ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿವೃಷ್ಟಿಯಿಂದ ಬೆಳೆ ನಷ್ಟ; ಪರಿಹಾರ ನೀಡಲು ಒತ್ತಾಯ

ಕೊಳೆ ರೋಗ ತಗುಲಿದ, ಉದುರಿದ ಅಡಿಕೆ ಚೆಲ್ಲಿ ಪ್ರತಿಭಟನೆ ನಡೆಸಿದ ಬೆಳೆಗಾರರು
Published : 29 ಆಗಸ್ಟ್ 2024, 16:06 IST
Last Updated : 29 ಆಗಸ್ಟ್ 2024, 16:06 IST
ಫಾಲೋ ಮಾಡಿ
Comments

ಸಾಗರ: ಅತಿವೃಷ್ಟಿಯಿಂದ, ಕೊಳೆರೋಗದಿಂದ ನಷ್ಟ ಅನುಭವಿಸಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಕೊಳೆತ, ಉದುರಿದ ಅಡಿಕೆ ಚೆಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರಸಕ್ತ ವರ್ಷ ಈ ಪ್ರಾಂತ್ಯದ ಸಾಗರ, ಸೊರಬ, ಹೊಸನಗರ ತಾಲ್ಲೂಕುಗಳಲ್ಲಿ ಮಳೆಗಾಲದಲ್ಲಿ ವಾಡಿಕೆಗಿಂತ ಶೇ 50ಕ್ಕೂ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಮೂರು ತಾಲ್ಲೂಕುಗಳಲ್ಲಿ ಶೇ 75ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಗೆ ಹಾನಿ ಉಂಟಾಗಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

ಅಡಿಕೆ ತೋಟಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಳೆರೋಗ ತಗುಲಿ ಬೆಳೆ ನಷ್ಟವಾಗಿರುವುದು ಒಂದೆಡೆಯಾದರೆ, ಅತಿಯಾದ ಮಂಗನ ಕಾಟದಿಂದ ಬೆಳೆ ನಾಶವಾಗುತ್ತಿದೆ. 2013– 14ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬೆಳೆ ನಷ್ಟ ಅನುಭವಿಸಿದ ಬೆಳೆಗಾರರಿಗೆ ಪರಿಹಾರ ವಿತರಿಸಿತ್ತು. ಅದೇ ಮಾದರಿಯಲ್ಲಿ ಪ್ರಸಕ್ತ ವರ್ಷವೂ ಶೀಘ್ರ ಪರಿಹಾರ ಘೋಷಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಸೊರಬ ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಕೊಳೆರೋಗ ಬರುವುದೇ ಅಪರೂಪವಾಗಿತ್ತು. ಆದರೆ, ಈ ವರ್ಷ ಆ ಭಾಗದಲ್ಲೂ ಕೊಳೆರೋಗ ಕಾಣಿಸಿಕೊಂಡಿದೆ. ಕೇಂದ್ರ ಸರ್ಕಾರ ಕೂಡ ಅಡಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ಮೊದಲ ಹಂತದಲ್ಲಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಈ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಬಳಿ ಬೆಳೆಗಾರರ ನಿಯೋಗವನ್ನು ಕೊಂಡೊಯ್ದು ಅವರ ಕಷ್ಟಗಳ ಬಗ್ಗೆ ಮನವರಿಕೆ ಮಾಡಬೇಕು. ಸರ್ಕಾರ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಪ್ರಮುಖರಾದ ಯು.ಎಚ್.ರಾಮಪ್ಪ, ಕೆ.ಸಿ.ದೇವಪ್ಪ, ಮಲ್ಲಿಕಾರ್ಜುನ ಹಕ್ರೆ, ಜಯಪ್ರಕಾಶ್ ತಲಕಾಲುಕೊಪ್ಪ, ರಾಜೇಂದ್ರ ಖಂಡಿಕಾ, ಚೇತನ್ ರಾಜ್ ಕಣ್ಣೂರು, ದಿನೇಶ್ ಬರದವಳ್ಳಿ, ಆರ್.ಎಸ್.ಗಿರಿ, ವೆಂಕಟಗಿರಿ, ಪ್ರಸನ್ನ ಕೆರೆಕೈ, ಅ.ಪು.ನಾರಾಯಣಪ್ಪ, ಈಳಿ ಶ್ರೀಧರ್, ರವಿಕುಮಾರ್ ಗೌಡ, ಎಚ್.ಎಂ.ತಿಮ್ಮಪ್ಪ, ಕೆ.ಎನ್.ಶ್ರೀಧರ್, ಹು.ಭಾ.ಅಶೋಕ್, ಗೌತಮ್ ಕೆ.ಎಸ್, ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT