ಶಿಕಾರಿಪುರ: ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿದ ಪರಿಣಾಮ ರೈತರು ಸಹಜವಾಗಿಯೇ ಹರ್ಷಗೊಂಡಿದ್ದು, ಭತ್ತ ನಾಟಿ ಕಾರ್ಯ ಚುರುಕುಗೊಂಡಿದೆ.
ಮಲೆನಾಡು ಹಾಗೂ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದ ಪರಿಣಾಮ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಗಳು ಭರ್ತಿಯಾಗಿ, ಕೋಡಿ ಹರಿದಿವೆ. ಈ ಜಲಾಶಯಗಳು ಅಂದಾಜು 10,000 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸಲು ಸನ್ನದ್ಧವಾಗಿವೆ.
ಎರಡು ಜಲಾಶಯಗಳ ನೀರು ನಾಲೆಗಳ ಮೂಲಕ ಹರಿಯುತ್ತಿದೆ. ತಾಲ್ಲೂಕಿನ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಕೆಲವು ಗ್ರಾಮಗಳ ಸಮೀಪದ ಕೃಷಿ ಭೂಮಿಯಲ್ಲಿ ಅಚ್ಚುಕಟ್ಟು ಭಾಗದ ರೈತರು ನಾಟಿ ಕಾರ್ಯ ನಡೆಸಲು ಮುಂದಾಗಿದ್ದು, ಭತ್ತದ ಸಸಿಮಡಿ ಸಿದ್ಧಗೊಳಿಸಿದ್ದಾರೆ. ಕೆಲ ರೈತರು ನಾಟಿ ಕಾರ್ಯಕ್ಕೆ ಟ್ರ್ಯಾಕ್ಟರ್‌ಗಳ ಮೂಲಕ ಕೃಷಿ ಭೂಮಿ ಸಿದ್ಧಗೊಳಿಸುತ್ತಿದ್ದ ದೃಶ್ಯ ಕಂಡು ಬಂದರೆ, ಬಹುತೇಕ ರೈತರು ನಾಟಿ ಕಾರ್ಯ ಮಾಡುತ್ತಿರುವ ದೃಶ್ಯ ತಾಲ್ಲೂಕಿನ ಕೃಷಿ ಭೂಮಿಗಳಲ್ಲಿ ಕಂಡುಬರುತ್ತಿದೆ.
ಅಂಜನಾಪುರ ಜಲಾಶಯ ಭರ್ತಿಯಾಗಿರುವುದು ಭತ್ತ ಬೆಳೆಯಲು ಅನುಕೂಲವಾಗಿದೆ. ಜಲಾಶಯದ ನೀರು ಪೋಲಾಗದಂತೆ ತಡೆಗಟ್ಟಲು ಅಂಜನಾಪುರ ಜಲಾಶಯ ಹಾಗೂ ನಾಲೆಗಳ ಹೂಳೆತ್ತಬೇಕು. ನಾಲೆಗಳ ಸ್ವಚ್ಛತಾ ಕಾರ್ಯಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಚ್ಚುಕಟ್ಟು ರೈತರು ಒತ್ತಾಯಿಸಿದರು.
ಮೆಕ್ಕೆಜೋಳ ಬೆಳೆಗಾರರ ಆತಂಕ: ಜುಲೈ ತಿಂಗಳಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆ ಸುರಿದ ಪರಿಣಾಮ ಮೆಕ್ಕೆಜೋಳ ಬೆಳೆದ ಭೂಮಿ ಜೌಗು ಹಿಡಿದಿದ್ದು, ಮೆಕ್ಕೆಜೋಳದ ಬೆಳವಣಿಗೆ ಹಂತ ಕುಂಠಿತಗೊಂಡಿದೆ. ಈಗಾಗಲೇ ಮೆಕ್ಕೆಜೋಳ ಬೆಳೆ ಹೂವಾಡುವ ಹಂತ ತಲುಪಿರುವುದರಿಂದ ಬೆಳೆಯ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಳೆ ವಿಮೆ ಮಾಡಿಸಲು ರೈತರಿಗೆ ಸಲಹೆ
‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರಸ್ತುತ ಭತ್ತದ ಬೆಳೆ ನಾಟಿ ಕಾರ್ಯ ಮಾಡಲು ಪೂರಕ ವಾತಾವರಣವಿದೆ. ರೈತರು ಹಿಂದೇಟು ಹಾಕದೇ ಭತ್ತ ನಾಟಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಭತ್ತ ಬೆಳೆಯುವವರು ಆಗಸ್ಟ್ 16ರೊಳಗೆ ಬೆಳೆ ವಿಮೆ ಮಾಡಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ತಿಳಿಸಿದರು.
‘ಮೆಕ್ಕೆಜೋಳ ಬೆಳೆ ನಷ್ಟದ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸುತ್ತಿದ್ದು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಅನ್ವಯ ಮೆಕ್ಕೆಜೋಳ ಬೆಳೆಗೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.