ಕೆರೆಬೇಟೆ ಇಲ್ಲಿನ ಜನರಿಗೆ ಕೇವಲ ಮೀನು ಹಿಡಿಯುವ ಸಂಭ್ರಮವಲ್ಲ; ಅದು ಊರಿನ ಒಗ್ಗಟ್ಟು, ತಲೆಮಾರುಗಳಿಂದ ಬಂದ ಸಂಸ್ಕೃತಿ ಮತ್ತು ಸಮುದಾಯದ ಹಬ್ಬ. ಚಿಟ್ಟೂರಿನ ಕೆರೆಯಲ್ಲಿ ಹದಿನೈದು ವರ್ಷಗಳ ನಂತರ ನಡೆದ ಮೀನುಬೇಟೆಯ ರೋಚಕ ಕ್ಷಣಗಳು, ಜನರ ಹುರುಪು ಮತ್ತು ಗ್ರಾಮೀಣ ಬದುಕಿನ ಜೀವಂತ ಚಿತ್ರಣ ಇಲ್ಲಿದೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಿಟ್ಟೂರಿನ ಕೆರೆ ಏರಿಯ ಹಾದಿಯಲ್ಲಿ ಹನುಮಪ್ಪನ ಗುಡಿ ದಾಟಿ ಸರ್ಕಾರಿ ಶಾಲೆಯ ಅಂಗಳಕ್ಕೆ ಬಂದಾಗ ಬೆಳಗಿನ ಬಿಸಿಲು ನಿಧಾನವಾಗಿ ಹರಡತೊಡಗಿತ್ತು. ಕೆರೆಯ ದಂಡೆಯತ್ತ ಹೋಗುವ ರಸ್ತೆ ತುಂಬ ಬೈಕ್, ಆಟೊ, ಜನರ ಓಡಾಟದಿಂದ ಗಿಜಿಗುಡುತ್ತಿತ್ತು. ದೂರದಿಂದಲೇ ಗದ್ದಲ ಕೇಳಿಬರುತ್ತಿತ್ತು. ಕೈಯಲ್ಲಿ ಕೂಣಿ, ಜರಡಿ ಬಲೆ, ಚೀಲ ಹಿಡಿದವರು ಗುಂಪು ಗುಂಪಾಗಿ ಕೆರೆಯತ್ತ ನಡೆದುಹೋಗುತ್ತಿದ್ದರು. ಸೊರಬದ ಭಾಸ್ಕರ್ ಗೆಂಡ್ಲ, ‘ಬೇಗ ಬನ್ನಿ… ಜನ ಈಗಲೇ ಕೆರೆಗೆ ಇಳಿಯೋಕೆ ಸಜ್ಜಾಗಿದ್ದಾರೆ’ ಎಂದು ಹೇಳುತ್ತಾ ನಮ್ಮನ್ನು ದಂಡೆಯತ್ತ ಕರೆದೊಯ್ದರು.

ಶಿವಮೊಗ್ಗದಿಂದ ಶಿರಾಳಕೊಪ್ಪ ದಾಟಿ, ಅಕ್ಕಮಹಾದೇವಿಯ ಹುಟ್ಟೂರು ಉಡುಗಣಿ–ತಡಗಣಿ ಹಾದಿಯಾಗಿ ಬಂದ ನಮ್ಮ ಪ್ರಯಾಣದ ಕೊನೆ ಚಿಟ್ಟೂರಿನ ಕೆರೆಯ ದಂಡೆಯಲ್ಲಿ ನಿಂತಾಗಲೇ ಸಾರ್ಥಕ ಅನ್ನಿಸಿತು.

ಆ ದಿನ ಕೆರೆ ಹಬ್ಬದ ಮೈದಾನವಾಗಿತ್ತು. ಕೆರೆಯ ಅಂಗಳ ಈಗಾಗಲೇ ಜನರಿಂದ ತುಂಬಿಹೋಗಿತ್ತು. ಕೆಲವರು ಚಡ್ಡಿಯಲ್ಲಿ, ಕೆಲವರು ಮಡಿಚಿದ ಧೋತ್ರದಲ್ಲಿ. ಹಲವರು ಬರೀ ಮೈಯಲ್ಲಿ. ಕೈಯಲ್ಲಿ ಕೂಣಿ, ಜರಡಿ ಬಲೆ, ಚೀಲಗಳು. ಕೆಲವರು ಭುಜದ ಮೇಲೆ ಒದ್ದೆಯಾದ ಬಲೆ ಸುತ್ತಿಕೊಂಡಿದ್ದರೆ, ಕೆಲವರು ನೀರಿಗೆ ಇಳಿಯುವ ಮುನ್ನವೇ ಮಣ್ಣಿನ ಮೇಲೆ ಕುಳಿತು ಕಾಲಿಗೆ ಮಣ್ಣು ಅಂಟಿಸಿಕೊಂಡು ಸಿದ್ಧರಾಗುತ್ತಿದ್ದರು.

ಎಲ್ಲರ ಕಣ್ಣುಗಳೂ ಒಂದೇ ಕಡೆ–ಕೆರೆಯ ನೀರಿನ ಮೇಲೆ. ಅಲ್ಲಿ ನೀರಿಗಿಂತ ಹೆಚ್ಚು ಇದ್ದದ್ದು ಜನರ ಉತ್ಸಾಹ.

ಐಸ್ಕ್ರೀಂ, ಕಬ್ಬಿನ ಹಾಲಿನ ಗಾಡಿಯವರು ಪೀಪಿ ಊದುತ್ತಾ ಜನರ ನಡುವೆ ದಾರಿ ಮಾಡಿಕೊಂಡು ಹೋಗುತ್ತಿದ್ದರು. ಆ ಗದ್ದಲದ ಮಧ್ಯೆ ಕೆರೆಬೇಟೆ ಆಯೋಜಕರ ವಾಹನ ದಂಡೆಯ ಸುತ್ತ ತಿರುಗುತ್ತಿತ್ತು. ಧ್ವನಿವರ್ಧಕದ ಗರಗರ ಶಬ್ದ ಗಾಳಿಯಲ್ಲಿ ಚದುರಿಕೊಂಡಿತ್ತು.

‘ತಂಟೆ ತಕಾರರು ಮಾಡುವವರಿಗೆ ಅವಕಾಶವಿಲ್ಲ… ಗ್ರಾಮ ಸಮಿತಿಯ ಅನುಮತಿ ಇಲ್ಲದೇ ಕೆರೆಗೆ ಇಳಿಯುವಂತಿಲ್ಲ… ದೊಣ್ಣೆ, ಕತ್ತಿ ಬಳಸುವಂತಿಲ್ಲ… ₹600 ಶುಲ್ಕ ಪಾವತಿ ಕಡ್ಡಾಯ…’

ಈ ಪ್ರಕಟಣೆ ಜನರ ಗದ್ದಲದಲ್ಲಿ ಕಿವಿಗೆ ಕ್ಷೀಣವಾಗಿ ಬೀಳುತ್ತಿತ್ತು. ಅಲ್ಲೇ ಪೊಲೀಸ್ ಮೀಸಲು ಪಡೆ ವಾಹನ ನಿಂತಿತ್ತು. ಹಬ್ಬದ ಸಂಭ್ರಮದ ಮಧ್ಯೆಯೂ ಎಚ್ಚರಿಕೆಯ ಕಣ್ಣುಗಳು ಸುತ್ತಾಡುತ್ತಿದ್ದವು.

ಜರಡಿ ಬಲೆಯ ಗೌರವ

ಕೆರೆಯ ಅಂಚಿನಲ್ಲಿ ಜರಡಿ ಬಲೆ ಹಿಡಿದು ನಿಂತಿದ್ದ ಕಾರೇಕೊಪ್ಪದ ಟಿ.ಪಿ. ಅಶೋಕ್ ಮುಖದಲ್ಲಿ ವಿಚಿತ್ರ ಆತ್ಮವಿಶ್ವಾಸ ಕಾಣಿಸುತ್ತಿತ್ತು. ‘ಬಾಳ ವರ್ಷ ಬೇಟೆ ಮಾಡದ ಕೆರೆ ಸಿಕ್ಕಿದ್ರೆ ಮೀನು ಹಿಡಿಯುವವರಿಗೆ ಹಬ್ಬ. ಚಿಟ್ಟೂರಿನಲ್ಲಿ ಈ ಬಾರಿ ಜರಡಿ ಬಲೆಗೆ ಅವಕಾಶ ಕೊಟ್ಟಿದ್ದಾರೆ. ಬೇರೆ ಕಡೆ ಇದಕ್ಕೆ ಅನುಮತಿ ಸಿಗಲ್ಲ’ ಎಂದರು. ಅವರ ಸುತ್ತ ನಿಂತವರು ಕುತೂಹಲದಿಂದ ಕೇಳುತ್ತಿದ್ದರು.

‘ದೊಡ್ಡ ಮೀನು ನೀರಿನ ಆಳದಲ್ಲಿ ಇರುತ್ತವೆ. ಜರಡಿ ಬಲೆಯಲ್ಲಿ ಆಳಕ್ಕೆ ಗೋರಲಿಕ್ಕೆ ಆಗೊಲ್ಲ. ಮೇಲೆ ಗೋರುತ್ತಾ ಹೋದಂತೆ ಸಣ್ಣ ಮೀನು ಹೆಚ್ಚು ಬೀಳುತ್ತವೆ. ದೊಡ್ಡ ಮೀನು ಸುಸ್ತಾಗಿ ತಲೆ ಎತ್ತಿ ಬಂದಾಗ ಇದಕ್ಕೆ ಸಿಕ್ಕುತ್ತವೆ…’–ಅವರ ಮಾತು ಕೇಳಿದಾಗ ಅದು ಕೇವಲ ಮೀನು ಹಿಡಿಯುವ ತಂತ್ರವಲ್ಲ ಅನ್ನಿಸಿತು. ಅದು ಅನುಭವದ ಜ್ಞಾನ. ನೀರಿನ ಸ್ವಭಾವ ತಿಳಿದವರ ಮಾತು.

ಕುಪ್ಪುಗಡ್ಡೆಯ ನಾಗರಾಜ ಮತ್ತೊಂದು ಕಡೆ ಗೆಳೆಯರ ಜೊತೆ ನಿಂತಿದ್ದರು. ಅವರ ಮುಖದಲ್ಲಿ ಇತರರಿಗಿಂತ ಹೆಚ್ಚು ಖುಷಿ ಕಾಣಿಸುತ್ತಿತ್ತು.

‘ಇದೊಂಥರಾ ಚಟ. ಮೀನು ಸಿಗಲಿ ಬಿಡಲಿ… ಬೇಟೆಗೆ ಬರಲೇಬೇಕು’ ಎಂದು ನಕ್ಕರು.

ಅವರು ಮುಂಜಾನೆ ಆರು ಗಂಟೆಗೆ ಬನವಾಸಿಗೆ ಹೋಗಿ ಗೆಳೆಯನ ಕರೆತಂದಿದ್ದರಂತೆ.

‘ಈ ಗದ್ದಲ… ಈ ಓಟ… ಜನರ ಕೂಗು… ಅದೇ ಮಜಾ’ ಎಂದರು.

ಪ್ರತಿಷ್ಠೆ ಹೆಚ್ಚಿಸುವ ಬೇಟೆ

ಚಿಟ್ಟೂರಿನ ರತ್ನಾಕರ ಮಾತ್ರ ಕೆರೆಗೆ ಇಳಿಯದೇ ದಂಡೆಯಲ್ಲೇ ನಿಂತು ಎಲ್ಲವನ್ನೂ ಗಮನಿಸುತ್ತಿದ್ದರು.

‘ನಾವು ಮೀನು ತಿನ್ನಲ್ಲ. ನೋಡೋಕೆ ಬಂದಿದ್ದೇವೆ. ಇದು ನಮ್ಮೂರ ಹಬ್ಬ’ ಎಂದರು. ಅವರ ಕಣ್ಣಲ್ಲಿ ಊರಿನ ಬಗ್ಗೆ ಹೆಮ್ಮೆ ಮಿನುಗುತ್ತಿತ್ತು.

‘ಇಲ್ಲಿ ಗೆದ್ದವರಿಗೆ ಬಹುಮಾನ ಕೊಡಲ್ಲ. ಆದರೆ ಹೆಚ್ಚು ಮೀನು ಹಿಡಿದವರ ಫೋಟೊ ವಾಟ್ಸಪ್, ಫೇಸ್ಬುಕ್ನಲ್ಲಿ ಓಡಾಡುತ್ತವೆ. ಇನ್ನೊಂದು ವಾರ ಸೀಮೆಯೆಲ್ಲ ಅವರದ್ದೇ ಮಾತು. ಯಾವ ಮೀನು ಹಿಡಿದರು, ಎಷ್ಟು ತೂಕ, ಹೇಗೆ ಹಿಡಿದರು–ಎಲ್ಲವೂ ಚರ್ಚೆ ಆಗುತ್ತವೆ. ಮುಂದಿನ ಬೇಟೆಯಲ್ಲಿ ಜನ ಅವರನ್ನು ಗುರುತಿಸಿ ಮಾತಾಡಿಸುತ್ತಾರೆ. ಅದೇ ಇಲ್ಲಿ ಬಹುಮಾನ’. ಗ್ರಾಮೀಣ ಬದುಕಿನ ಹೊಸ ಪ್ರತಿಷ್ಠೆ ಅದು. ಒಮ್ಮೆ ಊರ ಚಾವಡಿಯಲ್ಲಿ ಹರಿದಾಡುತ್ತಿದ್ದ ಕಥೆಗಳು ಈಗ ಮೊಬೈಲ್ ಪರದೆಯಲ್ಲಿ ಹರಿದಾಡುತ್ತಿವೆ.

ಬೆಳಿಗ್ಗೆ ನಿಧಾನವಾಗಿ ಬಿಸಿಲು ಹೆಚ್ಚಾಗುತ್ತಿತ್ತು. ಕೆರೆಯ ನೀರು ದೂರದಿಂದ ಶಾಂತವಾಗಿ ಕಾಣಿಸುತ್ತಿದ್ದರೂ, ದಂಡೆಯಲ್ಲಿ ನಿಂತವರಲ್ಲಿ ತಳಮಳ ಕಾಣಿಸುತ್ತಿತ್ತು.

ಯಾರೋ ಒಬ್ಬರು ಬಲೆಯ ಗಂಟು ಬಿಗಿಸಿದರು. ಮತ್ತೊಬ್ಬರು ಚೀಲವನ್ನು ತಲೆಗೆ ಕಟ್ಟಿ ಸಿದ್ಧರಾದರು. ಕೆಲವರು ಕಾಲುಗಳನ್ನು ಮಣ್ಣಿನಲ್ಲಿ ಒರೆಸಿ ಹಿಡಿತ ಪರೀಕ್ಷಿಸಿದರು. ಕೆಲವರು ನೀರಿನ ಆಳವನ್ನು ಕಣ್ಣಿಂದಲೇ ಅಳೆಯುತ್ತಿದ್ದರು.

ಒಂದು ಕ್ಷಣಕ್ಕೆ ಗದ್ದಲ ಕಡಿಮೆಯಾದಂತಾಯಿತು. ಆಮೇಲೆ ಆಕಾಶವೇ ಒಡೆದಂತೆ ಒಂದು ಸದ್ದು.

‘ಹೋಯ್…!’

ಅಷ್ಟೇ.

ಸಾವಿರಾರು ಮಂದಿ ಒಂದೇ ಕ್ಷಣದಲ್ಲಿ ಕೆರೆಯತ್ತ ನುಗ್ಗಿದರು.

ಕೂಣಿ, ಜರಡಿ ಬಲೆ, ಚೀಲಗಳು ಗಾಳಿಯಲ್ಲಿ ಹಾರಿದವು. ಕೆರೆಯ ನಿಶ್ಚಲ ನೀರು ಕ್ಷಣಾರ್ಧದಲ್ಲಿ ಮಣ್ಣಿನ ಬಣ್ಣಕ್ಕೆ ತಿರುಗಿತು. ನೀರು ಚಿಮ್ಮಿತು. ಜನರು ಒಬ್ಬರನ್ನೊಬ್ಬರು ತಳ್ಳಿಕೊಂಡು ಒಳಗೆ ಓಡಿದರು.

ಆ ದೃಶ್ಯ ದೂರದಿಂದ ನೋಡಿದರೆ ನೀರಿನೊಳಗೆ ಯುದ್ಧ ಶುರುವಾಯಿತೇನೋ ಅನ್ನಿಸುತಿತ್ತು.

ಜನರ ಗುಂಪು ನೀರಿನೊಳಗೆ ನುಗ್ಗುತ್ತಿದ್ದಂತೆಯೇ ಆಳದಲ್ಲಿದ್ದ ಮೀನುಗಳು ಹೆದರಿ ದಂಡೆಯತ್ತ ಓಡತೊಡಗಿದವು. ಸಣ್ಣ ಮೀನುಗಳು ಅಲೆಗಳ ಜೊತೆ ತೀರಕ್ಕೆ ತೇಲಿ ಬಂದವು. ನೋಡಲು ನಿಂತಿದ್ದ ಮಕ್ಕಳು ಅವುಗಳನ್ನು ಕೈಯಲ್ಲಿ ಹಿಡಿದು ಚೀಲಕ್ಕೆ ಹಾಕತೊಡಗಿದರು. ಮಹಿಳೆಯರು ಸೀರೆಯ ಕೊನೆಯನ್ನು ಮಡಚಿಕೊಂಡು ಮೀನುಗಳನ್ನು ಸೇರಿಸುತ್ತಿದ್ದರು.

ಒಂದು ದೊಡ್ಡ ಮೀನು ಏಕಾಏಕಿ ನೀರಿನಿಂದ ಹಾರಿದಂತೆ ಮೇಲೆದ್ದು, ಹಿಡಿಯಲು ಹೋಗಿದ್ದವನ ಕೈ ಜಾರಿ ಪಕ್ಕದಲ್ಲಿದ್ದ ಮತ್ತೊಬ್ಬನ ಕೈಗೆ ಸಿಕ್ಕಿತು.

‘ಅಯ್ಯೋ ದುರಾದೃಷ್ಟ!’ ಎಂದು ಸುತ್ತಲಿನವರು ನಕ್ಕರು.

ಅಲ್ಲೊಂದು ಪುಟ್ಟ ಹುಡುಗ ತನ್ನ ಚೀಲದಲ್ಲಿದ್ದ ನಾಲ್ಕು ಸಣ್ಣ ಮೀನುಗಳನ್ನು ಎಣಿಸುತ್ತಾ ಕುಣಿಯುತ್ತಿದ್ದ. ಇನ್ನೊಬ್ಬ ಬಾಲಕ ಮೀನಿನ ಮುಳ್ಳು ಚುಚ್ಚಿಸಿಕೊಂಡು ಅತ್ತಿದ್ದ. ಒಬ್ಬ ವೃದ್ಧ ಬಲೆ ಎಳೆದುಕೊಂಡು ಬರುತ್ತಿದ್ದರೆ, ಅವರ ಹಿಂದೆ ಮೊಮ್ಮಗ ಚೀಲ ಹಿಡಿದು ಓಡುತ್ತಿದ್ದ. ಕೆರೆಯ ದಂಡೆ ಬದುಕಿನ ನೂರಾರು ಸಣ್ಣ ದೃಶ್ಯಗಳಿಂದ ತುಂಬಿಹೋಗಿತ್ತು.

ಮೀನುಗಳ ಮೆರವಣಿಗೆ

ಸ್ವಲ್ಪ ಹೊತ್ತಲ್ಲೇ ಸಾಗರ ತಾಲ್ಲೂಕಿನ ಕಣ್ಣೂರಿನಿಂದ ಬಂದಿದ್ದ ಸುದೀಪ್ ಕೆರೆಯಿಂದ ಹೊರಬಂದರು. ಅವರ ಕೈಯಲ್ಲಿ ಹತ್ತು ಕೆ.ಜಿ.ಗೂ ಹೆಚ್ಚು ತೂಕದ ರೋಣಿ ಮೀನುಗಳ ಗುಚ್ಛ.

ಜನರು ಅವರನ್ನು ಸುತ್ತುವರಿದು ಮೊಬೈಲ್ ತೆಗೆದು ಚಿತ್ರ ಕ್ಲಿಕ್ಕಿಸುತ್ತಿದ್ದರು. ಕೆಲವರು ವಿಡಿಯೊ ಮಾಡುತ್ತಿದ್ದರು.

ಪುರದಿಂದ ಬಂದಿದ್ದ ಮಣಿಕಂಠ ಹುಲಿಗೆಂಡೆ ಮೀನು ಹಿಡಿದು ಹೆಮ್ಮೆಯಿಂದ ನಡೆದುಬಂದರು. ತ್ಯಾಗರ್ತಿಯ ಕೆಲವರು ಚೀಲ ತುಂಬ ಜಬ್ಬು, ಕುಚ್ಚಲು, ಮುರುಗೋಡು ಮೀನುಗಳೊಂದಿಗೆ ದಂಡೆಗೆ ಬಂದರು.

ಹಿಂಡುವಳ್ಳಿ ಬಳಿಯ ಶಿಗ್ಗಾದ ಶಿವಮೂರ್ತಿಗೆ ಅಗಲ ದೇಹದ ಕಾಟ್ಲಾ ಮೀನು ಸಿಕ್ಕಿತ್ತು.

‘ಮನೆಯಲ್ಲಿ ಐವರು ಇದ್ದೇವೆ. ಸಾಕಾಯಿತು’ ಎಂದು ಅವರು ಹೆಗಲಿಗೆ ಚೀಲ ಹಾಕಿಕೊಂಡು ನಕ್ಕರು.

ಅಲ್ಲೇ ಮಾವನಿಗೆ ಹುರಿದುಂಬಿಸುತ್ತಿದ್ದ ಚಿಟ್ಟೂರಿನ ಸುಮಾ ಮುಖದಲ್ಲಿ ಸಂಭ್ರಮ ಉಕ್ಕುತ್ತಿತ್ತು.

‘ಇನ್ನೊಂದು ವಾರ ನಮ್ಮೂರಲ್ಲಿ ಮೀನಿನ ಸಮಾರಾಧನೆ. ಸಾರು, ಫ್ರೈ, ಚಟ್ನಿ, ಗೊಜ್ಜು, ಕಬಾಬ್… ಎಲ್ಲ ಮಾಡ್ತೀವಿ’ ಎಂದರು. ಆ ಮಾತು ಕೇಳುತ್ತಿದ್ದಂತೆಯೇ ಗಾಳಿಯಲ್ಲೇ ಮೀನು ಕರಿಯುವ ವಾಸನೆ ತೇಲಿದಂತಾಯಿತು.

102 ಎಕರೆಗಳ ಹಬ್ಬ

ದಡ್ಡಿಯ ಜಂಗುಳಿಯತ್ತ ಸಾಗುತ್ತಿದ್ದಾಗ ಕೆರೆಬೇಟೆ ಆಯೋಜನ ಸಮಿತಿ ಮುಖ್ಯಸ್ಥ ರೇವಣಪ್ಪ ಎದುರಾದರು.

‘ನಮ್ಮೂರ ಕೆರೆ 102 ಎಕರೆ. ಕುಬಟೂರು ಕೆರೆ ಬಿಟ್ಟರೆ ಸೊರಬ ತಾಲ್ಲೂಕಿನ ಎರಡನೇ ದೊಡ್ಡ ಕೆರೆ’ ಎಂದು ಅವರು ಹೆಮ್ಮೆಯಿಂದ ಹೇಳಿದರು. ಅವರ ಧ್ವನಿಯಲ್ಲಿ ಊರಿನ ಮೇಲಿನ ಪ್ರೀತಿ ಸ್ಪಷ್ಟವಾಗಿತ್ತು.

‘ಇದಕ್ಕೆ ಕುಮದ್ವತಿ ಹೊಳೆಯ ಸಂಪರ್ಕ ಇದೆ. ಕೋಡಿ ಬಿದ್ದಾಗ ಹೊಳೆ ಮೀನುಗಳೆಲ್ಲ ಇಲ್ಲಿ ಸೇರುತ್ತವೆ. ಇಷ್ಟು ವರ್ಷ ಮೀನನ್ನು ಹರಾಜಿಗೆ ಕೊಡುತ್ತಿದ್ದೆವು. ಆದರೆ ಊರಿನವರ ಆಸೆಯಿಂದ ಈ ಬಾರಿ ಕೆರೆಬೇಟೆ ಮಾಡಿದ್ದೇವೆ’.

ಕೂಣಿ ಮತ್ತು ಜೇಡಿ ಬಲೆ ಎರಡೂ ಸೇರಿ ನೋಂದಣಿ ಆಗಿದ್ದು 2,300 ಮಂದಿ. ಸಂಗ್ರಹವಾದ ಒಟ್ಟು ಮೊತ್ತ ₹13.80 ಲಕ್ಷ.

‘ಶಿರಸಿ, ಸಿದ್ದಾಪುರ, ಬನವಾಸಿ, ಹೊಸನಗರ, ರಿಪ್ಪನ್ಪೇಟೆ, ಹಾನಗಲ್, ರಾಣೆಬೆನ್ನೂರು, ಶಿವಮೊಗ್ಗ… ಎಲ್ಲ ಕಡೆಗಳಿಂದ ಜನ ಬಂದಿದ್ದಾರೆ’ ಎಂದರು.

ಕಳೆದ ವರ್ಷ ಹತ್ತು ಲಕ್ಷ ಮೀನುಮರಿ ಬಿಟ್ಟಿದ್ದಾರಂತೆ.

‘ಎಲ್ಲರಿಗೂ ಮೀನು ಸಿಗುತ್ತದೆ ಅನ್ನೋ ನಂಬಿಕೆ ಇದ್ದರೆ ಮಾತ್ರ ಜನ ಇಷ್ಟು ದೂರ ಬರುತ್ತಾರೆ’ ಎಂದು ನಕ್ಕರು.

ಮಧ್ಯಾಹ್ನಕ್ಕೆ ಬಿಸಿಲು ಕೆರೆಯ ನೀರನ್ನೇ ಕಂದು ಬಣ್ಣಕ್ಕೆ ತಿರುಗಿಸಿತ್ತು. ಕೆಲವರು ಮೀನು ಹಿಡಿದ ಖುಷಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕೆಲವರು ರೀಲ್ಸ್ ಮಾಡುತ್ತಿದ್ದರು. ದೊಡ್ಡ ಮೀನು ಹಿಡಿದವರು ಅದನ್ನು ಎರಡು ಕೈಯಲ್ಲಿ ಎತ್ತಿ ಜನರಿಗೆ ತೋರಿಸುತ್ತಿದ್ದರು.

ಸಿಕ್ಕದವರು ಮಾತ್ರ ಮೌನವಾಗಿ ದಂಡೆಯತ್ತ ನಡೆದುಬರುತ್ತಿದ್ದರು.

ಕೆರೆಯ ಏರಿಯಲ್ಲಿ ನಿಲ್ಲಿಸಿದ್ದ ಬೈಕ್ಗಳ ಎಂಜಿನ್ ಸದ್ದು ನಿಧಾನವಾಗಿ ಹೆಚ್ಚತೊಡಗಿತು. ಜನರು ಗುಂಪು ಗುಂಪಾಗಿ ಹಿಂತಿರುಗುತ್ತಿದ್ದರು.

ಆದರೆ ಗಾಳಿಯಲ್ಲಿ ಇನ್ನೂ ಮೀನಿನ ವಾಸನೆ ಇತ್ತು.

ಒದ್ದೆಯಾದ ಹೆಜ್ಜೆ ಗುರುತುಗಳು, ಹರಿದ ಬಲೆ ನೂಲುಗಳು, ಮಣ್ಣಿನಿಂದ ಕಂದುಬಣ್ಣಕ್ಕೆ ತಿರುಗಿದ ನೀರು–ಇವೆಲ್ಲ ಬೆಳಗ್ಗಿನ ಗದ್ದಲದ ನೆನಪುಗಳಾಗಿ ಉಳಿದಿದ್ದವು. ಚಿಟ್ಟೂರಿನ ಕೆರೆ ಮತ್ತೊಮ್ಮೆ ಮೌನಕ್ಕೆ ಮರಳುತ್ತಿತ್ತು. ಆದರೆ ಆ ದಿನದ ‘ಹೋಯ್’ ಸದ್ದು ಮಾತ್ರ ಇನ್ನೂ ಗಾಳಿಯಲ್ಲಿ ತೇಲುತ್ತಲೇ ಇತ್ತು.

ಕೆರೆಬೇಟೆಯ ಸಂಸ್ಕೃತಿ

ಮಲೆನಾಡು ಮತ್ತು ಅರೆಮಲೆನಾಡಿನ ಹಲವು ಭಾಗಗಳಲ್ಲಿ ಕೆರೆಬೇಟೆ ಕೇವಲ ಮೀನು ಹಿಡಿಯುವ ಚಟುವಟಿಕೆ ಅಲ್ಲ; ಅದು ಗ್ರಾಮೀಣ ಸಮೂಹ ಬದುಕಿನ ಒಂದು ಸಂಭ್ರಮ. ಊರಿನವರು ದಿನ ನಿಗದಿ ಮಾಡಿ, ಒಟ್ಟಾಗಿ ಕೆರೆಗೆ ಇಳಿಯುವುದು, ಸಿಕ್ಕ ಮೀನನ್ನು ಹಂಚಿಕೊಳ್ಳುವುದು, ಬೇಟೆಯನ್ನು ಹಬ್ಬದಂತೆ ಆಚರಿಸುವುದು ಈ ಸಂಸ್ಕೃತಿಯ ವಿಶೇಷ.

ಹಿಂದೆ ಕೆರೆಗಳು ಗ್ರಾಮಗಳ ಬದುಕಿನ ಕೇಂದ್ರವಾಗಿದ್ದವು. ನೀರು, ಆಹಾರ, ಉದ್ಯೋಗ ಮತ್ತು ಸಮುದಾಯದ ಒಗ್ಗಟ್ಟಿನ ಜೊತೆ ಕೆರೆಬೇಟೆ ಬೆಸೆದುಕೊಂಡಿತ್ತು. ಪ್ರಾಣಿಬೇಟೆ, ಮೀನುಬೇಟೆ, ಹಕ್ಕಿಬೇಟೆಯಂತಹ ಆಹಾರಾಧಾರಿತ ಬದುಕಿನ ಭಾಗವಾಗಿ ಇದು ರೂಪುಗೊಂಡಿದೆ.

‘ಕೆರೆಬೇಟೆ ದೂರದಿಂದ ನೋಡಿದರೆ ಗೆರಿಲ್ಲಾ ಮಾದರಿಯ ಯುದ್ಧದಂತೆ ಕಾಣಬಹುದು. ಆದರೆ ಅದು ದಾಳಿ ಅಲ್ಲ, ಸಮೂಹ ಸ್ಪರ್ಧೆ’ ಎಂದು ಜಾನಪದ ಸಂಶೋಧಕ ಪ್ರೊ. ಮೋಹನ ಚಂದ್ರಗುತ್ತಿ ಹೇಳುತ್ತಾರೆ.

ಇಂದಿಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಕೆರೆಬೇಟೆ ಊರಿನ ಹಬ್ಬದಂತೆ ನಡೆಯುತ್ತದೆ. ಮೀನು ಹಿಡಿಯುವುದಕ್ಕಿಂತ ಹೆಚ್ಚಾಗಿ, ಅದು ಜನರನ್ನು ಒಂದೆಡೆ ಸೇರಿಸುವ ಸಮುದಾಯದ ಆಚರಣೆಯಾಗಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.