ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಎರಡು ದಿನಗಳ ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ತೆರೆ

ಶಿವಮೊಗ್ಗ: ಎರಡು ದಿನಗಳ ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ತೆರೆ
Last Updated 3 ಫೆಬ್ರುವರಿ 2023, 6:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಹಿತ್ಯದ ಬೇರು ಚಿಗುರೊಡೆದು ವನದಂತೆ ಸಹೃದಯಗಳಲ್ಲಿ ವಿಸ್ತಾರವಾಗಿ ಹಬ್ಬಿ, ಕನ್ನಡದ ಕಂಪು ನೆಲ, ಜಲ, ಗಾಳಿ ಎಲ್ಲೆಲ್ಲೂ ಪಸರಿಸುವುದೇ ಸಾಹಿತ್ಯದ ಹಬ್ಬ. ಅದಕ್ಕೆ ಸಾಕ್ಷಿಯಂತೆ ಎರಡು ದಿನಗಳ ಕಾಲ ಸಹೃದಯರಿಗೆ ವೇದಿಕೆಯಾದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ತೆರೆ ಬಿದ್ದಿತು.

ಸಾಹಿತ್ಯ ಹಬ್ಬದ ಎರಡನೇ ದಿನದ ಗೋಷ್ಠಿಯಲ್ಲಿ ‘ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು’ ವಿಷಯ ಕುರಿತು ಸಾಹಿತಿ ಟಿ. ಅವಿನಾಶ್ ಮಾತನಾಡಿ, ‘ಬದಲಾಗಿರುವ ಕಾಲಘಟ್ಟದ ಸಮಾಜದಲ್ಲಿ ನಾವು ಬದುಕುತಿದ್ದೇವೆ. ಈ ಘಟ್ಟದಲ್ಲಿ ಎದುರಾಗುವ ಬಿಕ್ಕಟ್ಟುಗಳನ್ನು ಸಾಹಿತ್ಯ ಹೇಗೆ ಎದುರಿಸುತ್ತದೆ ಎಂಬುದನ್ನು ನೋಡಬೇಕಾಗುತ್ತದೆ’ ಎಂದರು.

ದೊಡ್ಡ ಮಹಲು, ದೊಡ್ಡ ರಸ್ತೆಗಳು, ಅಭಿವೃದ್ಧಿ ಹೆಸರಿನಲ್ಲಿ ಓಡುತ್ತಿರುವ ಸಮಾಜ ಹಾಗೂ ಸಂಸ್ಕೃತಿ ಗುರುತಿಸಬಹುದು.
ಮಧ್ಯಮ ವರ್ಗ ಹೇಳುವುದು ಐಟಿ– ಬಿಟಿಯ ಅಭಿವೃದ್ಧಿಯಿಂದ ಅವಕಾಶ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನು ನಾವು ನವ ಮಧ್ಯಮ ವರ್ಗ ಎನ್ನುತ್ತೇವೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅವಕಾಶದಿಂದ ವಂಚಿತರಾದವರು, ಅಭಿವೃದ್ಧಿಗಾಗಿ ತಮ್ಮ ಭೂಮಿ ಕಳೆದುಕೊಂಡವರು, ಒಂದು ದೊಡ್ಡ ವರ್ಗ ನಿರಾಶ್ರಿತರಾಗಿ ಬದಲಾವಣೆ ಆಗಿದ್ದಾರೆ. ಆರ್ಥಿಕ ನಿರಾಶ್ರಿತರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ ಎಂದರು.

ಆಧುನಿಕತೆ, ಕಂಪ್ಯೂಟರ್ ಹೀಗೆ ಹೊಸ ಆವಿಷ್ಕಾರಗಳು ಬೆಳೆದಂತೆ ಜಾತಿಯ ವಿಚಾರ ಕುಗ್ಗಬೇಕಿತ್ತು. ಆದರೆ, ಶೋಷಿತ ವರ್ಗ ದಬ್ಬಾಳಿಕೆಗೆ ಒಳಗಾಗುತ್ತಲೇ ಇದೆ ಎಂದರು.

‘ಬೌದ್ಧಿಕತೆಯ ಸವಾಲುಗಳು’ ವಿಷಯ ಕುರಿತು ಮಾತನಾಡಿದ ಚಿಂತಕ ರಾಜೇಂದ್ರ ಚೆನ್ನಿ, ‘ಕುವೆಂಪು ಅವರನ್ನು ನಾವು ದಾರಿದೀಪವಾಗಿ ನೋಡುತ್ತೇವೆ. ವೈಚಾರಿಕ ಸಂಗತಿಗಳು ಎದುರಿಸಿದ ಸವಾಲುಗಳನ್ನು ಲೇಖನ ಹಾಗೂ ಭಾಷಣದ ಮೂಲಕ ಅವರು ವಿವರಿಸಿದ್ದಾರೆ’ ಎಂದರು.

‘ಮತ ಎಂದರೆ ಧರ್ಮವಲ್ಲ. ವಾಸ್ತವದ ಅರಿವಿಲ್ಲದೆ, ನೈಜ ಸತ್ಯವನ್ನು ಚಿಕಿತ್ಸೆಗೆ ಒಳಪಡಿಸದೆ ಒಪ್ಪಿಕೊಳ್ಳುವ ಸಂಗತಿಗೆ ಮತ ಎಂದು ಕುವೆಂಪು ಹೇಳಿದ್ದಾರೆ. ವಸ್ತುನಿಷ್ಠತೆ ಎಂಬುದು ಬೇಕು. ಯಾವುದು ನೈಜ, ವಾಸ್ತವ ಎಂಬುದರ ಅರಿವಿರಬೇಕು. ವೈಚಾರಿಕ ಚಿಂತನೆಗೆ ಸ್ವಾತಂತ್ರ್ಯ ಬೇಕು ಎಂದಿದ್ದರು’.

‘ಮತಿ, ಪ್ರಜಾಪ್ರಭುತ್ವ, ವೈಚಾರಿಕತೆಯನ್ನು ಕಾಪಾಡುವ ಬಿಕ್ಕಟ್ಟು ಎದುರಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾಲಯಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಯ ವಿದ್ಯಾಲಯ ಬಿಟ್ಟು ವಾಟ್ಸ್‌ಆ್ಯಪ್‌ ವಿದ್ಯಾಲಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ಸುಳ್ಳು ಸುದ್ದಿಯನ್ನು ಅತಿ ಬೇಗ ನಂಬುವುದು ಮತ್ತು ಹರಡುವುದರಿಂದ ವೈಚಾರಿಕತೆಗೆ ಹೆಚ್ಚು ಪೆಟ್ಟು ಬೀಳುತ್ತಿದೆ’ಎಂದರು.

ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ‘ರಂಗಭೂಮಿ’ ವಿಷಯ ಕುರಿತು ಮಾತನಾಡಿ, ‘ಒಂದು ನಾಟಕವು ಬಿಕ್ಕಟ್ಟುಗಳನ್ನು ಬಿಂಬಿಸುತ್ತದೆ. ಪ್ರಶ್ನೆ ಮಾಡುವ ಗುಣ ಹೊಂದಿದೆ. ಅದಕ್ಕಾಗಿ ನಾಟಕ ಎಲ್ಲರಿಗೂ ಇಷ್ಟವಾಗುವುದಿಲ್ಲ. ನಾಟಕದ ವರದಿ ಮಾಡುವುದು ತುಂಬಾ ಕಷ್ಟದ ಕೆಲಸ. ಸಾಹಿತ್ಯಾಸಕ್ತಿ ಹೊಂದಿದ ಯಾರೂ ನಾಟಕಗಳಿಗೆ ಅಡ್ಡಿ ಮಾಡುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಬೀದಿ ನಾಟಕ ಪ್ರದರ್ಶಿಸುವಾಗ ಪೊಲೀಸ್ ನಿಯೋಜನೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಇದು ಬದಲಾಗಬೇಕು. ರಂಗಭೂಮಿಗೆ ಹಿಡಿದಿರುವ ಪಿಡುಗು, ಬಿಕ್ಕಟ್ಟುಗಳು ತೊಲಗಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸಿದ್ದರು. ಮಂಜುಳರಾಜು, ಪಿ.ಕೆ ಸತೀಶ್, ಶಿವಾನಂದ ಪಾಣಿ ಇದ್ದರು.

***

ಬಳ್ಳಾರಿಯ ಗಣಿ, ಕೆಂಪು ಗಿಣಿಯ ರೂಪಕ

ಬಳ್ಳಾರಿಯ ಸಂಪತ್ತು, ಗಣಿಗಾರಿಕೆ ಮತ್ತು ರಾಜಕೀಯ ಈ ಮೂರು ಅಪವಿತ್ರವಾಗಿ ಒಂದಾದ ಪರಿಣಾಮ ಒಂದು ಕಾಲದಲ್ಲಿ ಅಚ್ಚ ಹಸಿರಿನಿಂದ ಕೂಡಿದ್ದ ಆ ಊರು ಈಗ ಕೆಂಪು ದೂಳಿನಿಂದ ಕೂಡಿದೆ ಎಂದು ಸಾಹಿತಿ ಟಿ. ಅವಿನಾಶ್ ಹೇಳಿದರು.

ಲೇಖಕರೊಬ್ಬರು ಕಥೆಯಲ್ಲಿ ವಿವರಿಸಿದಂತೆ, ವಿದ್ಯುತ್ ತಂತಿಯ ಮೇಲೆ ಕೂತ ಪಕ್ಷಿಗಳನ್ನು ಗುರುತಿಸಲು ಸಾಧ್ಯವಾಗದ ವ್ಯಕ್ತಿಯೊಬ್ಬರು ಅವು ಯಾವ ಪಕ್ಷಿ ಎಂದು ತಮ್ಮ ಸ್ನೇಹಿತನಿಗೆ ಕೇಳುತ್ತಾರೆ. ಆಗ ಸ್ನೇಹಿತ ಅಯ್ಯೊ.. ಅವು ಗಿಳಿಗಳು. ಬಳ್ಳಾರಿಯ ಗಣಿಗಾರಿಕೆಯ ದೂಳಿನಿಂದ ಹಸಿರು ಬಣ್ಣದ ಬದಲು ಕೆಂಪು ಗಿಳಿಗಳಾಗಿ ಬದಲಾಗಿವೆ ಎನ್ನುತ್ತಾನೆ. ಈ ರೂಪಕ ಅಲ್ಲಿನ ವಿದ್ಯಮಾನವನ್ನು ಸಮರ್ಪಕವಾಗಿ ಕಟ್ಟಿಕೊಡುತ್ತದೆ. ಗಣಿ ಮತ್ತು ಗಿಣಿ ಎನ್ನುವ ಶ್ಲೇಷವು ಜಾಗತೀಕರಣದ ನಂತರ ಬಳ್ಳಾರಿ ರೂಪಾಂತರಗೊಂಡ ಬಗೆಯನ್ನು ಪ್ರತಿಪಾದಿಸುತ್ತದೆ ಎಂದರು.

***

ಎಣ್ಣೆ ಗಾಣ, ಎತ್ತು, ಶಿಕ್ಷಣ

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ಎಣ್ಣೆ ಗಾಣ, ಎತ್ತು, ಶಿಕ್ಷಣದ ಕಥೆ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಶಾಲೆಯ ಮಕ್ಕಳನ್ನು ಎಣ್ಣೆ ಗಾಣಕ್ಕೆ ಕರೆದೊಯ್ಯಲಾಗಿತ್ತು.

‘ಮಕ್ಕಳು ರೈತನಿಗೆ ಪ್ರಶ್ನೆ ಮಾಡುತ್ತಾರೆ. ಗಾಣದ ಬಳಿ ಎತ್ತು ಒಂದನ್ನು ಬಿಟ್ಟು ಯಾರೂ ಕೂಡ ಇಲ್ಲ. ಅದು ಹೇಗೆ ಸುತ್ತಲೂ ಸುತ್ತುತ್ತದೆ? ಅದಕ್ಕೆ ರೈತ, ಅದರ ಪಾಡಿಗೆ ಅದು ಸುತ್ತುತ್ತದೆ. ಅರ್ಧ ಗಂಟೆಗೊಮ್ಮೆ ನೋಡಿ ಬರುತ್ತೇನೆ. ಎತ್ತು ನಿಂತಿದ್ದೇ ಆದಲ್ಲಿ ಅದಕ್ಕೆ ಗಂಟೆ ಕಟ್ಟಿದ್ದೇನೆ. ಅದರಿಂದ ಅದು ನಿಂತಿರುವುದು ತಿಳಿಯುತ್ತದೆ ಎಂದನು’.

‘ಅದರಲ್ಲಿದ್ದ ತರಲೆ ಹುಡಗನೊಬ್ಬ ಆ ಎತ್ತು ನಿಂತುಕೊಂಡೆ ತನ್ನ ತಲೆ ಅಲ್ಲಾಡಿಸಿದರೆ ಏನು ಮಾಡುತ್ತೀರ ಎಂದು ಪ್ರಶ್ನಿಸಿದನು. ಅದಕ್ಕೆ ರೈತ, ಶಿಕ್ಷಣ ಪಡೆಯಲು ಎತ್ತನ್ನು ಶಾಲೆಗೆ ಕಳುಹಿಸಿಲ್ಲ. ಶಾಲೆಗೆ ಹೋಗಿ ಓದಿದ್ದರೆ ಮಾತ್ರ ಈ ರೀತಿಯ ಚಿಂತನೆಗಳು ಬರಲು ಸಾಧ್ಯ ಎಂದು ಉತ್ತರಿಸಿದರು’ ಎಂದಾಗ ನಗೆ ಹರಡಿತು.

***

ನಾವು ‘ಮತಿ’ಯ ಬದಲಾಗಿ ‘ಮತ’ಕ್ಕೆ ಅಂಟಿಕೊಂಡಿರುವುದೇ ವೈಚಾರಿಕ ಬಿಕ್ಕಟ್ಟಿಗೆ ಕಾರಣ. ಮೌಢ್ಯತೆ, ಅರ್ಥ ಹೀನ ವಿವಾದಗಳ ಮೂಲಕ ವೈಜ್ಞಾನಿಕ ಚಿಂತನೆ ಕುಗ್ಗಿಸುವ ಪ್ರಯತ್ನದ ಹಿಂದಿರುವ ಶಕ್ತಿಯೇ ಮತ.

-ಡಾ.ರಾಜೇಂದ್ರ ಚೆನ್ನಿ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT