ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮವನ್ನು ಅಧ್ಯಾತ್ಮದ ಹಿನ್ನೆಲೆಯಲ್ಲಿ ನೋಡಿ

ಪಂಚ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಿದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ
Last Updated 19 ಮೇ 2022, 2:14 IST
ಅಕ್ಷರ ಗಾತ್ರ

ಸಾಗರ: ಧರ್ಮವನ್ನು ಅಧ್ಯಾತ್ಮದ ಹಿನ್ನೆಲೆಯಲ್ಲಿ ನೋಡಬೇಕಿದೆ. ಆಗ ಧರ್ಮದ ವ್ಯಾಪ್ತಿ ಎಷ್ಟು ಹಿರಿದು ಎಂಬುದರ ಅರಿವಾಗುತ್ತದೆ. ಜೈನ ಧರ್ಮ ವಿಶಾಲವಾದ ಅಧ್ಯಾತ್ಮದ ನೆಲೆಗಟ್ಟನ್ನು ಹೊಂದಿದೆ ಎಂದು ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿರುವ ಆದಿನಾಥಸ್ವಾಮಿ ಜೈನ ಬಸದಿಯಲ್ಲಿ ಬುಧವಾರ ಆರಂಭಗೊಂಡ ಆದಿನಾಥ ತೀರ್ಥಂಕರರ ಹಾಗೂ ಮಾನಸ್ತಂಭೋಪರಿ ಚತುರ್ಮುಖಿ ಜಿನಬಿಂಬ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿಗೆ ಶಾಂತಿ, ಅಹಿಂಸೆಯ ಸಂದೇಶವನ್ನು ಸಾರಿದ ಶ್ರೇಯಸ್ಸು ಜೈನ ಧರ್ಮಕ್ಕೆ ಸಲ್ಲುತ್ತದೆ. ಎಲ್ಲಿ ಅಹಿಂಸೆಯ ಭಾವನೆ ಇರುತ್ತದೆಯೊ ಅಲ್ಲಿ ಶಾಂತಿ ನೆಲೆಸಿರುತ್ತದೆ ಎಂಬ ಜೈನ ಧರ್ಮದ ಸಿದ್ಧಾಂತ ಇಂದು ಹೆಚ್ಚು ಪ್ರಸ್ತುತವಾಗಿದೆ. ಸರಳತೆಗೂ ಕೂಡ ಜೈನ ಧರ್ಮ ಒತ್ತು ನೀಡಿದೆ ಎಂದರು.

ಪರಿಶುದ್ಧವಾದ ಮನಸ್ಸಿನಿಂದ ಕೈಗೊಳ್ಳುವ ಧಾರ್ಮಿಕ ಕಾರ್ಯದಿಂದ ಸಾಕ್ಷಾತ್ಕಾರ ಪ್ರಾಪ್ತವಾಗುತ್ತದೆ. ಸದಾ ಚಂಚಲತೆಯಲ್ಲಿರುವ ಮನಸ್ಸನ್ನು ಸರಿದಾರಿಗೆ ತರಲು, ದೃಢ ಚಿತ್ತವನ್ನು ಹೊಂದಲು ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಾನ್ನಿಧ್ಯ ವಹಿಸಿದ್ದ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು, ‘ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು ಎಂಬುದು ಜೈನ ಧರ್ಮದ ಪ್ರಮುಖ ಆಶಯ. ಯಾವುದೇ ಜೀವಿಗಳಿಗೆ ನೋವು ಉಂಟು ಮಾಡಬಾರದು ಎಂಬ ಪ್ರಕೃತಿದತ್ತವಾದ ನಿಯಮವನ್ನೇ ಜೈನ ಧರ್ಮ ಪ್ರತಿಪಾದಿಸಿದೆ. ಮನುಷ್ಯ ಕುಲದ ಒಳಿತಿಗೆ ಇದನ್ನು ಪಾಲಿಸುವುದು ಅಗತ್ಯ’ ಎಂದರು.

ಪಂಚ ಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಹೊಯ್ಸಳ ಅಧ್ಯಕ್ಷತೆ ವಹಿಸಿದ್ದರು. ವಡನಬೈಲ್ ಕ್ಷೇತ್ರದ ಧರ್ಮದರ್ಶಿ ಎಚ್.ಎಂ. ವೀರರಾಜಯ್ಯ ಜೈನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ, ಪ್ರಮುಖರಾದ ಪಾರ್ಶ್ವನಾಥ ವಳಗೆರೆ, ರಾಜಕುಮಾರ್ ಜೈನ್, ಎಂ.ಪಿ. ಲೋಕರಾಜ್, ಬಬಿತಾ ಪ್ರೇಮ್ ಕುಮಾರ್, ಡಾ. ರಾಜೇಂದ್ರ ಕುಮಾರ್, ಎಂ.ಸಿ. ಅಶೋಕ್ ಕುಮಾರ್, ಹೊಸಳ್ಳಿ ಪದ್ಮರಾಜಯ್ಯ, ಎಂ.ಎನ್. ವಿಜಯೇಂದ್ರ, ಡಾ.ಮಹಾವೀರ ಜೈನ್, ದಿವಾಕರ ಸಿಂಘೇ ಇದ್ದರು.

ರಾಜು ಪಂಡಿತ್ ಪ್ರಾರ್ಥಿಸಿದರು. ಯಶೋಧರ ಸ್ವಾಗತಿಸಿದರು. ನಾಗರಾಜ್ ವಂದಿಸಿದರು. ಕುಮುದಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT