ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದೀರ್ಘಾವಧಿಯ ಪರವಾನಗಿ (ಲೈಸೆನ್ಸ್) ಪಡೆಯಲು ಇರುವ ಅಡೆತಡೆಗಳನ್ನು ಮುಂದಿನ ಎರಡು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಹೇಳಿದರು.
ಸೋಗಾನೆಯಿಂದ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕೊಟ್ಟಿರುವ ಒಂದು ವರ್ಷದ ಅವಧಿಯ ಪರವಾನಗಿ (ಲೈಸೆನ್ಸ್) ಕಳೆದ ಆಗಸ್ಟ್ 23ಕ್ಕೆ ಮುಗಿದಿದೆ. ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಹಾಗೂ ಭದ್ರತಾ ಮಾನಂದಡಗಳ ಪೂರೈಸದ ಹಿನ್ನೆಲೆಯಲ್ಲಿ ಅತೃಪ್ತಿಗೊಂಡಿರುವ ಡಿಜಿಸಿಎ ಅದನ್ನು ಒಂದು ತಿಂಗಳು ಮಾತ್ರ (ಸೆಪ್ಟೆಂಬರ್ 23) ವಿಸ್ತರಿಸಿದೆ.
ಹೀಗಾಗಿ ಗುರುವಾರ ಇಲ್ಲಿನ ವಿಮಾನ ನಿಲ್ದಾಣದಕ್ಕೆ ಭೇಟಿ ನೀಡಿದ ಖುಷ್ವೂ ಗೋಯಲ್, ಅಲ್ಲಿನ ಸೌಕರ್ಯಗಳು ಹಾಗೂ ಆಗಬೇಕಿರುವ ಕೆಲಸಗಳ ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಮಾನ ನಿಲ್ದಾಣದಲ್ಲಿ ಕೆಲಸಗಳಿಗೆ ಕಾಲಮಿತಿ ನಿಗದಿಪಡಿಸಲು ಆಗೊಲ್ಲ. ಆದರೆ ಡಿಜಿಸಿಎ ನಿಗದಿಪಡಿಸಿರುವ ಸುರಕ್ಷತಾ ಹಾಗೂ ಭದ್ರತಾ ಮಾನದಂಡ ಪೂರೈಸಲು ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು. ಮೊದಲು ಅಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಡಿಜಿಸಿಎಗೆ ಖುದ್ದಾಗಿ ಮನವರಿಕೆ:
ವಿಮಾನ ಹಾರಾಟಕ್ಕೆ ದೀರ್ಘಾವಧಿಗೆ ಲೈಸೆನ್ಸ್ ನೀಡುವಂತೆ ಹಾಗೂ ಆ ನಿಟ್ಟಿನಲ್ಲಿ ಕೆಎಸ್‌ಐಐಡಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ಖುದ್ದಾಗಿ ದೆಹಲಿಗೆ ತೆರಳಿ ಡಿಜಿಸಿಎ ಮುಖ್ಯಸ್ಥರು ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವೆ. ಲೈಸೆನ್ಸ್ ದೀರ್ಘಾವಧಿಗೆ ಕೊಡುವಂತೆ ಶೀಘ್ರ ಮತ್ತೊಮ್ಮೆ ಡಿಜಿಸಿಎಗೆ ಪ್ರಸ್ತಾವ ಸಲ್ಲಿಸಲಾಗುವುದು. ಆ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಿ ಸಭೆ ನಡೆಸುವೆ ಎಂದು ಖುಷ್ಬೂ ‘ಫ್ರಜಾವಾಣಿ’ಗೆ ತಿಳಿಸಿದರು.
ಸುರಕ್ಷತಾ ಮಾನದಂಡ ಪೂರೈಸಲು ಕೆಎಸ್‌ಐಐಡಿಸಿ ಬಹುತೇಕ ಕ್ರಮ ಕೈಗೊಂಡಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇದನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸಚಿವ ಎಂ.ಬಿ.ಪಾಟೀಲ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲವೂ ಸರಿ ಆಗಲಿದೆ. ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೂಡ ಪಾಲ್ಗೊಂಡಿದ್ದರು. ಬೇರೆ ಬೇರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅವರ ನೆರವು ಪಡೆಯಲಾಗುವುದು ಎಂದು ತಿಳಿಸಿದರು.
ಇಂಧನ ಫಾರಂ ಸ್ಥಾಪನೆಗೆ ಅನುಮತಿ ಕೊಡಿ: ಬಿವೈಆರ್ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಫಾರಂ ಸ್ಥಾಪನೆಗೆ ತುರ್ತಾಗಿ ಅನುಮತಿ ನೀಡುವಂತೆ ಕೋರಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಗುರುವಾರ ಸಂಸದ ಬಿ.ವೈ.ರಾಘವೇಂದ್ರ ದೆಹಲಿಯಲ್ಲಿ ಮನವಿ ಸಲ್ಲಿಸಿದರು. ದೂರದ ಇಂಧನ ಮೂಲ ಸ್ಟೇಷನ್ ಗಳಿಂದ ಇಂಧನ ಪಡೆಯುವುದರಿಂದ ವಿಮಾನಯಾನ ಸಂಸ್ಥೆಗಳಿಗೆ ಆಗುತ್ತಿರುವ ಕಾರ್ಯಾಚರಣೆಯ ವೆಚ್ಚ ಕಡಿಮೆ ಮಾಡಲು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಫಾರಂ ಸ್ಥಾಪಿಸುವುದು ಅತ್ಯಗತ್ಯ. ಈಗಾಗಲೇ 2023ರ ಏಪ್ರಿಲ್‌ನಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಹಾಗೂ ಭಾರತೀಯ ತೈಲ ನಿಗಮದ (ಐಒಸಿಎಲ್) ನಡುವೆ ಒಪ್ಪಂದ ಆಗಿದ್ದು ಇಂಧನ ಫಾರಂ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿರುವ ಪ್ರಸ್ತಾವ ಐಒಸಿಎಲ್ ಅಧ್ಯಕ್ಷರ ಬಳಿ ಬಾಕಿ ಇದೆ. ಆದಷ್ಟು ಬೇಗನೆ ಇತ್ಯರ್ಥ ಪಡಿಸಲು ಅವರಿಗೆ ನಿರ್ದೇಶನ ನೀಡುವಂತೆ ಸಂಸದ ರಾಘವೇಂದ್ರ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.