ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ

Last Updated 1 ಡಿಸೆಂಬರ್ 2020, 9:35 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ 244 ಗ್ರಾಮ ಪಂಚಾಯಿತಿಗಳ 2,609 ಸ್ಥಾನಗಳಿಗೆ ಎರಡು ಹಂತಗಳಲ್ಲಿ ನಡೆಯುವ ಚುನಾವಣೆ ನಡೆಯಲಿದೆ.

ಶಿವಮೊಗ್ಗ ತಾಲ್ಲೂಕಿನ 40, ಭದ್ರಾವತಿಯ 35, ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಸಾಗರ ತಾಲ್ಲೂಕಿನ 27, ಶಿಕಾರಿಪುರದ 39, ಸೊರಬದ 35 ಮತ್ತು ಹೊಸನಗರ ತಾಲ್ಲೂಕಿನ 30 ಪಂಚಾಯಿತಿಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 271 ಗ್ರಾಮ ಪಂಚಾಯಿತಿಗಳಿವೆ. 244 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಕುಂಸಿ, ಪುರದಾಳು, ಕೋಮಾರನಹಳ್ಳಿ, ವೀರಾಪುರ, ಹಾರೋಗೊಪ್ಪ, ತರಲಘಟ್ಟ ಮತ್ತು ಚುರ್ಚಿಗುಂಡಿ ಸೇರಿ 7 ಗ್ರಾಮ ಪಂಚಾಯಿಗಳ 5 ವರ್ಷದ ಅವಧಿ ಪೂರ್ಣಗೊಂಡಿಲ್ಲ. 20 ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪೂರ್ಣ ಅಥವಾ ಭಾಗಶಃ ಪರಿವರ್ತನೆಗೊಂಡಿವೆ. ಹಾಗಾಗಿ, ಅಲ್ಲಿಯೂ ಚುನಾವಣೆ ಇರುವುದಿಲ್ಲ.

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಳೆಹೊನ್ನೂರು, ಸಿದ್ಲೀಪುರ, ಎಮ್ಮೇಹಟ್ಟಿ, ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ತಡಗಣಿ, ಉಡುಗಣಿ, ಸೊರಬ ಪುರಸಭೆ ವ್ಯಾಪ್ತಿಯ ಹಳೆಸೊರಬ, ಕೊಡಕಣಿ, ತವನಂದಿ, ಹೆಚ್ಚೆ ಮತ್ತು ಮುಟುಗುಪ್ಪೆ, ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನವಟ್ಟಿ, ಕುಬಟೂರು, ಸಮನಹಳ್ಳಿ, ತಲ್ಲೂರು, ಕಾತುವಳ್ಳಿ, ಅಗಸನಹಳ್ಳಿ, ಎಣ್ಣೆಕೊಪ್ಪ, ತತ್ತೂರು ಮತ್ತು ಗೆಂಡ್ಲ ಪಂಚಾಯಿತಿಗಳಲ್ಲಿ ಮತದಾನ ನಡೆಯುವುದಿಲ್ಲ ಎಂದರು.

ಚುನಾವಣೆ ನಡೆಯಲಿರುವ 244 ಗ್ರಾಮ ಪಂಚಾಯಿತಿಗಳ 2,609 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1,415 ಮತಗಟ್ಟೆಗಳಿವೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು, ಅಂದರೆ 1,40,072 ಮತದಾರರು ಇದ್ದು, ಹೊಸನಗರ ತಾಲ್ಲೂಕಿನಲ್ಲಿ ಅತಿ ಕಡಿಮೆ, ಅಂದರೆ 92,474 ಮತದಾರರು ಇದ್ದಾರೆ ಎಂದು ವಿವರ ನೀಡಿದರು.

ಸುಗಮವಾಗಿ ಚುನಾವಣೆ ನಡೆಸಲು 244 ಚುನಾವಣಾಧಿಕಾರಿಗಳು ಹಾಗೂ 244 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. 1,557 ಅಧ್ಯಕ್ಷಾಧಿಕಾರಿಗಳು ಹಾಗೂ 4,671 ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 6,228 ಮಂದಿಗೆ ತರಬೇತಿ ನೀಡಲಾಗುವುದು ಎಂದರು.

ಕೋವಿಡ್ ನಿಯಂತ್ರಣ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಶೇ 1ಕ್ಕಿಂತಲೂ ಕಡಿಮೆಯಾಗಿವೆ. 100ಕ್ಕಿಂತ ಕಡಿಮೆ ಕೋವಿಡ್‌ ಪೀಡಿತರು ಜಿಲ್ಲೆಯಲ್ಲಿದ್ದಾರೆ. ಆದರೆ, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸಿ, ಅಂತರವನ್ನು ಕಾಪಾಡಬೇಕು. ಸರ್ಕಾರದ ಸೂಚನೆಯಂತೆ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಲು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 113 ಶೀತಲ ಘಟಕಗಳನ್ನು ಗುರುತಿಸಲಾಗಿದೆ. ಪ್ರಥಮ ಹಂತದಲ್ಲಿ ಲಸಿಕೆ ನೀಡಲು ಗುರುತಿಸಲಾಗಿರುವ 12 ಸಾವಿರ ಮಂದಿಯ ಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅರ್ಹ ಮತದಾರರು:8,12,126
ಪುರುಷ ಮತದಾರರು:4,06,446
ಮಹಿಳಾ ಮತದಾರರು:4,05,680

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT