ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಂ; ಪೌರಕಾರ್ಮಿಕರ ಆಗ್ರಹ

ಇಂದಿನಿಂದ ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ
Last Updated 2 ಜುಲೈ 2022, 3:16 IST
ಅಕ್ಷರ ಗಾತ್ರ

ಶಿವಮೊಗ್ಗ: ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮಹಾನಗರ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು ಬೇಡಿಕೆ ಈಡೇರಿಸದಿದ್ದರೆ ಶನಿವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ (ಹಳೆ ಜೈಲು ಆವರಣ) ಹಾಗೂ ತಾಲ್ಲೂಕುವಾರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನೇರಪಾವತಿ ಪೌರ ಕಾರ್ಮಿಕರು, ಹೊರಗುತ್ತಿಗೆ ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಹೆಲ್ಪರ್ಸ್ ಹಾಗೂ ಮನೆಮನೆ ಕಸ ಸಂಗ್ರಹಿಸುವವರು ಸೇರಿ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ನೇರಪಾವತಿ ಪಾವತಿ ಪೌರ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರಿದ್ದು, ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹ, ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರಲ್ಲದೇ, ಈ ಸೌಲಭ್ಯಗಳನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಕಾಯಂ ಕಾರ್ಮಿಕರಿಗೆ ಸೀಮಿತ ಮಾಡಿ ಶೇ 85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಕೂಡಲೇ ನೇರಪಾವತಿ ಪೌರ ಕಾರ್ಮಿಕರನ್ನು ಗೃಹ ಭಾಗ್ಯ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

60 ವರ್ಷ ಸೇವೆ ಪೂರ್ಣಗೊಳಿಸಿ ನಿವೃತ್ತರಾಗುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ತಲಾ ₹10 ಲಕ್ಷ ಪರಿಹಾರ ಹಾಗೂ ಮಾಸಿಕ ₹5 ಸಾವಿರ ನಿವೃತ್ತಿ ವೇತನ ನೀಡಬೇಕು. ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು. ಆರೋಗ್ಯ ಕಾರ್ಡ್ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಸಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್, ಜಿಲ್ಲಾ ಖಜಾಂಚಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಎಸ್.ನಾಗರಾಜ್, ರವಿಕಿರಣ್, ಸುದೀಪ್, ಗಣೇಶ್, ಶಿವರಾಜ್, ಕಿರಣ್, ಡಿಎಸ್ಎಸ್ ಗುರುಮೂರ್ತಿ ಇದ್ದರು.

ಸಾಗರ: ಸೇವೆ ಕಾಯಂಗೊಳಿಸಲು ಒತ್ತಾಯ
ಸಾಗರ:
ಇಲ್ಲಿನ ನಗರಸಭೆಯ ಹೊರಗುತ್ತಿಗೆ ಪೌರ ಕಾರ್ಮಿಕರು ಹಾಗೂ ನೌಕರರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಶುಕ್ರವಾರದಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿದ್ದಾರೆ.

ಪ್ರಮುಖರಾದ ಎಂ.ನಾಗರಾಜ್, ತಂಗರಾಜ್, ಆನಂದ ಬಾಳೆಕೊಪ್ಪ, ಚೇತನಾ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಕಾಮರಾಜ ಎ.ಗೌರವಾಧ್ಯಕ್ಷ ಎಂ.ಮುತ್ತು, ದೇವರಾಜ್, ನಾಗರಾಜ್, ಮುರುಗೇಶ್, ಸತೀಶ್, ರಾಘವೇಂದ್ರ, ಸಿ.ಮೂರ್ತಿ, ವೀರಾ, ಚೆಲುವಿ, ಸುಲೋಚನಾ, ಮಹೇಶ್, ಸುರೇಶ್ ಇದ್ದರು.

ನೌಕರರ ಪ್ರತಿಭಟನೆ ಕಾಂಗ್ರೆಸ್‌ ಬೆಂಬಲ
ಶಿಕಾರಿಪುರ:
ಕಾಯಂ ನೇಮಕಾತಿಗೆ ಒತ್ತಾಯಿಸಿ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಪುರಸಭೆ ಹೊರಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆ ನೌಕರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನೌಕರರ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಹಾಗೂ ಪುರಸಭೆ ಸದಸ್ಯರು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಹೊರಗುತ್ತಿಗೆ ನೌಕರರು ಪುರಸಭೆ ಅಧ್ಯಕ್ಷೆ ರೇಖಾಬಾಯಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಸಂಘದ ಅಧ್ಯಕ್ಷೆ ಚಿನ್ನಕ್ಕ ಶ್ರೀಧರ್, ಪದಾಧಿಕಾರಿಗಳಾದ ಶ್ರೀನಿವಾಸ್, ನವೀನ್ ಕುಮಾರ್, ಚೌಡಯ್ಯ, ರಂಗನಾಥ, ಸುಭಾಷ, ಭೀಮ, ರವಣಮ್ಮ, ಸರೋಜಮ್ಮ ಉಪಸ್ಥಿತರಿದ್ದರು.

ಪೌರಕಾರ್ಮಿಕರ ಮನವೊಲಿಕೆ
ಭದ್ರಾವತಿ:
ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.

ನಗರಸಭೆ ಮುಂಭಾಗದ ವಿನೋಬಾಭಾವೆ ಪಾರ್ಕ್‌ನಲ್ಲಿ ಧರಣಿನಿರತ ಗುತ್ತಿಗೆ ಪೌರಕಾರ್ಮಿಕ ಮುಖಂಡರು, ಸರ್ಕಾರ ಕೂಡಲೇ ತಮ್ಮನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಧರಣಿನಿರತರ ಮನವೊಲಿಸಿದರು. ‘ಸರ್ಕಾರ ಇನ್ನೆರಡು ದಿನಗಳಲ್ಲಿ ಈ ಕುರಿತು ನಿರ್ಣಯ ಅಂಗೀಕಾರ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗುವುದು’ ಎಂದು ಧರಣಿನಿರತರು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT