ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ರಾಗಿಗುಡ್ಡ ಉಳಿಸಿ, ಮಾರ್ದನಿಸಿದ ಧ್ವನಿ

ಪಾದಯಾತ್ರೆಗೆ ಬಸವಮರುಳಸಿದ್ಧ ಸ್ವಾಮೀಜಿ ಚಾಲನೆ
Last Updated 26 ಮಾರ್ಚ್ 2023, 7:59 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ‘ರಾಗಿ ಗುಡ್ಡ ಉಳಿಸಿ ಅಭಿಯಾನ’ದ ಪರಿಸರಾಸಕ್ತರು ರಾಗಿಗುಡ್ಡದಿಂದ ಕಾಲ್ನಡಿಗೆ ಜಾಥಾ ಮೂಲಕ ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

‘ರಾಗಿಗುಡ್ಡವನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ನಮ್ಮನ್ನು ಆಳುತ್ತಿರುವ ಸರ್ಕಾರಗಳು ಜಿಲ್ಲೆಯ ಒಡಲಿಗೆ ಬೆಂಕಿ ಹಚ್ಚುತ್ತಿವೆ. ರಾಗಿಗುಡ್ಡದ ಸುಂದರ ಪರಿಸರವನ್ನು ನಾಶಪಡಿಸಿ, ಅಲ್ಲಿನ ಜನರ ಬದುಕನ್ನೇ ಹಾಳು ಮಾಡುತ್ತಿವೆ’ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು, ದೆಹಲಿಯಂತಹ ದೊಡ್ಡ ನಗರಗಳು ಅಭಿವೃದ್ಧಿ ಹೆಸರಿನಲ್ಲಿ ವಿನಾಶದ ಅಂಚಿಗೆ ತಲುಪಿವೆ. ಅರಣ್ಯ ನಾಶವಾಗಿ ಬೃಹತ್ ಗಾತ್ರದ ಕಟ್ಟಡಗಳು ತಲೆ ಎತ್ತಿವೆ. ಅದರ ಪರಿಣಾಮದಿಂದ ಅಲ್ಲಿನ ನಾಗರಿಕರು ಉಸಿರಾಡಲು ಆಮ್ಲಜನಕ ಕೊರತೆಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಅದೇ ಸವಾಲನ್ನು ಶಿವಮೊಗ್ಗ ಜನರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ತಾಪಮಾನ ಸಮತೋಲನ ಕಾಯ್ದುಕೊಂಡಿತ್ತು. ಪ್ರಸ್ತುತ ಅರಣ್ಯ ನಾಶದಿಂದ ಜಿಲ್ಲೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ. ಏಪ್ರಿಲ್ ನಂತರ 40 ಡಿಗ್ರಿ ಸೆಲ್ಸಿಯಸ್‌ ದಾಟುವುದು ನಿಶ್ಚಿತ ಎಂದು ಬೇಸರ ವ್ಯಕ್ತಪಡಿಸಿದರು.

ರಾಗಿಗುಡ್ಡದ ಸರ್ವೇ ನಂ 112 ರಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಎಂಟು ಎಕರೆ, ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಎಂಟು ಎಕರೆ, ಬೆಂಕಿಪೊಟ್ಟಣ ಕಾರ್ಖಾನೆಗೆ 10 ಎಕರೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಎಂಟು ಎಕರೆ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ 5 ಎಕರೆ, ಗೋಶಾಲೆ ನಿರ್ಮಾಣಕ್ಕೆ 5 ಎಕರೆ ಭೂಮಿ ಮಂಜೂರಾತಿ ಮಾಡಿದ್ದು, ಅದನ್ನು ಜಿಲ್ಲಾಡಳಿತ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ರಾಗಿಗುಡ್ಡ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಜೈವಿಕ ಅರಣ್ಯವಾಗಿ ಅಭಿವೃದ್ಧಿಪಡಿಸಿ ಅದರ ಪರಿಸರವನ್ನು ರಕ್ಷಿಸಬೇಕು. ಗುಡ್ಡದ ಸುತ್ತಲೂ ಶಾಶ್ವತ ಬೇಲಿ ಹಾಕಬೇಕು. ರಾಗಿ ಗುಡ್ಡದ ಪರಿಸರದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಪರಿಸರ ಸ್ನೇಹಿ ಮರಗಿಡಗಳನ್ನು ಬೆಳೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರಾಗಿಗುಡ್ಡದ ಇಎಸ್ಐ ಆಸ್ಪತ್ರೆಯಿಂದ ಜಾಥಾಗೆ ಬಸವ ಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಚಾಲನೆ ನೀಡಿದರು.

ಅಭಿಯಾನದ 4.5 ಕಿ.ಮೀ ಪಾದಯಾತ್ರೆಯಲ್ಲಿ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ರಸ್ತೆಯುದ್ದಕ್ಕೂ ‘ರಾಗಿಗುಡ್ಡ ಉಳಿಸಿ’, ‘ಗುಡ್ಡ ಇರುವುದು ಏರುವುದಕ್ಕೆ ಮಾರುವುದಕ್ಕಲ್ಲ’ ಎಂದು ಘೋಷಣೆ ಕೂಗಿದರು‌.

ಪಾದಯಾತ್ರೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಜೆಡಿಎಸ್ ಪ್ರಮುಖರಾದ ಶಾಂತಾ ಸುರೇಂದ್ರ, ಎಎಪಿ ಅಭ್ಯರ್ಥಿ ನೇತ್ರಾವತಿ, ವಕೀಲ ಕೆ.ಪಿ. ಶ್ರೀಪಾಲ್, ನಾಗೇಶ್, ನವ್ಯಶ್ರೀ, ಶೇಖರ ಗೌಳೇರ್, ಚನ್ನವೀರ ಗಾಮನಕಟ್ಟೆ, ಪರಿಸರ ನಾಗರಾಜ್, ನಾರಾಯಣಪ್ಪ, ಟಿ.ಎಂ. ಚಂದ್ರಪ್ಪ, ಎಸ್. ಶಿವಮೂರ್ತಿ, ಇ.ಬಿ. ಜಗದೀಶ್, ಪಿ.ಡಿ. ಮಂಜಪ್ಪ, ಪಿ. ಶೇಖರಪ್ಪ, ಹುಲಿಮಟ್ಟಿ ಜಯಣ್ಣ, ಎಂ.ಡಿ. ನಾಗರಾಜ್, ಜಿ.ಎನ್. ಪಂಚಾಕ್ಷರಿ, ಕುಮಾರಸ್ವಾಮಿ ಇದ್ದರು.

ಕೋಟ್‌...

ಮನುಷ್ಯನ ಬದುಕಿಗೆ ಆಸ್ಪತ್ರೆ, ಶಾಲೆ, ರಸ್ತೆಗಳು ಮುಖ್ಯವೇ ಆಗಿರಬಹುದು. ಅದೇ ರೀತಿ ಪರಿಸರ ಕೂಡ ಅಷ್ಟೆ ಮುಖ್ಯ.ಅದನ್ನು ಮರೆತು ವರ್ತಿಸಿದರೆ ನಮ್ಮ ನಾಶಕ್ಕೆ ನಾವೇ ಅಡಿಪಾಯ ಹಾಕಿಕೊಂಡಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT