ಶಿಕಾರಿಪುರ: ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಕ್ರೀಡಾ ಚಟುವಟಿಕೆ ಸಹಕಾರಿ ಎಂದು ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ದೈಹಿಕ ವಿಭಾಗ ನಿರ್ದೇಶಕ ಪ್ರೊ.ಎನ್.ಡಿ. ವಿರೂಪಾಕ್ಷಪ್ಪ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2023-24ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಜುಡೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಬೌದ್ಧಿಕವಾಗಿ ಮಾತ್ರ ಸದೃಢರಾದರೆ ಸಾಲದು, ದೈಹಿಕವಾಗಿಯೂ ಸದೃಢರಾಗಬೇಕು. ಕೋವಿಡ್ ನಂತರ ಆರೋಗ್ಯದ ಮಹತ್ವ ಜನರಿಗೆ ಅರಿವಾಗಿದೆ. ಆ ಬಳಿಕ, ಕ್ರೀಡೆ ಹಾಗೂ ಯೋಗ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕಾಲೇಜಿನಲ್ಲಿ ಹಲವು ವರ್ಷಗಳಿಂದ ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಪಂದ್ಯಾವಳಿ ಆಯೋಜಿಸಲಾಗುತ್ತಿದೆ’ ಎಂದು ಅವರು ಶ್ಲಾಘಿಸಿದರು.
ಪಂದ್ಯಾವಳಿ ಆಯೋಜಿಸಲು ವಿಶ್ವವಿದ್ಯಾಲಯ ಕಾಲೇಜಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಮುಂದಾಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಶೇಖರ್ ಮನವಿ ಮಾಡಿದರು.
ಜುಡೋ ಪಂದ್ಯಾವಳಿ ಸಂಘಟನಾ ಕಾರ್ಯದರ್ಶಿ ಡಾ.ಎ.ಬಿ. ಅನಿಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಆರ್.ಕೆ. ವಿನಯ್, ಐಕ್ಯೂಐಸಿ ಸಂಯೋಜಕ ಡಾ.ಅಜಯ್, ತೀರ್ಪುಗಾರ ಡಿ.ಬಿ. ಮಿಥುನ್, ಪ್ರೊ.ಡಾ.ಕುಂಸಿ ಉಮೇಶ್, ಸಹ ಪ್ರಾಧ್ಯಾಪಕ ಸುಮಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ರೋಹನ್ ಡಿಕೋಸ್ಟಾ ಆಯನೂರು, ಜಯಕೀರ್ತಿ ಶಿವಮೊಗ್ಗ , ವಸಂತಕುಮಾರ್ ತರೀಕೆರೆ, ಶಿರಾಳಕೊಪ್ಪ ನಾರಾಯಣ್, ಉಪನ್ಯಾಸಕರಾದ ಸುಧೀರ್, ಸುನೀಲ್, ಈಶ್ವರ್, ಹಿರಿಯ ವಿದ್ಯಾರ್ಥಿ ವಿನಯ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.