್ತನೆ, ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಏಳು ದಿನಗಳಲ್ಲಿ ತಾಲ್ಲೂಕಿನಲ್ಲಿ 38.7 ಸೆಂ.ಮೀ. ಮಳೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 20.1 ಸೆಂ.ಮೀ. ಮಳೆಯಾಗಬೇಕಿದ್ದು, ಶೇ 97ರಷ್ಟು ಅಧಿಕ ಮಳೆಯಾಗಿದೆ.

ತಾಲ್ಲೂಕಿನ ಉಳಿದ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕಸಬಾ ಹೋಬಳಿಯಲ್ಲಿ ಮಾತ್ರ ಶೇ 23ರಷ್ಟು ಮಳೆಯ ಕೊರತೆ ಇದೆ. ಏಳು ದಿನಗಳಲ್ಲಿ ಈ ಹೋಬಳಿಯಲ್ಲಿ ವಾಡಿಕೆಯಂತೆ 20.1 ಸೆಂ.ಮೀ. ಮಳೆಯಾಗಬೇಕಿದ್ದು, 15.5 ಸೆಂ.ಮೀ ಮಾತ್ರ ಮಳೆಯಾಗಿದೆ.

ಏಳು ದಿನಗಳಲ್ಲಿ ಆನಂದಪುರಂ ಹೋಬಳಿಯಲ್ಲಿ ವಾಡಿಕೆಯ 11.5 ಸೆಂ.ಮೀ. ಬದಲು 15.3 ಸೆಂ.ಮೀ, ಭಾರಂಗಿ ಹೋಬಳಿಯಲ್ಲಿ ಶೇ 33.1 ಸೆಂ.ಮೀ. ಬದಲು 63.5 ಸೆಂ.ಮೀ, ಆವಿನಹಳ್ಳಿ ಹೋಬಳಿಯಲ್ಲಿ 22.3 ಸೆಂ.ಮೀ. ಬದಲು 36.2 ಸೆಂ.ಮೀ, ಕರೂರು ಹೋಬಳಿಯಲ್ಲಿ 34.1 ಸೆಂ.ಮೀ. ಬದಲು 54.7 ಸೆಂ.ಮೀ. ತಾಳಗುಪ್ಪ ಹೋಬಳಿಯಲ್ಲಿ 23.3 ಸೆಂ.ಮೀ. ಬದಲು 28.1 ಸೆಂ.ಮೀ. ಮಳೆಯಾಗಿದೆ.

ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 49.1 ಸೆಂ.ಮೀ. ಮಳೆಯಾಗಬೇಕಿದ್ದು, 34.1 ಸೆಂ.ಮೀ. ಮಳೆಯಾಗಿತ್ತು. ಶೇ 30ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಅಂದರೆ ಜುಲೈ 4ರ ಬೆಳಿಗ್ಗೆ 8ರಿಂದ ಜುಲೈ 5ರ ಬೆಳಿಗ್ಗೆ 8ರವರೆಗೆ ವಾಡಿಕೆಯ 30 ಮಿ.ಮೀ. ಮಳೆಯ ಬದಲು 88 ಮಿ.ಮೀ. ಮಳೆಯಾಗಿದೆ.

ತಾಲ್ಲೂಕಿನಲ್ಲಿ 12,600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, 775 ಹೆಕ್ಟೇರ್ ಪ್ರದೇಶದಲ್ಲಿ ನೇರ ಬಿತ್ತನೆ ಮಾಡಲಾಗಿದೆ. 30 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಬಿತ್ತನೆಯಾಗಿದೆ.

ತಾಲ್ಲೂಕಿನ 2,011 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, 1,896 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯಿಂದ ಈವರೆಗೆ 141.8 ಕ್ವಿಂಟಲ್ ಮೆಕ್ಕೆಜೋಳದ ಬೀಜ, 842 ಕ್ವಿಂಟಲ್ ಭತ್ತದ ಬೀಜ ವಿತರಣೆಯಾಗಿದೆ.

ಏಳು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತದ ಗದ್ದೆಯಲ್ಲಿ ನೀರು ನಿಂತಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅಪಾಯದ ಹಂತ ತಲುಪಿಲ್ಲ. ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಪ್ರವಾಹದ ಭೀತಿ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT