ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್ ಈಗ ನಿಯಂತ್ರಿಸಬಹುದಾದ ಕಾಯಿಲೆ

ವಿಶ್ವ ಏಡ್ಸ್ ದಿನ: ಜಾಗೃತಿ ಜಾಥಾಗೆ ಚಾಲನೆ ನೀಡಿದ ನ್ಯಾ.ಮಲ್ಲಿಕಾರ್ಜುನ ಗೌಡ
Last Updated 2 ಡಿಸೆಂಬರ್ 2022, 5:33 IST
ಅಕ್ಷರ ಗಾತ್ರ

ಶಿವಮೊಗ್ಗ: ಏಡ್ಸ್ ಈಗ ಮಾರಕ ರೋಗ ಅಲ್ಲ. ಅದನ್ನು ನಿಯಂತ್ರಿಸಬಹುದಾಗಿದೆ. ಆತಂಕ ಪಡುವ ಅವಶ್ಯಕತೆಯಿಲ್ಲ. ಆದರೂ ಈ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.

ವಿಶ್ವ ಏಡ್ಸ್ ದಿನದ ಅಂಗವಾಗಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಎಸ್‌ವಿಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಕಟೀಲು ಅಶೋಕ್‌ ಪೈ ಮೆಮೋರಿಯಲ್ ಕಾಲೇಜು ಸಹಯೋಗದಲ್ಲಿ ನ್ಯಾಯಾಲಯದ ಆವರಣದಿಂದ ಗೋಪಿವೃತ್ತದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಏಡ್ಸ್ ಬಂದವರನ್ನು ಯಾರೂ ಮುಟ್ಟಬಾರದು. ಅವರನ್ನು ದೂರವಿಡಬೇಕು ಎಂಬ ತಪ್ಪು ಕಲ್ಪನೆ ಇತ್ತು. ಈಗ ಜಾಗೃತಿ ಕಾರ್ಯಕ್ರಮಗಳ ಮೂಲಕ ಆ ಆತಂಕವನ್ನು ಬಹುಪಾಲು ಹೋಗಲಾಡಿಸಲಾಗಿದೆ. ಅತ್ಯಂತ ಪರಿಣಾಮಕಾರಿ ಔಷಧಗಳು ಬಂದಿವೆ. ವೈದ್ಯರ ಸಲಹೆ ಸೂಚನೆಗಳು ಮತ್ತು ಆರೋಗ್ಯ ಇಲಾಖೆಯಿಂದ ಏಡ್ಸ್ ರೋಗಿಗಳಿಗೆ ಧೈರ್ಯ ತುಂಬಲು ಸಾಧ್ಯವಾಗಿದೆ ಎಂದರು.

ಈ ಕಾಯಿಲೆಯನ್ನು ಮುಚ್ಚಿಡಬಾರದು. ವೈದ್ಯರ ಮುಂದೆ ಯಾವುದೇ ಸಂಕೋಚವಿಲ್ಲದೆ ಸತ್ಯವನ್ನು ಹೇಳಬೇಕು. ಮುಚ್ಚಿಟ್ಟರೆ ಅದು ಅಪಾಯಕಾರಿ ಮತ್ತು ತೊಂದರೆ ಜಾಸ್ತಿ. ಜಾಗೃತಿ ಕಾರ್ಯಕ್ರಮಗಳಲ್ಲಿ ಆ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಏಡ್ಸ್ ತಡೆಗಟ್ಟಲು ಸರ್ಕಾರ ಅನೇಕ ಕಾರ್ಯಕ್ರಮ ಕೈಗೊಂಡಿದೆ. ಎಚ್‌ಐವಿಯಲ್ಲಿ ಜಿಲ್ಲೆ 14ನೇ ಸ್ಥಾನದಲ್ಲಿದೆ. 2,300ಕ್ಕೂ ಹೆಚ್ಚು ಎಚ್‌ಐವಿ ಪಾಸಿಟಿವ್ ಪ್ರಕರಣಗಳಿವೆ. ಎಆರ್‌ಟಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದರು.

ಏಡ್ಸ್ ರೋಗಿಗಳೊಂದಿಗೆ ಬೆರೆಯುವುದರಿಂದ ತಮಗೂ ಏಡ್ಸ್‌ ಬರುತ್ತದೆ ಎಂಬ ಆತಂಕ ಇತ್ತು. ಅವರನ್ನು ದೂರ ಇಡಲಾಗುತ್ತಿತ್ತು. ಆದರೆ, ಈಗ ಸಮಾಜದಲ್ಲಿ ಜಾಗೃತಿ ಮೂಡಿದೆ. ಏಡ್ಸ್ ರೋಗ ನಿಯಂತ್ರಣದಲ್ಲಿದೆ. 2011ರಲ್ಲಿ ಪೋಲಿಯೊ ಮುಕ್ತ ಭಾರತ ಎಂದು ಘೋಷಿಸಿದಂತೆ ಮುಂದಿನ ದಿನಗಳಲ್ಲಿ ಏಡ್ಸ್ ಮುಕ್ತ ಭಾರತ ಆಗಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ. ಪ್ರಕಾಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಡಿಎಚ್‌ಒ ರಾಜೇಶ್ ಸುರಗೀಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್ ಜಿ.ಸಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT