ಶುಕ್ರವಾರ, ಮೇ 14, 2021
31 °C
ಸ್ಮಾರ್ಟ್‌ಸಿಟಿ ಅವ್ಯವಸ್ಥೆ ವಿರುದ್ಧ ಲೋಕಾಯುಕ್ತಕ್ಕೆ ದೂರು: ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್

ಜನರ ನಂಬಿಕೆ ಕಸಿದ ಮುಖ್ಯಮಂತ್ರಿಯ ಸೋಂಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಲಸಿಕೆ ಪಡೆದರೂ ಮುಖ್ಯಮಂತ್ರಿಗೆ ಕೊರೊನಾ ಸೋಂಕು ತಗುಲಿದ ವಿಷಯ ತಿಳಿದ ನಂತರ ರಾಜ್ಯದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿವೆ. ಪರಿಣಾಮ ಸಾವಿನ ಸಂಖ್ಯೆ ಏರುತ್ತಿದೆ. ಸೋಂಕು ತಡೆಗೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಕೋವಿಡ್ ವೇಗವಾಗಿ ಹರಡುತ್ತಿದೆ ಎಂಬ ಮುನ್ಸೂಚನೆ ಇದ್ದರೂ, ಮುಂಜಾಗ್ರತಾ ಕ್ರಮವನ್ನು ಸರ್ಕಾರಗಳು ಕೈಗೊಳ್ಳದ ಪರಿಣಾಮ ನಿಯಂತ್ರಣ ತಪ್ಪಿದೆ. ಇದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಕಾರಣ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸರ್ಕಾರ ಕೇವಲ ಜಾಹೀರಾತುಗಳ ಮೂಲಕ ಕೊರೊನಾ ನಿಯಂತ್ರಿಸಲು ಹೊರಟಿದೆ. ಆಸ್ಪತ್ರೆಗಳಲ್ಲಿ ಯಾವ ಸೌಲಭ್ಯಗಳೂ ಇಲ್ಲ. ವೆಂಟಿಲೇಟರ್‌ಗಳು, ಚುಚ್ಚು ಮದ್ದು ಕೊರತೆ ಇದೆ. ಬರೀ ಸುಳ್ಳು ಅಂಕಿ, ಅಂಶಗಳನ್ನು ನೀಡಲಾಗುತ್ತಿದೆ. ಔಷಧಗಳು ಸಮಪರ್ಕವಾಗಿ ಲಭಿಸುತ್ತಿಲ್ಲ. ಸೋಂಕಿತರಿಗೆ ತುರ್ತಾಗಿ ಹಾಸಿಗೆಗಳೂ ದೊರಕುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲ ಎಂದು ಆರೋಪಿಸಿದರು.

ಸ್ಮಾರ್ಟ್‌ಸಿಟಿ ಅವ್ಯವಸ್ಥೆ ವಿರುದ್ಧ ಲೋಕಾಯುಕ್ತಕ್ಕೆ ಮೊರೆ:

ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಅತ್ಯಂತ ಕಳಪೆಯಾಗಿವೆ. ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ರಸ್ತೆ, ಚರಂಡಿಗಳು, ಫುಟ್‌ಪಾತ್‌ಗಳೂ ಗುಣಮಟ್ಟದಿಂದ ಕೂಡಿಲ್ಲ. ಒಮ್ಮೆ ಮಳೆ ಬಂದರೆ ಸಾಕು ಕಾಮಗಾರಿಗಳ ಬಣ್ಣ ಬಯಲಾಗುತ್ತದೆ. ಕೋಟ್ಯಂತ ಹಣ  ಸುರಿದರೂ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಎಷ್ಟೋ ಕಡೆ ಸುಂದರವಾಗಿದ್ದ ರಸ್ತೆಗಳನ್ನು ಹಾಳು ಮಾಡಿ ಮತ್ತೆ ಕಳಪೆ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಳಚರಂಡಿಗಳ ಸ್ಥಿತಿಯೂ ಹಾಗೆಯೇ ಇದೆ ಎಂದು ದೂರಿದರು.

ಸ್ಮಾರ್ಟ್‌ಸಿಟಿ ಗುತ್ತಿಗೆದಾರರು ಎಲ್ಲಿ ಇದ್ದಾರೆ ಎಂಬ ಮಾಹಿತಿ ಇಲ್ಲ. ಗುಣಮಟ್ಟದ ಪರೀಕ್ಷೆ ಯಾರು ಮಾಡುತ್ತಾರೆ ಎನ್ನುವುದೂ ಗೊತ್ತಿಲ್ಲ. ಇದುವರೆಗೂ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆ ನಡೆದ ದಾಖಲೆಗಳೂ ಸಿಕ್ಕಿಲ್ಲ. ಕಮಿಷನ್ ಲೆಕ್ಕಚಾರದಲ್ಲಿ ಗುಣಮಟ್ಟ ನಿರ್ಧಾರವಾಗುತ್ತದೆ. ಸ್ಮಾರ್ಟ್‌ಸಿಟಿ ಎನ್ನುವುದು ಕೆಲವರಿಗೆ ವರದಾನವಾಗಿದೆ ಎಂದರು.

ಆದಿಚುಂಚನಗಿರಿ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೋವಿಡ್ ಮಾರ್ಗಸೂಚಿ ಕಾರಣ ಪ್ರತಿಭಟನೆ ಕೈಬಿಟ್ಟಿದ್ದೇವೆ. ರಸ್ತೆ, ಒಳಚರಂಡಿ. ಫುಟ್‌ಪಾತ್ ಟೈಲ್ಸ್‌ಗಳ ಜೋಡಣೆ, ಕಾಂಕ್ರೀಟ್ ಮಿಶ್ರಣವೂ ಕಳಪೆಯಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಕ್ಷದ ಮುಖಂಡರಾದ ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ್, ಮಂಜುಳಾ ಶಿವಣ್ಣ, ಆರೀಫ್, ಬಾಲಾಜಿ, ಅಫ್ರೀದಿ, ಚಂದನ್, ಶಮೀರ್ ಖಾನ್, ಸೈಯದ್ ವಾಹಿದ್ ಅಡ್ಡು, ರಂಗೇಗೌಡ, ಸೌಗಂಧಿಕಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.