ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗ್ರಹ ಹೆಚ್ಚಾದರೆ ನಾಲೆಗೆ ನೀರು’

ಜುಲೈ 15ರವರೆಗೆ ಕಾದು ನೋಡಲು ಕಾಡಾ ಸಭೆಯಲ್ಲಿ ನಿರ್ಧಾರ
Last Updated 30 ಜೂನ್ 2022, 3:07 IST
ಅಕ್ಷರ ಗಾತ್ರ

ಶಿವಮೊಗ್ಗ: ಜುಲೈ 15ರೊಳಗೆ ಭದ್ರಾ ಜಲಾಶಯದ ನೀರಿನ ಮಟ್ಟ 165 ಅಡಿ ತಲುಪಿದಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಅದೇ ದಿನ ನೀರನ್ನು ನಾಲೆಗೆ ಹರಿಸಲು ಬುಧವಾರ ಇಲ್ಲಿ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯ 81ನೇ ಸಭೆಯಲ್ಲಿ ತೀರ್ಮಾನಿಸಲಾಯಿತು.

ಭದ್ರಾ ಜಲಾಶಯದಲ್ಲಿ ಸದ್ಯ (ಜೂನ್ 29) 151.8 ಅಡಿ ನೀರು ಇದೆ. ಒಳ ಹರಿವು 2478 ಕ್ಯೂಸೆಕ್ ಇದ್ದು, ಹೊರ ಹರಿವು 128 ಕ್ಯೂಸೆಕ್ ಇದೆ. ಜುಲೈ 15ರೊಳಗೆ ನೀರಿನ ಮಟ್ಟ 165 ಅಡಿ ಮುಟ್ಟದಿದ್ದಲ್ಲಿ ನಂತರ ಮತ್ತೊಮ್ಮೆ ಸಭೆ ಕರೆದು ನಾಲೆಗೆ ನೀರನ್ನು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಡಾ ಅಧ್ಯಕ್ಷೆ ಕೆ.ಬಿ. ಪವಿತ್ರಾ ರಾಮಯ್ಯ ಸಭೆಯಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳಿಗೆ ನೀರು ಹರಿಸುವ ಹಾಗೂ ಬೆಳೆ ಕ್ಷೇತ್ರ ಪ್ರಕಟಿಸುವ ಸಂಬಂಧ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭಾಂಗಣದಲ್ಲಿ ಸಭೆ ನಡೆಯಿತು.

ಜುಲೈ 10ರಂದು ನೀರು ಹರಿಸಿದಲ್ಲಿ ರೈತರು, ಭತ್ತ ಬಿತ್ತಲು ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಎಲ್ಲ ಪ್ರಮುಖರ ಸಲಹೆಗಳನ್ನು ಕ್ರೋಢಿಕರಿಸಿ ಕೈಗೊಂಡ ಒಮ್ಮತದ ತೀರ್ಮಾನದಂತೆ 2022–23ನೇ ಸಾಲಿನ ಮುಂಗಾರಿನ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೇಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ಅಚ್ಚುಕಟ್ಟು ರೈತರಿಗೆ ನೀರು ಸಮರ್ಪಕವಾಗಿ ಹರಿಯುವಂತೆ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಪವಿತ್ರಾ ರಾಮಯ್ಯ ಭರವಸೆ ನೀಡಿದರು.

ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಭದ್ರಾ ಕಾಡಾ ನಿರ್ದೇಶಕರಾದ ವಿನಾಯಕ, ಹನುಮಂತಪ್ಪ, ರಾಜಪ್ಪ, ಷಡಾಕ್ಷರಿ, ಮಂಜುನಾಥ್ ಹುಲಿಕೆರೆ, ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT