ಶಿವಮೊಗ್ಗ: ಹಿಂದೂ ಧರ್ಮೀಯರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಇಲ್ಲಿನ ಗೋಪಿಶೆಟ್ಟಿಕೊಪ್ಪದ ಮನೆಯೊಂದರಲ್ಲಿ ಆರಂಭಿಸಿರುವ ಪ್ರಾರ್ಥನಾ ಮಂದಿರವೊಂದರ ಮೇಲೆ ಭಾನುವಾರ ತುಂಗಾ ನಗರ ಠಾಣೆ ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆಸಿದರು.
ಪ್ರಾರ್ಥನಾ ಮಂದಿರ ನಡೆಸುತ್ತಿದ್ದ ಫಾದರ್ ಮಣಿಕಂಠ ಇಮ್ಯಾನ್ಯುಯಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದಾರೆ. ಯಾವುದೇ ದೂರು ದಾಖಲಾಗಿಲ್ಲ.
‘ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. 15 ವರ್ಷಗಳಿಂದ ಟ್ರಸ್ಟ್ ಸ್ಥಾಪಿಸಿ ಪ್ರಾರ್ಥನೆ ನಡೆಸುತ್ತಿದ್ದೇವೆ. ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಸಂದರ್ಭದಲ್ಲಿಯೂ ಪ್ರಾರ್ಥನೆ ನಡೆಸಿದ್ದೆವು’ ಎಂದು ಫಾದರ್ ಮಣಿಕಂಠ ಇಮ್ಯಾನ್ಯುಯಲ್ ತಿಳಿಸಿದರು.
‘ಇಲ್ಲಿ ನಿರ್ಮಿಸಿರುವ ಶೆಡ್‌ಗೆ ಯಾವುದೇ ಟ್ರಸ್ಟ್‌ನ ನಾಮಫಲಕ ಅಳವಡಿಸಿಲ್ಲ. ಅಲ್ಲದೇ 42 ಜನರ ಪಟ್ಟಿ ದೊರೆತಿದೆ. ಇದು ಹಿಂದೂಗಳನ್ನು ಮತಾಂತರ ಮಾಡಲು ಸಿದ್ಧಪಡಿಸಿದ್ದ ಪಟ್ಟಿ’ ಎಂದು ಬಜರಂಗದಳದ ಕಾರ್ಯಕರ್ತ ರಾಜೇಶ್ ಗೌಡ ಆರೋಪಿಸಿದರು.
ದಾಳಿ ವೇಳೆ ಬಜರಂಗದಳದ ಜಿಲ್ಲಾ ಸಂಚಾಲಕ ಅಂಕುಶ್, ನಗರ ಕಾರ್ಯದರ್ಶಿ ಸಚಿನ್, ಜಿತೇಂದ್ರಗೌಡ ತುಂಗಾ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಪಿಎಸ್ಐ ರಾಜು ರೆಡ್ಡಿ ಇದ್ದರು.
ಆಜಾನ್ ಕೂಗಿದ ಯುವಕನ ವಿಚಾರಣೆ, ಬಿಡುಗಡೆ
ಶಿವಮೊಗ್ಗ: ಆಜಾನ್ ಕುರಿತ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ ಖಂಡಿಸಿ ನಗರದ ರಾಗಿಗುಡ್ಡದ ಮೌಸೀನ್ ಎಂಬ ಯುವಕ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಅಜಾನ್ ಕೂಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಶಾಸಕ ಕೆ.ಎಸ್ ಈಶ್ವರಪ್ಪ ಅವರು ಮಂಗಳೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಭಾಷಣದಲ್ಲಿ ಆಜಾನ್ ಮತ್ತು ಅಲ್ಲಾಹು ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದು, ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಮಾರ್ಚ್ 17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವ ಮೌಸೀನ್ ಪ್ರತಿಭಟನೆ ಮಧ್ಯ ಆಜಾನ್ ಕೂಗಿದ್ದ.
ವಿಡಿಯೊ ಗಮನಿಸಿದ ಜಯನಗರ ಠಾಣೆ ಪೊಲೀಸರು ಯುವಕನನ್ನು ಕರೆದು ವಿಚಾರಣೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ದೂರು ದಾಖಲಿಸಿ, ಠಾಣಾ ಜಾಮೀನು ಮೇಲೆ ಶುಕ್ರವಾರ ಬಿಡುಗಡೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.