ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ದಸರಾಗೆ ಅದ್ಧೂರಿ ಚಾಲನೆ

ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದ ಜಾನಪದ ಕಲಾವಿದೆ ತುಳಸಿಗೌಡ
Last Updated 27 ಸೆಪ್ಟೆಂಬರ್ 2022, 4:27 IST
ಅಕ್ಷರ ಗಾತ್ರ

ಶಿವಮೊಗ್ಗ: ಪಾಲಿಕೆ ಆವರಣದಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಶಿವಮೊಗ್ಗ ದಸರಾಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.ಜಾನಪದ ಕಲಾವಿದೆ ತುಳಸಿಗೌಡ ಉತ್ಸವಕ್ಕೆ ಚಾಲನೆ ನೀಡಿದರು.

ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದವರೆಗೆ ಬೆಳ್ಳಿ ಅಂಬಾರಿಯಲ್ಲಿ ಬಂಗಾರದ ಕಿರೀಟ ಹೊತ್ತ ಚಾಮುಂಡೇಶ್ವರಿ ದೇವಿಯ ವಿಗ್ರಹದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮಂಗಳವಾದ್ಯಗಳು, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ದೇವಿಯ ಮೂರ್ತಿ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಪಾಲಿಕೆಯ ಉಪ ಮೇಯರ್, ದಸರಾ ಸಮಿತಿಯ ಸದಸ್ಯರು, ಪಾಲಿಕೆ ಸದಸ್ಯರು, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.

ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯ, ಕೋಟೆ ಮಾರಿಕಾಂಬ ದೇವಾಲಯ ಸೇರಿದಂತೆ ನಗರದ ಹಲವೆಡೆ ಶಕ್ತಿ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಈ ವೇಳೆ ಮಾತನಾಡಿದ ತುಳಸಿಗೌಡ, ‘ನಾನು ಗಿಡಗಳನ್ನು ನೆಡುತ್ತೇನೆ. ಗಿಡ ಬೆಳೆಸುವುದು ಒಳ್ಳೆಯ ಕೆಲಸ. ದೇವರ ಪೂಜೆಗಾಗಿ ನನ್ನನ್ನು ಕರೆಸಿದ್ದೀರಾ, ನಿಮಗೆಲ್ಲರಿಗೂ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

‘ನಾನು ಓದಿಲ್ಲ, ಭಾಷಣ ಮಾಡಲು ಬರುವುದಿಲ್ಲ. ದಸರಾ ಹಬ್ಬ ಆಚರಣೆ ಚೆನ್ನಾಗಿ ಮಾಡಲಾಗುತ್ತಿದೆ. ದೇವರ ಪೂಜೆ ಕಂಡು ಖುಷಿಯಾಗಿದೆ. ಚಾಮುಂಡೇಶ್ವರಿ ಜನತೆಗೆ ಸಕಲ ಸೌಭಾಗ್ಯ ನೀಡಲಿ’ ಎಂದರು.

ಇದೇ ಸಂದರ್ಭದಲ್ಲಿ ಸಹಚೇತನಾ ನಾಟ್ಯಾಲಾಯ ವಿದ್ಯಾರ್ಥಿಗಳಿಂದ ಶಿವಮೊಗ್ಗ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಲಾಯಿತು.

ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ,ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಯಮುನಾ ರಂಗೇಗೌಡ, ವಿಶ್ವನಾಥ್, ಜ್ಞಾನೇಶ್ವರ್, ಎಚ್.ಸಿ. ಯೋಗೀಶ್, ಕಲ್ಪನಾ ರಮೇಶ್, ಅನಿತಾ ರವಿಶಂಕರ್, ಮಂಜುನಾಥ್, ವಿಶ್ವಾಸ್, ಶಿವಕುಮಾರ್, ರಾಜು, ಮಂಜುಳಾ ಶಿವಣ್ಣ, ಲಕ್ಷ್ಮಿ ಶಂಕರನಾಯ್ಕ್, ಸುರೇಖಾ ಮುರಳೀಧರ್, ಸಂಗೀತಾ ನಾಗರಾಜ್, ಶಿರೀಶ್, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ,
ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT