ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಮುಚ್ಚುತ್ತಿದ್ದ ಶಾಲೆಗೆ ಎಸ್‌ಡಿಎಂಸಿ ಕಾಯಕಲ್ಪ

ಒಂದು ಕಾಲದಲ್ಲಿ ಒಂದಂಕಿಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 225...
Last Updated 13 ಡಿಸೆಂಬರ್ 2022, 5:53 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಈ ಶಾಲೆಯ ಯು.ಕೆ.ಜಿ ವಿದ್ಯಾರ್ಥಿಗಳು ಅಂದವಾಗಿ ಇಂಗ್ಲಿಷ್‌ ಬರೆಯಬಲ್ಲರು, ಅಚ್ಚುಕಟ್ಟಾಗಿ ಓದಬಲ್ಲರು. ಇಲ್ಲಿ 7ನೇ ತರಗತಿವರೆಗೆ ಕಲಿತ ಮಕ್ಕಳು ಸಾಧನೆಯ ಹಾದಿಯಲ್ಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ)ಯ ಇಚ್ಛಾಶಕ್ತಿಯಿಂದ ರೂಪುಗೊಂಡಿರುವ ಈ ಶಾಲೆಯ ಪ್ರಾಥಮಿಕ ವಿಭಾಗ ಸರ್ಕಾರಕ್ಕೆ ಸೇರಿದೆ.

ಪಟ್ಟಣದ ಕೋಳಿಕಾಲು ಗುಡ್ಡದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಲ್ಲ ಸವಾಲುಗಳನ್ನು ಮೆಟ್ಟಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ರೂಪುಗೊಂಡಿದೆ. ಮುಚ್ಚುವ ಹಂತದಲ್ಲಿದ್ದ ಶಾಲೆಯಲ್ಲೀಗ 225 ವಿದ್ಯಾರ್ಥಿಗಳು ಓದುತ್ತಿದ್ದಾರೆ.

2009-10ನೇ ಸಾಲಿನಲ್ಲಿ 4 ವಿದ್ಯಾರ್ಥಿಗಳ ದಾಖಲಾತಿಯಿಂದ ಶಾಲೆ ಮುಚ್ಚುವ ಹಂತದಲ್ಲಿತ್ತು. ಅಂದಿನ ಬಿ.ಇ.ಒ. ಪ್ರಕಾಶ್‌ ಸಹಕಾರದೊಂದಿಗೆ ಮನೆಮನೆಗೆ ತೆರಳಿ ಪಾಲಕರಿಗೆ ತಿಳಿಹೇಳಿದ ಎಸ್‌ಡಿಎಂಸಿ ಅಧ್ಯಕ್ಷ ಇಲಿಯಾಜ್, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಶಾಲೆಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು.

2014ರಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಶಾಲಾ ಅಭಿವೃದ್ಧಿಗೆ ₹ 50 ಲಕ್ಷ ನೀಡಿ, ಹೆಚ್ಚುವರಿ ₹ 25 ಲಕ್ಷ ನೀಡುವ ಭರವಸೆ ನೀಡಿದ್ದರು. ಬಳಿಕ ಶಿಕ್ಷಣ ಸಚಿವರಾದ ತನ್ವೀರ್‌ ಸೇಠ್‌ ₹ 25 ಲಕ್ಷ ಅನುದಾನ ನೀಡಿದ್ದರು. ಎಸ್‌ಡಿಎಂಸಿ ಸದಸ್ಯರೇ ಮುಂದೆ ನಿಂತು ಕಟ್ಟಡ ನಿರ್ಮಿಸಿದ್ದರಿಂದ ಮೂರು ಅಂತಸ್ತಿನ ಉತ್ತಮ ಕಟ್ಟಡ ರೂಪುಗೊಂಡಿದೆ. ಶಾಲೆಯ ಆವರಣದಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿರುವುದು ವಿಶೇಷ.

ಶಾಸಕ ಆರಗ ಜ್ಞಾನೇಂದ್ರ ಈಚೆಗೆ ಶಾಲೆಯ ಅಭಿವೃದ್ಧಿಗೆ ₹ 21 ಲಕ್ಷ ಅನುದಾನ ನೀಡಿದ್ದು, ಹೆಚ್ಚುವರಿಯಾಗಿ ಎರಡು ಕೊಠಡಿ ನಿರ್ಮಿಸಲಾಗಿದೆ. ಜೊತೆಗೆ ಎಸ್‌ಡಿಎಂಸಿ ಸದಸ್ಯರು ದಾನಿಗಳ ಸಹಕಾರದಿಂದ ₹ 7 ಲಕ್ಷ ಸಂಗ್ರಹಿಸಿ ಅಟ್ಟಣಿಗೆ, ಗ್ರಿಲ್‌ ಅಳವಡಿಸಿದ್ದಾರೆ. ‌ನಾಲ್ವರು ಕಾಯಂ ಶಿಕ್ಷಕರಿದ್ದು, ಹೆಚ್ಚುವರಿಯಾಗಿ 8 ಜನ ಶಿಕ್ಷಕರನ್ನು ನೇಮಿಸಲಾಗಿದೆ. ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದಿಂದ ನೆರವು ಇಲ್ಲದ ಕಾರಣ ಎಸ್‌ಡಿಎಂಸಿಯೇ ಜವಾಬ್ದಾರಿ ಹೊತ್ತು ಬಿಸಿಯೂಟದ ಸಿಬ್ಬಂದಿ, ಆಯಾಗಳನ್ನು ನೇಮಕ ಮಾಡಿಕೊಂಡು, ಸಂಬಳದ ರೂಪದಲ್ಲಿ ಮಾಸಿಕ ₹ 53,000 ಭರಿಸುತ್ತಿದೆ.

225ಕ್ಕೆ ದಾಖಲಾತಿ ಹೆಚ್ಚಳ: ಪ್ರಸ್ತುತ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 165 ಮತ್ತು ಎಲ್‌ಕೆಜಿ, ಯುಕೆಜಿಯಲ್ಲಿ 60 ಮಕ್ಕಳು ಸೇರಿ ಒಟ್ಟು 225 ವಿದ್ಯಾರ್ಥಿಗಳಿದ್ದಾರೆ. ಶೇ 40ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು, ಪಾಲಕರು ಹೆಚ್ಚಿನ ಶುಲ್ಕ ಭರಿಸಲು ಶಕ್ತರಾಗಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ದತ್ತು ಪಡೆದಿದೆ. ಇದಕ್ಕೆ ‘ಪೀಸ್‌ ವೆಲ್‌ಫೇರ್‌ ಟ್ರಸ್ಟ್’ ಸಹಕಾರ ನೀಡುತ್ತಿದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಫರ್ವೇಜ್‌ ಅಹಮದ್.

ಕನ್ನಡಕ್ಕೆ ಮೊದಲ ಆದ್ಯತೆ: ಅಲ್ಪಸಂಖ್ಯಾತ ಕುಟುಂಬದ ವಿದ್ಯಾರ್ಥಿಗಳ ಮಾತೃ ಭಾಷೆ ಉರ್ದು ಆದರೂ ಎಲ್ಲಾ
ವಿದ್ಯಾರ್ಥಿಗಳು ಶಾಲೆಯಲ್ಲಿ ಕನ್ನಡ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇದ್ದು, ಆಡಳಿತ ಭಾಷೆ ಆಗಿರುವುದರಿಂದ ಕನ್ನಡ ಮಾತನಾಡುವಂತೆ ಸೂಚಿಸಲಾಗಿದೆ.

ಶಾಲೆಯ ಅಭಿವೃದ್ಧಿಗಾಗಿ ಎಸ್‌ಡಿಎಂಸಿ ಶ್ರಮಿಸುತ್ತಿದೆ. ಹೆಚ್ಚುವರಿ ಕೊಠಡಿಗಳ ಅಗತ್ಯ ಇದೆ. ಶೌಚಾಲಯ ವ್ಯವಸ್ಥೆ ಸರಿ ಇಲ್ಲ. ಸರ್ಕಾರ ಅನುದಾನ ಕಲ್ಪಿಸಿದರೆ ಅನುಕೂಲ.

–ಫರ್ವೇಜ್‌ ಅಹಮದ್‌ ಜಿ, ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT