ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುವ ಭಾಷೆಗಳಿಗೆ ಅಡ್ಡಿಯಾದ ಕಲಿಕಾ ರಾಷ್ಟ್ರೀಯತೆ: ಡಾ.ಕೆಳದಿ ಗುಂಡಾ ಜೋಯಿಸ್

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆಳದಿ ಗುಂಡಾ ಜೋಯಿಸ್ ಕಳವಳ
Last Updated 1 ಏಪ್ರಿಲ್ 2022, 4:45 IST
ಅಕ್ಷರ ಗಾತ್ರ

ಶಿವಮೊಗ್ಗ (ಲಂಕೇಶ್ ವೇದಿಕೆ): ಭಾಷೆ ಕಲಿಕೆಯ ರಾಷ್ಟ್ರೀಯತೆಯ ಪರಿಣಾಮ ಅಡುಭಾಷೆಗಳ ಭಾವನೆಗಳು ಮಾರೆಯಾಗುತ್ತಿವೆ. ಇದು ಮಾನವೀಯ ಸಂಬಂಧಗಳ ವಿನಾಶಕ್ಕೂ ಕಾರಣವಾಗಿದೆ ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆಳದಿ ಗುಂಡಾ ಜೋಯಿಸ್ ಕಳವಳ ವ್ಯಕ್ತಪಡಿಸಿದರು.

ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಅನ್ಯಭಾಷೆಗಳ ವ್ಯಾಮೋಹದಲ್ಲಿ ಪ್ರಸ್ತುತ ಮಾತೃಭಾಷೆಗಳನ್ನೇ ಕಡೆಗಣಿಸಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಕಾಡುಮೇಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದವರ ಅಡು ಭಾಷೆಗಳೂ ನಶಿಸುತ್ತಿವೆ. ಮಕ್ಕಳಿಗೆ ಒತ್ತಾಯದ ಮೂಲಕ ಅನ್ಯ ಭಾಷೆಗಳನ್ನು ಹೇರುವ ಕೆಲಸ ಇಂದು ಶಿಕ್ಷಣದ ಮೂಲಕ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬದುಕು ರೂಪಿಸುವ ಮೂಲಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಶಿಕ್ಷಣದಲ್ಲಿ ಚಟುವಟಿಕೆ, ಸಂಶೋಧನಾ ಆಧಾರಿತ. ವೈಜ್ಞಾನಿಕ ಚಿಂತನೆಗಳ ಮೌಲ್ಯ ಶಿಕ್ಷಣ ಜಾರಿಯಾಗಬೇಕು. ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಪ್ರಥಮ ಆದ್ಯತೆ ನೀಡಬೇಕು. ಜನಸಾಮಾನ್ಯರು ಮತದಾನಕ್ಕೆ ಸೀಮಿತವಾಗಿರದೇ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಅದಕ್ಕೆ ಪೂರಕವಾಗಿ ಜನರನ್ನು ಸಿದ್ಧಗೊಳಿಸುವ ಯೋಜನೆಗಳು ರೂಪಿತವಾಗಬೇಕು’ ಎಂದು ಸಲಹೆ
ನೀಡಿದರು.

‘ಗಾಜಿನ ಮನೆಯಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ. ಅಧಿಕಾರಿಗಳು ತಾಲ್ಲೂಕು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಿ ನೆಲಮೂಲದ ಯೋಜನೆಗಳನ್ನು ಸಿದ್ಧಪಡಿಸುವಂತಗಬೇಕು. ಇದರಿಂದ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು. ಯುವಶಕ್ತಿಯನ್ನು ಗ್ರಾಮೀಣ ಪ್ರದೇಶದಲ್ಲೇ ಹಿಡಿದಿಟ್ಟುಕೊಳ್ಳಬಹುದು’ ಎಂದು ಕಿವಿಮಾತು
ಹೇಳಿದರು.

ರೈತರು ಬೆಳೆದ ಬೆಳೆಗೆ ಸೂಕ್ತವಾದ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ದಿಢೀರ್ ಶ್ರೀಮಂತರಾಗಲು ರಾಸಾಯನಿಕ ಸಿಂಪಡಿಸುವುದರ ಮೂಲಕ ಭೂಮಿಯ ಫಲವತ್ತತೆ ಹಾಳುಮಾಡಬಾರದು. ಸಾವಯವ ಕೃಷಿಯತ್ತ ರೈತರು ಒಲವು ತೋರಬೇಕು. ಅಂಗನವಾಡಿಯಿಂದ ವಿಶ್ವವಿದ್ಯಾನಿಲಯಗಳವರೆಗೂ ರಾಜಕೀಯ ಹೊರತಾದ ಆಡಳಿತಾತ್ಮಕ ಸಬಲೀಕರಣ ಬಲವೃದ್ಧಿಗೊಳಿಸಬೇಕು ಎಂದರು.

ಕನ್ನಡ ಅಳಿಸುವ ದಡ್ಡ ರಾಜಕಾರಣಿಗಳು: ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎಂದು ತಿಳಿಯಲಾರದಷ್ಟು ರಾಜಕಾರಣಿಗಳು ದಡ್ಡರಿದ್ದಾರೆ. ನಮ್ಮನ್ನು ಆಳುವವರು ನಮ್ಮನ್ನು, ಕನ್ನಡವನ್ನು ಅಳಿಸುತ್ತಲೇ ಇದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌
ದೂರಿದರು.

ಕಟ್ಟಡ ಕಟ್ಟುವುದೇ ಅಭಿವೃದ್ಧಿಯಲ್ಲ. ಹಣ ಹಾಕಿ ಹಣಗಳಿಸುವ ರಾಜಕಾರಣ ಇದೆ. ಸೃಜನಶೀಲತೆ ಮರೆಯಾಗಿದೆ. ಭಾಷಾ ನೀತಿ ಮಾಡದ ಎಡಬಿಡಂಗಿ ವ್ಯವಸ್ಥೆ ನಮ್ಮಲ್ಲಿದೆ. ಮೋಸ ವಂಚನೆಗಳೇ ತುಂಬಿವೆ. ವಿಷಾದದ ವಾತಾವರಣಗಳ ಮಧ್ಯೆಯೂ ಕನ್ನಡ ಕಟ್ಟುವ ಕೆಲಸ ಆಗುತ್ತಿರುವುದು ಸಮಾಧಾನದ ಸಂಗತಿ. ಭಾಷೆಯನ್ನು ಸಾಹಿತ್ಯ ಪರಿಷತ್‌ ಜೋಪಾನ ಮಾಡುತ್ತಿದೆ ಎಂದರು.

ಹೊಸ ಸಾಹಿತ್ಯ ನೋವುಗಳಿಗೆ ಸ್ಪಂದಿಸಲಿ

ಶಿವಮೊಗ್ಗ: ಜಗತ್ತು ಎಂದು ತಲ್ಲಣಗೊಂಡಿರುವ ಪ್ರಸ್ತುತ ಸನ್ನಿವೇಶದಲ್ಲಿ ಭಸ್ಮದ ರೀತಿಯ ವಾತಾವರಣವಿದೆ. ಯುದ್ಧಗಳು ಮರುಜೀವ ಪಡೆದುಕೊಂಡಿವೆ. ಇಂತಹ ಸಮಯದಲ್ಲಿ ಹೊಸ ಸಾಹಿತ್ಯ ನೋವುಗಳಿಗೆ ಸ್ಪಂದಿಸಬೇಕು.
ಮಾನವೀಯ ನೆಲೆಗಟ್ಟಿನಲ್ಲಿ ಅರಳಬೇಕು ಎಂದು ಸಾಹಿತಿ ನೆಂಪೆ ದೇವರಾಜ್‌ ಸಲಹೆ ನೀಡಿದರು.

ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ‘ಹೊಸ ಓದು – ಹೊಸ ಧ್ವನಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ತೆರೆದ ಮನಸಿನಿಂದ ಸೃಷ್ಟಿಯಾಗುವುದೇ ಸೃಜನಶೀಲ ಸಾಹಿತ್ಯ. ಸಮಸ್ಯೆ, ಅಸಮಾನತೆ, ಅಸಹನೆ, ಲಿಂಗ ತಾರತಮ್ಯ ಮುಂತಾದ ವಿಷಯಗಳತ್ತ ಇಂದಿನ ಗೋಷ್ಠಿ ನಡೆದಿದೆ. ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರೂ ಪ್ರಬುದ್ಧವಾಗಿ ವಿಷಯ ಮಂಡನೆ ಮಾಡಿದ್ದಾರೆ. ಹಾಗಾಗಿ ಬರವಣಿಗೆ ನಿಂತಿಲ್ಲ. ಗುಣಮಟ್ಟದ ಓದು ಕೂಡ ಇದೆ. ಹಾಗಾಗಿಯೇ ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ ಎಂದು ಶ್ಲಾಘಿಸಿದರು.

ಕಮಲಾ ನೆಹರೂ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅರಡಿ ಮಲ್ಲಯ್ಯ, ‘ಮಾನವ ಚರಿತ್ರೆ ಉಳಿಸುವ ಪ್ರಮುಖ ಮಾಧ್ಯಮ ಜನಪದ. ಜಾನಪದ ಬೆಳೆದು ಬಂದ ರೀತಿಯೇ ಒಂದು ವಿಸ್ಮಯ. ಅದು ಬೌದ್ಧವೇ, ವೈದಿಕವೇ ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ಬೇಕಾಗಿದೆ. ತುಂಡು ತುಂಡಾಗಿ ಜನಪದವನ್ನು ಅರ್ಥ ಮಾಡಿಕೊಳ್ಳಬಾರದು. ಇಡಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಜನಪದ ದಕ್ಕುತ್ತದೆ. ಜಾನಪದ ಎಂದೂ ಭ್ರಷ್ಟಗೊಳ್ಳುವುದಿಲ್ಲ. ಅದಕ್ಕೆ ಮತ್ತೊಂದು ಹೆಸರೇ ಲೋಕದೃಷ್ಟಿ ಜನಪದವನ್ನು ಇಟ್ಟುಕೊಂಡು ಮನುಷ್ಯತ್ವವನ್ನು ಕಟ್ಟಬಹುದು ಎಂದರು.

ಯಾವ ಮುಲಾಜುಗಳಿಲ್ಲದೇ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಜಾನಪದ ತನ್ನ ಅರಿವನ್ನು ವಿಸ್ತರಿಸುತ್ತ ಹೋಗಿದೆ. ಮನುಷ್ಯನ ಬದುಕನ್ನು ಜನಪದ ಸ್ಪಷ್ಟವಾಗಿ ತಿಳಿಸುತ್ತ ಬಂದಿದೆ. ಜನಪದವನ್ನು ಜಾನಪದ ಎಂದು ಮೊದಲು ಕರೆದವರು ಡಾ. ಹಾ.ಮಾ. ನಾಯಕರು. ಆದರೆ, ಅವರು ಹಾಗೆ ಕರೆದು ತಪ್ಪು ಮಾಡಿದ್ದಾರೆ ಎಂದು ನನಗನಿಸುತ್ತದೆ. ಕಾರಣ ಜನಪದ ಜಾನಪದವಾಗುವ ಬದಲು ಲೋಕರೂಢಿ ಎಂದಾಗಬೇಕಿತ್ತು ಎಂದು ಹೇಳಿದರು.

ಕಾವ್ಯ ಕುರಿತು ಮಾತನಾಡಿದ ಭದ್ರಾವತಿಯ ಸರ್ ಎಂ.ವಿ. ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಲಿಂಗೇಗೌಡ, ‘ಧರ್ಮ, ಸಂಪ್ರದಾಯ, ದೇವರು ಮುಂತಾದ ಹಿಂಸೆಗಳಿಗೆ ತುತ್ತಾದ ಇಂದಿನ ವಾತಾವರಣದಲ್ಲಿ ತಲ್ಲಣಗಳಿಗೆ ಕಾವ್ಯ ಮದ್ದಾಗಬೇಕಾಗಿದೆ. ಅದರಲ್ಲೂ ಹೊಸ ಕಾವ್ಯ ಮನುಷ್ಯನೆಡೆಗೆ ಸಾಗಬೇಕಾಗಿದೆ. ಏಕೆಂದರೆ ಕಾವ್ಯಕ್ಕೆ ಮನುಷ್ಯತ್ವ ಕಟ್ಟುವ ಶಕ್ತಿ ಇದೆ’ ಎಂದರು.

ವಿಮರ್ಶೆ ಕುರಿತು ಮಾತನಾಡಿದ ಚಿಕ್ಕಮಗಳೂರಿನ ಉಪನ್ಯಾಸಕಿ ಡಾ. ಪುಷ್ಪಾ ಭಾರತಿ, ‘ವಿಮರ್ಶೆ ಇಂದು ಅನಿವಾರ್ಯವಾಗಿದೆ. ಚೌಕಟ್ಟನ್ನು ಮೀರಿದ ಸಾಹಿತ್ಯದ ಎಲ್ಲ ಪ್ರಕಾರಗಳು ವಿಮರ್ಶೆಗೆ ಒಳಗಾಗುತ್ತಿವೆ. ವಿಮರ್ಶೆಯ ದಿಕ್ಕು ಕೂಡ ಬದಲಾಗುತ್ತಿದೆ. ಹೊಸ ತಲೆಮಾರಿನ ಎಲ್ಲ ಪ್ರಕಾರದ ಸಾಹಿತಿಗಳಿಗೆ ವಿಮರ್ಶೆ ಅನಿವಾರ್ಯವಾಗಿದೆ’ ಎಂದರು.

ಉಪನ್ಯಾಸಕ ಡಾ. ಪುರುಷೋತ್ತಮ್, ‘ಬಹುತ್ವವನ್ನು ಒಂದೆಡೆಗೆ ಸೇರಿಸುವಾಗ ಅಪಾಯಗಳು ಎದುರಾಗುತ್ತವೆ. ಸಂಶೋಧನೆಯ ಮಾರ್ಗ ಕೂಡ ಇದೇ ಸ್ಥಿತಿಯಲ್ಲಿದೆ. ಸಂಶೋಧನೆಗಳನ್ನು ಇಡಿಯಾಗಿ ಗಮನಿಸದಿದ್ದರೆ ಅದು ಸೋಲುತ್ತದೆ. ಸಂಶೋಧನೆಗೆ ಅಂತ್ಯವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳ ಖಾಲಿ ಜಾಗದಲ್ಲೂ ಅದು ಆವರಿಸಿಕೊಳ್ಳುತ್ತದೆ. ಅಧ್ಯಯನಶೀಲತೆಯಿಂದ ಒಳ್ಳೆಯ ಸಂಶೋಧನೆ ಸಾಧ್ಯ’ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯಿಸ್‌ ಇದ್ದರು. ಶಿಕಾರಿಪುರ ತಾಲ್ಲೂಕು ಕಸಾಪ ಅಧ್ಯಕ್ಷ ಎಚ್‌.ಎಸ್. ರಘು ಸ್ವಾಗತಿಸಿದರು. ಡಾ.ಬಿ.ಎನ್. ತಂಬೂಳಿ ನಿರೂಪಿಸಿದರು. ಸುಧಾಮಣಿ ವಂದಿಸಿದರು. ರೇವತಿ ರಾಜಕುಮಾರ್, ಲಲಿತಮ್ಮ, ಡಾ.ಬಿ.ಎಸ್. ಉಜ್ವಲಾ, ವಿದ್ಯಾ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಗಾಂಧಿ ವಿಚಾರಗಳ ಹತ್ಯೆ: ಸಿರಾಜ್‌ ಅಹಮದ್‌ ಕಳವಳ

ಶಿವಮೊಗ್ಗ: ಗಾಂಧಿ ವಿಚಾರಗಳನ್ನೂ ಹತ್ಯೆ ಮಾಡುವ ಮನಸ್ಸುಗಳು ನಮ್ಮ ಮಧ್ಯೆ ಇರುವುದು ಆತಂಕದ ಸಂಗತಿ ಎಂದು ಸಹ್ಯಾದ್ರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಎಸ್. ಸಿರಾಜ್ ಅಹಮದ್ ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಡಿ.ಎಸ್. ನಾಗಭೂಷಣ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಗಾಂಧಿ ಕಥನ’ ಕುರಿತು ಅವರು ಮಾತನಾಡಿದರು.

ಗಾಂಧೀಜಿ ಮೇರು ವ್ಯಕ್ತಿತ್ವ ಚರಿತ್ರೆಯ ಗತಿ ಬದಲಾಯಿಸುವ ಶಕ್ತಿ ಹೊಂದಿತ್ತು. ಗಾಂಧಿ ಆಚಲವಾದ ಬದ್ಧತೆ ಹಾಗೂ ಆದರ್ಶಗಳಿಂದ ಪ್ರಭಾವಶಾಲಿಯಾಗಿದ್ದರು. ಗಾಂಧಿ ವಿಚಾರಗಳ ವಿರುದ್ಧ ದಿಕ್ಕಿನಲ್ಲಿ ಕೆಲವು ಮನಸ್ಸುಗಳು ನಡೆಯುವ ಈ ಸಮಯದಲ್ಲಿ ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ ಪುಸ್ತಕ ಗಾಂಧಿ ಅರ್ಥಮಾಡಿಕೊಳ್ಳಲು ಹೊಸನೋಟ ಕೊಡುತ್ತಿದೆ ಎಂದರು. ಡಾ.ಅಮ್ಜದ್ ಮೌಲಾನಾ ಹಾಫೀಜ್ ಕರ್ನಾಟಕಿ ಅವರ ಫಕ್ರೇ ವತನ್ ಪುಸ್ತಕ ಕುರಿತು ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ, ‘ಡಾ.ಹಾಫೀಜ್ ಕರ್ನಾಟಕಿ ತಮ್ಮ ಪುಸ್ತಕದ ಮೂಲಕ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಮೂಡಿಸುವ ಕೆಲಸ ಮಾಡಿದ್ದಾರೆ. ಮಕ್ಕಳಲ್ಲಿ ಚೈತನ್ಯ ತುಂಬುವ, ಸಮ ಸಮಾಜದ ನಿರ್ಮಾಣಕ್ಕೆ ಕರ್ನಾಟಕಿ ಮುಂದಾಗಿದ್ದಾರೆ’ ಎಂದು ಶ್ಲಾಘಿಸಿದರು.

ರಾಜಕಾರಣಿಗಳು ಬರುವುದೇ ಬೇಡ: ನಾ.ಡಿಸೋಜ

ರಾಜಕಾರಣಿಗಳು ಸಮ್ಮೆಳನಕ್ಕೆ ಬರುವುದು ಬೇಡ. ಬರದೇ ಇರುವುದಕ್ಕೆ ಬೇಸರವೂ ಇಲ್ಲ. ನಮ್ಮ ಪಾಡಿಗೆ ನಾವು ಕನ್ನಡದ ಮನಸುಗಳ ಕಟ್ಟುತ್ತೇವೆ ಎಂದು ಸಾಹಿತಿ ನಾ.ಡಿಸೋಜ ಕುಟುಕಿದರು.

16ನೇ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳಿಗೆ ತಮ್ಮದೇ ಕೆಲಸವಿರುತ್ತದೆ. ಅವರ ಪಾಡಿಗೆ ಅವರು ಇರಲಿ. ಕನ್ನಡ ಕಟ್ಟುವ ಕೆಲಸ ನಮ್ಮದು. ನಮ್ಮ ಮಕ್ಕಳು ನಮ್ಮ ಭಾಷೆ ಕಲಿಯ ಬೇಕು. ಅಣ್ಣಾ ಎನ್ನುವ ಪದ ಇಂಗ್ಲಿಷ್‌ ಪದ ಕೋಶದಲ್ಲಿ ಸೇರಿದೆ. ಹಲವು ಭಾಷೆಗಳಿಗೆ ಕನ್ನಡವೇ ಸ್ಫೂರ್ತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಳದಿ, ಇಕ್ಕೇರಿ ಕ್ಷೇತ್ರಗಳ ಪರಿಚಯಿಸಿದವರು ಗುಂಡಾ ಜೋಯಿಸ್‌ ಅವರು. ಅವರ ನೇತೃತ್ವದಲ್ಲಿ ಸಮ್ಮೇಳನ ಯಶ್ವಸಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT