ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಶಿವಮೊಗ್ಗ ಗುರುತಿಸಿಕೊಳ್ಳಲಿದೆ: ಬಿಎಸ್‌ವೈ

ಜಿಲ್ಲೆಯ ಅಭಿವೃದ್ಧಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ
Last Updated 24 ಜುಲೈ 2021, 12:20 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿರುವೆ.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಭವಿಷ್ಯದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಿಲ್ಲೆಯಲ್ಲಿ ₹ 1074 ಕೋಟಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ₹ 560 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಶನಿವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ವರ್ಚುಯಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ಸ್ಮರಣೀಯವಾಗಿಸಲು, ಸರ್ವ ಋತುಗಳಲ್ಲೂ ಪ್ರವಾಸಿಗರನ್ನು ಸೆಳೆಯಲು ₹ 185 ಕೋಟಿ ವೆಚ್ಚದಲ್ಲಿ 24 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವೇಶದ್ವಾರ, ಶರಾವತಿ ವಿಗ್ರಹ, ಮೂರು ಅಟ್ಟಣಿಗೆಯ ವೀಕ್ಷಣಾ ಗ್ಯಾಲರಿ, ಪಾವಾಹನಗಳ ನಿಲುಗಡೆ, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ಬೋಟಿಂಗ್, ಜಲಕ್ರೀಡೆ, ಜಲಪಾತವನ್ನು ಸನಿಹದಿಂದ ನೋಡುವ ಅವಕಾಶ ಕಲ್ಪಿಸುವ ರೋಪ್ ವೇ ಸೇರಿದಂತೆ ಹತ್ತು ಹಲವು ಸೌಲಭ್ಯ ಒದಗಿಸುವ ಕಾಮಗಾರಿಗಳು ಭರದಿಂದ ಸಾಗುತ್ತಿವೆ.ಸಕ್ಕರೆಬೈಲಿನ ಆನೆ ಬಿಡಾರದಲ್ಲಿ ಜೈವಿಕ ಉದ್ಯಾನವನ ನಿರ್ಮಾಣಗೊಳ್ಳಲಿದೆ. ಆನೆ ಕ್ಯಾಂಪ್, ದ್ವೀಪ, ಬೋಟಿಂಗ್, ಸಫಾರಿ ಟ್ರ್ಯಾಕ್‌ ಸಿದ್ಧವಾಗಲಿವೆ ಎಂದು ಮಾಹಿತಿ ನೀಡಿದರು.

ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಗಳ 249 ಕೆರೆಗಳಿಗೆ ಹಾಗೂ ಹಿರೇಕೆರೂರು ತಾಲ್ಲೂಕಿನ 6 ಕೆರೆಗಳಿಗೆ ನೀರು ಒದಗಿಸುವ ₹ 850 ಕೋಟಿ ವೆಚ್ಚದ ನೀರಾವರಿ ಯೋಜನೆ ಪೂರ್ಣಗೊಂಡಿದೆ.ಅಂಜನಾಪುರ ಹೋಬಳಿಯ ಹೊಸಹಳ್ಳಿ ಏತ ನೀರವಾರಿ ಎರಡು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು. ಜಿಲ್ಲೆಯ ನೀರಾವರಿ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣ ಬದಲಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಗಾನೆ ವಿಮಾನ ನಿಲ್ದಾಣದಲ್ಲಿ ಏರ್ಬಸ್‌ ಮಾದರಿಯ ವಿಮಾನಗಳು ಇಳಿಯಲು ಸಾಧ್ಯವಾಗುವಂತಹ ರನ್‌ವೇ ರೂಪಿಸಲಾಗುತ್ತಿದೆ. ₹ 384 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣ ಶೀಘ್ರ ಪೂರ್ಣಗೊಳ್ಳಲಿದೆ. ಶಿವಮೊಗ್ಗ ಸೇರಿದಂತೆ ಸುತ್ತಲ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.ಪ್ರವಾಸೋದ್ಯಮ, ಕೈಗಾರಿಕಾ ಅಭಿವೃದ್ಧಿ, ಸ್ಥಳೀಯರ ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ. ₹ 258 ಕೋಟಿ ವೆಚ್ಚದ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ವಿವರ ನೀಡಿದರು.

ಶಿವಮೊಗ್ಗ ವೈದ್ಯಕೀಯ ಕಾಲೇಜು ಆವರಣದಲ್ಲಿ 50 ಹಾಸಿಗೆ ಹೃದಯ ರೋಗ ವಾರ್ಡ್‌, ಕ್ಯಾಥಲ್ಯಾಬ್ ಲೋಕಾರ್ಪಣೆ ಮಾಡಲಾಗಿದೆ. ಶಿವಮೊಗ್ಗದ 46 ಎಕರೆ ವಿಸ್ತಾರದ ಹಳೇ ಜೈಲು ಪ್ರದೇಶದಲ್ಲಿ ₹ 5.35 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ಸಿದ್ಧಪಡಿಸಲಾಗಿದೆ. ಸುಸಜ್ಜಿತ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಹೊರವಲಯ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಿವಮೊಗ್ಗ ನಗರ ರೈಲು ನಿಲ್ನೂದಾಣದ ಬಳಿ 100 ಅಡಿ ರಿಂಗ್ ರಸ್ತೆಯನ್ನು ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೆಸ್ಕಾಂ ವಲಯ ಕಚೇರಿಗೆ ₹ 9ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ನವುಲೆಯಲ್ಲಿ ಮೆಸ್ಕಾಂ ಉಪವಿಭಾಗ ಕಚೇರಿ, ಭದ್ರಾವತಿಯಲ್ಲಿ ವಿಭಾಗೀಯ ಕಚೇರಿ, ಶಿವಮೊಗ್ಗದಲ್ಲಿ ಮೆಸ್ಕಾಂ ಅತಿಥಿಗೃಹ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಹೆದ್ದಾರಿ ಸಂಪರ್ಕ ಉತ್ತಮಗೊಳ್ಳುತ್ತಿದೆ. ₹ 482.84 ಕೋಟಿ ವೆಚ್ಚದಲ್ಲಿಸಿಗಂಧೂರು ಸೇತುವೆ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷ್ಣಾದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಭೈರತಿ ಬಸವರಾಜ್, ಬಿ.ಸಿ.ಪಾಟೀಲ್, ಎಂಟಿಬಿ ನಾಗರಾಜ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಅನಂತ ಹೆಗಡೆ ಅಶೀಸರ ಉಪಸ್ಥಿತರಿದ್ದರು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿಸಂಸದ ಬಿ.ವೈ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಚಿವ ಕೆ.ಎಸ್. ಈಶ್ವರಪ್ಪ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ವಿಧಾನ ಪರಿಷತ್ ಸದ್ಯರಾದ ಎಸ್‌.ರುದ್ರೇಗೌಡ್ರು, ಆರ್.ಪ್ರಸನ್ನಕುಮಾರ್, ಶಾಸಕ ಕೆ.ಬಿ.ಆಶೋಕ್ ನಾಯ್ಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವ ಕುಮಾರ್,ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಉಪ ಮೇಯರ್ ಶಂಕರ್‌ ಗನ್ನಿ, ‘ಸೂಡಾ’ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ’ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌.ವೈಶಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT