ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಹಂಬಲಿಸದ ಮೇರುವ್ಯಕ್ತಿ ಶಂಕರನಾರಾಯಣ

ಬಹುಮುಖ ಪ್ರತಿಭೆಯ ಜಾನಪದ ವಿದ್ವಾಂಸ, ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು
Last Updated 13 ಮೇ 2022, 2:19 IST
ಅಕ್ಷರ ಗಾತ್ರ

ಶಿವಮೊಗ್ಗ: ಅದು 1973. ಭದ್ರಾನದಿ ದಡದ ಜಲಾನಯನ ಪ್ರದೇಶವಾದ ಸಿಂಗನಮನೆ (ಬಿ.ಆರ್.ಪ್ರಾಜೆಕ್ಟ್‌) ಗ್ರಾಮ ಪರಿಸರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಆರಂಭವಾಯಿತು. ಆ ಕೇಂದ್ರದ ಸ್ಥಾಪಕ (originator) ಮುಖ್ಯಾಧಿಕಾರಿಯಾಗಿ ಡಾ.ತೀ.ನಂ.ಶಂಕರನಾರಾಯಣ, ಸ್ಥಾಪಕ ಅಧ್ಯಾಪಕರಾಗಿ ಡಾ.ಶ್ರೀಕಂಠ ಕೂಡಿಗೆ ನೇಮಕಗೊಂಡರು. ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದ ಆ ಹೊತ್ತಿನಲ್ಲಿ ಅವರಿಬ್ಬರೂ ಬಹಳ ಪರಿಶ್ರಮದಿಂದ ಕೇಂದ್ರವನ್ನು ಕಟ್ಟಿ ಬೆಳೆಸಿದರು. ಅನಂತರದಲ್ಲಿ ಸೇರ್ಪಡೆಗೊಂಡ ಅಧ್ಯಾಪಕ ವರ್ಗವೂ ಅವರು ಹಾಕಿದ ಬುನಾದಿಯನ್ನು ಬಲಪಡಿಸಿತು. ಅದರ ಫಲವಾಗಿ ಕುವೆಂಪು ವಿಶ್ವವಿದ್ಯಾಲಯ ರೂಪುಗೊಂಡಿದೆ.

ಶಂಕರನಾರಾಯಣ ಮೂಲತಃ ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ತೀರ್ಥಪುರದವರು (ಸೆಪ್ಟೆಂಬರ್‌27,1947 ). ಮಧ್ಯಮವರ್ಗ ಕುಟುಂಬದ ಹಿರಿಯ ಮಗನಾಗಿ, ಬಡತನದ ಮಧ್ಯೆ ಒಡಹುಟ್ಟಿದವರ ಬದುಕನ್ನು ಜವಾಬ್ದಾರಿಯುತವಾಗಿ ರೂಪಿಸಿದವರು. ಅಂದಿನ ಕಾಲಕ್ಕೆ ಅಪರೂಪವೆನಿಸಿದ್ದ ಮಂತ್ರಮಾಂಗಲ್ಯ ವಿವಾಹವನ್ನು ಎ.ಎನ್.ಮೂರ್ತಿರಾವ್ ಅಧ್ಯಕ್ಷತೆಯಲ್ಲಿ ಮಾಡಿಕೊಂಡು ಸರಳ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಜಾತ್ಯತೀತ ವ್ಯವಸ್ಥೆಯ ಬಗ್ಗೆ ಒಲವುಳ್ಳವರಾಗಿದ್ದರೂ, ಕಟ್ಟಾ ಸಂಪ್ರದಾಯಸ್ಥರ ನಿರ್ಧಾರಗಳನ್ನು ದಿಟ್ಟವಾಗಿ ಎದುರಿಸಲು ಒಮ್ಮೊಮ್ಮೆ ಹಿಂಜರಿಯುತ್ತಿದ್ದರು. ಅದು ಅವರ ಸಾತ್ವಿಕ ಸ್ವಭಾವ; ಸೌಜನ್ಯಶೀಲ ವ್ಯಕ್ತಿತ್ವದ ಪರಿಮಿತಿಯಾಗಿತ್ತು. ಮೊದಲಿನಿಂದಲೂ ಸಾಹಿತ್ಯಕ ವಾತಾವರಣದಲ್ಲಿ, ತೀನಂಶ್ರೀ, ಡಿ.ಎಲ್.ಎನ್, ಪುತಿನ ಮತ್ತಿತರ ವಿದ್ವಾಂಸರ ಸನಿಹದಲ್ಲಿ ಬೆಳೆದ ಕಾರಣ ಬೋಧನೆ ಮತ್ತು ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿತ್ತು.

ಕನ್ನಡ ಹಾಗೂ ಇಂಗ್ಲಿಷ್ ಭಾಷೆ, ಸಾಹಿತ್ಯದ ಅಪಾರ ಓದಿನಿಂದ ಗಳಿಸಿಕೊಂಡಿದ್ದ ವಿದ್ವತ್ತು, ಜಾನಪದ ಅಭಿರುಚಿಯಿಂದಾದ ಕ್ಷೇತ್ರಾನುಭವಗಳಿಂದ ಅವರು ಭಾರತೀಯ ಜಾನಪದ ತಜ್ಞರಲ್ಲಿ ಬಹುಮುಖ್ಯರೆನಿಸಿದ್ದಾರೆ. ಆ ಕಾರಣದಿಂದಾಗಿ ಅವರು ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಪರ್ಕವನ್ನು ಗಳಿಸಲು ಸಾಧ್ಯವಾಯಿತು. ಅವರು ಮಾಡಿದ ಸಾಹಿತ್ಯ ಸಂಬಂಧಿ ಬರವಣಿಗೆ ಕಡಿಮೆ ಎನಿಸಿದರೂ, ಜಾನಪದ ಗ್ರಂಥಗಳು ಮೌಲಿಕವಾದವು. ‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’ ಕನ್ನಡದಲ್ಲಿ ಪ್ರಕಟಗೊಂಡ ಮೊಟ್ಟಮೊದಲ ಬುಡಕಟ್ಟು ಅಧ್ಯಯನ. ಇದು ಅವರ ಡಾಕ್ಟರೇಟ್ ಮಹಾಪ್ರಬಂಧ.'The Epic of Junjappa Text and Performence' , ' ಜಾನಪದ ಮೈಲುಗಲ್ಲುಗಳು' 'ಕೊಂಡ ಹಾಯುವ ಸಂಪ್ರದಾಯ' ’ಫಿನ್ಲೆಂಡಿನ ಜಾನಪದ ವಿದ್ವಾಂಸರು' ಅವರ ಮಹತ್ವದ ಕೃತಿಗಳು.

ಬೋಧನೆ, ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅವರು ಜಾನಪದೀಯವಾದ ಹಲವಾರು ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರೊ.ಆಲನ್ ಡೆಂಡಸ್, ಡಾ.ಪೀಟರ್.ಜೆ.ಕ್ಲಾಸ್‌ರಂಥ ಅಂತರಾಷ್ಟ್ರೀಯ ವಿದ್ವಾಂಸರ ಸಂಪರ್ಕಲ್ಲಿದ್ದುಕೊಂಡು ಕ್ಷೇತ್ರಕಾರ್ಯ ನಡೆಸಿ, ಕನ್ನಡ ಜಾನಪದ ಅಧ್ಯಯನಕ್ಕೆ ಅಗತ್ಯವಾದ ಪ್ರಮೇಯಗಳನ್ನು ಸಿದ್ಧಮಾಡಿಕೊಟ್ಟರು. ಅದೇ ಉದ್ದೇಶದಿಂದಲೇ ಅವರು ಫಿನ್ಲೆಂಡ್, ಸ್ವೀಡನ್‌ಗೆ ಭೇಟಿ ನೀಡಿ ಅಧ್ಯಯನ ನಿರತರಾಗಿದ್ದರು.
ಅವರು ನಡೆಸಿದ ‘ಜಾನಪದ ಪರಾಮನೋವೈಜ್ಞಾನಿಕ ವಿಶ್ಲೇಷಣೆ' ಒಂದು ಅಪೂರ್ವ ಯೋಜನೆ. ಯಾವುದೇ ಶೈಕ್ಷಣಿಕ ಕೆಲಸಗಳನ್ನು ನಿಷ್ಠೆಯಿಂದ ಪೂರೈಸುತ್ತಿದ್ದ ಅವರು ' ಕನ್ನಡಭಾರತಿ' ನಿರ್ದೇಶಕರಾಗಿದ್ದಾಗ ಸ್ಯಾಪ್ (SAP) ಯೋಜನೆಯ ಸಂಯೋಜಕರಾಗಿ ಮಾಡಿದ ಕೆಲಸ ಅವಿಸ್ಮರಣೀಯವಾದದ್ದು. ಆ ಕಾರ್ಯವನ್ನು ಮುಂದಿನವರು ಬದ್ಧತೆಯಿಂದ ನಿರ್ವಹಿಸದ ಕಾರಣ ಯೋಜನೆಯೇ ರದ್ದಾದದ್ದು ದೊಡ್ಡ ವಿಪರ್ಯಾಸ.

ಚ್ಯುತಿ ಬಾರದಂತೆ ಕೆಲಸದ ನಿರ್ವಹಣೆ

ಡಾ.ತೀ.ನಂ.ಶಂಕರನಾರಾಯಣ ಅವರು ಎಂದೂ ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ.ಅನಿವಾರ್ಯವಾದ ಆಡಳಿತಾತ್ಮಕ ಕೆಲಸಗಳನ್ನು ಸ್ವಲ್ಪ ಹಿಂಜರಿಕೆಯಿಂದ, ಅಳ್ಳೆದೆಯಿಂದಲೇ ಒಪ್ಪಿಕೊಳ್ಳುತ್ತಿದ್ದರು. ಎಲ್ಲಾದರೂ ಆಕಸ್ಮಿಕವಾಗಿ ಲೋಪಗಳು ಸಂಭವಿಸಿದರೆ ವ್ಯಕ್ತಿತ್ವಕ್ಕೆ ಚ್ಯುತಿ ಬಂದೀತೆಂಬ ಅಳುಕು ಅವರಲ್ಲಿ ಇರುತ್ತಿತ್ತು. ಈ ಮಧ್ಯೆಯೂ ಅವರು ಅಕಾಡಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸದಸ್ಯರಾಗಿ, ಕಲಾನಿಕಾಯದ ಡೀನ್‌, ಪ್ರಸಾರಾಂಗದ ನಿರ್ದೇಶಕರಾಗಿ ಗುರುತರ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು.

ಎಲ್ಲಕ್ಕಿಂತ ಮಿಗಿಲಾಗಿ ಅವರು ಮಾನವೀಯ ಅಂತಃಕರಣದ ವ್ಯಕ್ತಿಯಾಗಿ ಹಲವಾರು ವಿದ್ಯಾರ್ಥಿಗಳ ಗೌರವವನ್ನು ಸಂಪಾದಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆಪತ್ಕಾಲದಲ್ಲಿ ಉದಾರವಾಗಿ ಸಹಾಯ ಮಾಡಿದ್ದನ್ನು ನಾನು ಪ್ರತ್ಯಕ್ಷ ಗಮನಿಸಿದ್ದೇನೆ. ಪ್ರತಿಫಲಾಪೇಕ್ಷೆ ಇಲ್ಲದ ದೊಡ್ಡ ಮನಸ್ಸಿನ ವ್ಯಕ್ತಿ. ಕೆಲವೊಮ್ಮೆ ತಿಳಿಯದೆ ಅಪಾತ್ರರಿಗೆ ಅನುಕೂಲ ಮಾಡಿದೆನೆಂದು ನೊಂದುಕೊಂಡದ್ದೂ ಉಂಟು. ಈ ಬಗೆಯ ತುಂಬು ವ್ಯಕ್ತಿತ್ವದ ಅವರಿಗೆ ಸಕಾಲದಲ್ಲಿ ಸಲ್ಲಬೇಕಾದ ಗೌರವಗಳು ದೊರೆಯಲಿಲ್ಲ.'ಜಾನಪದ ತಜ್ಞ ಪ್ರಶಸ್ತಿ' 'ಜಾನಪದ: ಸಮೀಕ್ಷೆ- ವಿಶ್ಲೇಷಣೆ' ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಸಂದಿದೆ. ಯಾರನ್ನೂ ಓಲೈಸಿ ಬಾಳದೆ, ತನ್ನ ಶ್ರಮದ ಫಲವನ್ನು ಅನುಭವಿಸುತ್ತ, ಅಂತರಾಳದ ನೋವನ್ನು ನುಂಗುತ್ತಲೇ ಲೋಕವಿದಾಯವನ್ನು ಹೇಳಿದ ಅವರಿಗೆ ಎಲ್ಲರ ಪರವಾಗಿ ಅಂತಿಮ ನಮನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT