ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಮಂಜೂರಾದ ಸಾಲ ವಾಪಸಾಗುವ ಆತಂಕ

ಪಿಎಲ್‌ಡಿ ಬ್ಯಾಂಕ್‌ನಲ್ಲಿ ಆಡಳಿತಾತ್ಮಕ ಬಿಕ್ಕಟ್ಟು: ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
Last Updated 2 ಡಿಸೆಂಬರ್ 2022, 5:38 IST
ಅಕ್ಷರ ಗಾತ್ರ

ಸಾಗರ: ನಗರದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಸಿಬ್ಬಂದಿ ನೇಮಕಾತಿ ಸಂಬಂಧ ಆಡಳಿತಾತ್ಮಕ ಬಿಕ್ಕಟ್ಟು ತಲೆದೋರಿದ್ದು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ ವಿದ್ಯಮಾನ ನಡೆದಿದೆ.

ಈ ಬೆಳವಣಿಗೆಯಿಂದಾಗಿ ರೈತರಿಗೆ ವಿತರಿಸಲು ಮಂಜೂರಾಗಿರುವ ಸಾಲದ ಹಣ ವಾಪಸಾಗುವ ಆತಂಕ ಎದುರಾಗಿದೆ.

ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ಗೆ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಎಸ್‌ಎಲ್‌ಡಿ ಬ್ಯಾಂಕ್) ನಿಂದ ಈ ವರ್ಷ ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ವಿತರಿಸಲು ₹ 3 ಕೋಟಿ ಮಂಜೂರಾಗಿದೆ. ಈ ಪೈಕಿ ₹ 1.5 ಕೋಟಿ ಮೊದಲ ಹಂತದಲ್ಲಿ ಬಿಡುಗಡೆಯಾಗಿದೆ.

ಎಸ್‌ಎಲ್‌ಡಿ ಬ್ಯಾಂಕ್‌ನಿಂದ ನಿಯೋಜಿತರಾದ ವ್ಯವಸ್ಥಾಪಕರು ಇದ್ದರೆ ಮಾತ್ರ ಸಾಲ ವಿತರಿಸಬಹುದು ಎಂಬ ನಿಬಂಧನೆ ಹೇರಿರುವುದು ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ಗೆ ತೊಡಕಾಗಿ ಪರಿಣಮಿಸಿದೆ. ಈ ಬ್ಯಾಂಕ್ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಎಸ್ಎಲ್‌ಡಿ ಬ್ಯಾಂಕ್‌ನಿಂ ನಿಯೋಜಿತರಾದವರಲ್ಲ.

ಇಂತಹ ನಿಬಂಧನೆಯನ್ನು ಎಸ್‌ಎಲ್‌ಡಿ ಬ್ಯಾಂಕ್ ವಿಧಿಸಿದ್ದೇ ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ನಡುವೆ ಭಿನ್ನಮತಕ್ಕೆ ದಾರಿ ಮಾಡಿಕೊಟ್ಟಿದೆ. ಕೆಲವು ನಿರ್ದೇಶಕರು ಈ ನಿಬಂಧನೆಯನ್ನು ಸಡಿಲಗೊಳಿಸುವಂತೆ ಒತ್ತಾಯಿಸಿದ್ದು, ಈ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವು ಹೊಂದಿದ್ದಾರೆ.

ಬ್ಯಾಂಕ್ ಅಧ್ಯಕ್ಷ ಎಂ.ಕೆ. ದ್ಯಾವಪ್ಪ ಸೇರಿ ಕೆಲವು ನಿರ್ದೇಶಕರು ನಿಬಂಧನೆ ಸಡಿಲಗೊಳ್ಳುವವರೆಗೆ ಕಾಯುತ್ತ ಕುಳಿತರೆ ರೈತರ ಸಾಲ ವಿತರಣೆಗೆ ಮಂಜೂರಾದ ಹಣ ವಾಪಸ್ ಹೋಗುತ್ತದೆ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎಸ್‌ಎಲ್‌ಡಿ ಬ್ಯಾಂಕ್ ಪ್ರಮುಖರನ್ನು ಸಂಪರ್ಕಿಸಿ ಅಲ್ಲಿಂದಲೇ ಒಬ್ಬ ಸಿಬ್ಬಂದಿಯನ್ನು ಇಲ್ಲಿನ ಬ್ಯಾಂಕ್ ವ್ಯವಸ್ಥಾಪಕರನ್ನಾಗಿ ನಿಯೋಜನೆ ಮಾಡಿರುವುದು ಉಳಿದ ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸದಾಗಿ ವ್ಯವಸ್ಥಾಪಕರಾಗಿ ನಿಯೋಜನೆಗೊಂಡವರಿಗೆ ನಿಗದಿತ ವಿದ್ಯಾರ್ಹತೆ ಇಲ್ಲ. ಅವರು ಬ್ಯಾಂಕ್ ವಹಿವಾಟುಗಳನ್ನು ನಡೆಸಿಕೊಂಡು ಹೋಗಲು ಸಮರ್ಥರಾಗಿಲ್ಲ ಎಂದು ಒಂದು ಗುಂಪಿನ ನಿರ್ದೇಶಕರು ಪ್ರತಿಪಾದಿಸುತ್ತಿದ್ದಾರೆ. ಈ ಕಾರಣಕ್ಕೇ ಹಾಲಿ ಇರುವ ವ್ಯವಸ್ಥಾಪಕರಿಗೆ ತಮ್ಮ ಹೊಣೆಯನ್ನು ನೂತನ ವ್ಯವಸ್ಥಾಪಕರಿಗೆ ವಹಿಸದಂತೆ ಅವರು ತಾಕೀತು ಮಾಡಿದ್ದಾರೆ.

ಬ್ಯಾಂಕ್ ಅಧ್ಯಕ್ಷರು ಎಸ್‌ಎಲ್‌ಡಿ ಬ್ಯಾಂಕ್‌ನಿಂದ ನಿಯೋಜನೆಗೊಂಡ ವ್ಯವಸ್ಥಾಪಕರಿಗೆ ಅಧಿಕಾರ ಹಸ್ತಾಂತರಿಸುವಂತೆ ಪಟ್ಟು ಹಿಡಿದಿರುವುದು ಕೆಲವು ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ.

ಈ ನಡುವೆ ಬ್ಯಾಂಕ್‌ನ ಹಾಲಿ ವ್ಯವಸ್ಥಾಪಕರು ರಜೆ ಮೇಲೆ ತೆರಳಿದ್ದು, ನೂತನ ವ್ಯವಸ್ಥಾಪಕರಿಗೆ ಅಧಿಕಾರ ಹಸ್ತಾಂತರಿಸಲು ತೊಡಕಾಗಿ ಪರಿಣಮಿಸಿದೆ. ಈ ಎಲ್ಲಾ ಬೆಳವಣಿಗಳಿಂದ ರೈತರಿಗೆ ವಿತರಿಸಲು ಮಂಜೂರಾಗಿರುವ ಸಾಲ ವಾಪಸ್‌ ಆಗುವ ಆತಂಕ ಎದುರಾಗಿದೆ.

ವಿರೋಧ ಬೇಸರದ ಸಂಗತಿ

ರೈತರಿಗೆ ಸಕಾಲದಲ್ಲಿ ಸಾಲ ವಿತರಿಸಲು ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಎಸ್‌ಎಲ್‌ಡಿ ಬ್ಯಾಂಕ್‌ನಿಂದ ನಿಯೋಜಿತರಾದ ಸಿಬ್ಬಂದಿಯನ್ನು ವ್ಯವಸ್ಥಾಪಕರನ್ನಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಆಡಳಿತ ಮಂಡಳಿಯ ಕೆಲವು ನಿರ್ದೇಶಕರು ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರ ತಂದಿದೆ.
ಎಂ.ಕೆ. ದ್ಯಾವಪ್ಪ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಸಾಗರ

ಠೇವಣಿದಾರರ ಹಿತ ಮುಖ್ಯ

ರೈತರಿಗೆ ಮಂಜೂರಾಗಿರುವ ಸಾಲ ವಾಪಸ್ ಹೋದರೂ, ಅದನ್ನು ಮರಳಿ ತರಿಸಿಕೊಳ್ಳಲು ಅವಕಾಶವಿದೆ. ನಿಗದಿತ ವಿದ್ಯಾರ್ಹತೆ ಇಲ್ಲದ ವ್ಯಕ್ತಿಯ ಕೈಗೆ ಬ್ಯಾಂಕ್ ಜವಾಬ್ದಾರಿ ನೀಡಿ ಠೇವಣಿದಾರರ ಹಿತವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಪಿ.ಎನ್. ಸುಬ್ರಾವ್, ನಿರ್ದೇಶಕರು, ಪಿಎಲ್‌ಡಿಬ್ಯಾಂಕ್, ಸಾಗರ

ಪಿಎಲ್‌ಡಿ ಬ್ಯಾಂಕ್‌ಗೆ ಸಾಲ ವಿತರಿಸಲು ಕೇಂದ್ರ ಬ್ಯಾಂಕ್ ನಿಬಂಧನೆ ಹೇರಿದ್ದು ಸರಿಯಲ್ಲ. ಅದೇನೇ ಇದ್ದರೂ ಬ್ಯಾಂಕ್ ನಿರ್ದೇಶಕರು ಒಮ್ಮತದ ತೀರ್ಮಾನ ತೆಗೆದುಕೊಂಡು ಸಕಾಲದಲ್ಲಿ ರೈತರಿಗೆ ಸಾಲ ವಿತರಿಸಬೇಕು.

ಈಶ್ವರ ನಾಯ್ಕ್ ಕುಗ್ವೆ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT