ಶಿರಾಳಕೊಪ್ಪ: ‘ಶಿಕಾರಿಪುರ, ಶಿವಮೊಗ್ಗ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಟೋಲ್‌ನಿಂದಾಗಿ ಸ್ಥಳೀಯ ನಾಗರಿಕರಿಗೆ ನಿತ್ಯ ತೊಂದರೆ ಆಗುತ್ತಿದೆ. ಹಾಗಾಗಿ, ಈ ಟೋಲ್ ತೆರವುಗೊಳಿಸಬೇಕು. ಅದಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಸಭಾಂಗಣದಲ್ಲಿ ಶುಕ್ರವಾರ ಟೋಲ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಟೋಲ್‌ನಿಂದಾಗಿ ಸ್ಥಳೀಯರಿಗೆ, ಅಕ್ಕ ಪಕ್ಕ ಇರುವ ಗ್ರಾಮಗಳ ರೈತರಿಗೆ, ರೋಗಿಗಳಿಗೆ ನಿತ್ಯ ಆರ್ಥಿಕವಾಗಿ ತೊಂದರೆ ಆಗುತ್ತಿದೆ. ಸ್ಥಳೀಯರು ತಾಲ್ಲೂಕು ಕೇಂದ್ರಕ್ಕೆ ಓಡಾಡಲು ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಈ ಹೋರಾಟಕ್ಕೆ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಹೋರಾಟ ಸಮಿತಿಯನ್ನು ವಕೀಲ ಶಿವರಾಜ್ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ವಕೀಲ ವಿನಯ್ ಪಾಟೀಲ್ ಸಂಚಾಲಕರಾಗಿ ಹಾಗೂ ಶಿರಾಳಕೊಪ್ಪ ರೈತ ಸಂಘದ ಅಧ್ಯಕ್ಷ ನವೀದ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, 5 ಜನ ಉಪಾಧ್ಯಕ್ಷರಾಗಿ, 6 ಜನ ಸಹ ಕಾರ್ಯದರ್ಶಿಗಳಾಗಿ ಹಾಗೂ 10 ಜನರನ್ನು ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಪಟ್ಟಣದ ಹಿರಿಯ ವೈದ್ಯ ಮುರುಘರಾಜ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಲಪ್ಪ ಗೌಡ, ಕಾರ್ಯಾಧ್ಯಕ್ಷ ಪುಟ್ಟನಗೌಡ, ಮುಖಂಡರಾದ ಜಯಪ್ಪ ಗೌಡ, ಆಮ್ ಆದ್ಮಿ ಪಾರ್ಟಿಯ ಚಂದ್ರಶೇಖರ ರೇವಣಕರ, ಕೆಪಿಸಿಸಿ ಸದಸ್ಯ ಎನ್. ಚಂದ್ರಪ್ಪ ಹಿರೇಜಂಬೂರು, ಪುರಸಭೆ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ ಲೋಕೇಶ್, ಮಾಜಿ ಸದಸ್ಯ ಐ.ಎಂ.ಶಿವಾನಂದ ಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಕೆ.ಶಂಭು, ಮಳವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೋಡಿಹಳ್ಳಿ ಮುತ್ತುಗೌಡ, ಸಂಗಮೇಶ್, ಶಕ್ತಿ ಪಾಟೀಲ್, ಜಿಲೇಬಿ ಮಂಜುನಾಥ ಸೇರಿ ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.