ಸಿಗಂದೂರು (ತುಮರಿ): ಆಷಾಢ ಮಾಸದ ಕೊನೆಯ ಭೀಮನ ಅಮಾವಾಸ್ಯೆ ಅಂಗವಾಗಿ ಚೌಡೇಶ್ವರಿ ದೇವಸ್ಥಾನಕ್ಕೆ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು.
ಮಲೆನಾಡಿನ ಶಕ್ತಿ ದೇವತೆ ಚೌಡೇಶ್ವರಿ ದೇವಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸೀಗೇ ಕಣಿವೆಯ ದೇವಿ ಮೂಲ ಸ್ಥಾನದಲ್ಲಿಯೂ ಪೂಜೆ ನಡೆಯಿತು.
ಅಮವಾಸ್ಯೆಯ ಹಿನ್ನೆಲೆಯಲ್ಲಿ ದೇವಳದ ಪ್ರಾಂಗಣದಿಂದ ಗರ್ಭಗುಡಿಯವರೆಗೆ ವಿವಿಧ ಬಗೆಯ ಫಲ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧೆಡೆಯಿಂದ ಬಂದ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಮುಂಜಾನೆ 5ರಿಂದಲೇ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಚಂಡಿಕಾ ಹವನ ದೇವಿ ಪಾರಾಯಣ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ, ಆಭರಣ ಪೂಜೆ ನೆರವೇರಿಸಲಾಯಿತು.
ಹೊಳೆಬಾಗಿಲಿನಲ್ಲಿ ಜನದಟ್ಟಣೆ:
ಭಾನುವಾರ ಮಳೆ ಕೊಂಚ ಮಟ್ಟಿಗೆ ತಗ್ಗಿದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಪಾರ ಪ್ರಮಾಣದ ಭಕ್ತರು ಸಿಗಂದೂರು ದೇವಿ ದರ್ಶನ ಪಡೆದರು. ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಹೊಳೆಬಾಗಿಲಿನ ಲಾಂಚಿನಲ್ಲಿ ಜನರ ದಟ್ಟಣೆ ಇತ್ತು. ಅಂಬಾರಗೊಡ್ಲು ತಟದಲ್ಲಿ ವಾಹನಗಳ ಸಾಲು ಕಂಡುಬಂತು.
ಭೀಮನ ಅಮಾವಾಸ್ಯೆ ಅಂಗವಾಗಿ ದೇವಿಗೆ ಮಾಡಿರುವ ವಿಶೇಷ ಅಲಂಕಾರ.