ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬೂಸವಾರಿ ಕಣ್ತುಂಬಿಕೊಂಡ ಭಕ್ತ ಸಾಗರ

ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಸಾಗರ; ನೇತ್ರಾ, ಭಾನು ಸಾಥ್
Last Updated 6 ಅಕ್ಟೋಬರ್ 2022, 5:46 IST
ಅಕ್ಷರ ಗಾತ್ರ

ಶಿವಮೊಗ್ಗ: ಮೈಸೂರಿನ ರಾಜ ಸವಾರಿಗೆ ಪ್ರತಿಬಿಂಬದಂತೆ ತೋರುವ ಮಲೆನಾಡು ಶಿವಮೊಗ್ಗದ ದಸರಾ ಜಂಬೂ ಸವಾರಿ, ವಿಜಯದಶಮಿಯ ದಿನ ಬುಧವಾರ ಅದ್ಧೂರಿಯಾಗಿ ನೆರವೇರಿತು. ಆಗಾಗ ಸುರಿದ ಮಳೆಯನ್ನೂ ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಭಕ್ತ ಸಮುದಾಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತು. 750 ಕೆ.ಜಿ ತೂಗುವ ಬೆಳ್ಳಿಯ ಅಂಬಾರಿಯ ಮೇಲೆ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.

ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಮಳೆರಾಯ ಆಗಾಗ ಸುರಿದರೂ, ಮೆರವಣಿಗೆ ಸಾಗಿದ ಬಹು ಹೊತ್ತು ಬಿಡುವು ನೀಡಿ ಕೃಪೆ ತೋರಿದ. ಅಂಬಾರಿ ಹೊತ್ತಿದ್ದ ‘ಸಾಗರ’ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದರೆ, ಅವನಿಗೆ ನೇತ್ರಾವತಿ ಹಾಗೂ ಭಾನುಮತಿ ಆನೆಗಳು ಸಾಥ್ ನೀಡಿದವು. ಜನಸಾಗರದ ನಡುವೆ ಗಜಪಡೆಯನ್ನು ಮಾವುತರು ಪ್ರಶಾಂತವಾಗಿ ಮುನ್ನಡೆಸಿದರು.

ಶಿವಪ್ಪ ನಾಯಕ ಅರಮನೆ ಹಾಗೂಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಬಳಿ ನಂದಿಕೋಲಿಗೆ ತಹಶೀಲ್ದಾರ್ ನಾಗರಾಜ್ ಪೂಜೆ ಸಲ್ಲಿಸಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು. ಈ ವೇಳೆ ಮೇಯರ್ ಸುನೀತಾ ಅಣ್ಣಪ್ಪ ಇದ್ದರು. ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗಜಪಡೆಗೆ ಪುಷ್ಪಾರ್ಚನೆ ನೆರವೇರಿಸಿದರು. ಮೆರವಣಿಗೆಯಲ್ಲಿ ನಗರದ ವಿವಿಧ ದೇವರುಗಳ ಪಲ್ಲಕ್ಕಿಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಸಾಗಿ ಬಂದವು. ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತರು ಹಾಗೂ ಹಾದಿಯಲ್ಲಿದ್ದ ಸಾರ್ವಜನಿಕರು ಫೋಟೊ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ವಿಡಿಯೊ ಕರೆ ಮಾಡಿ ಜಂಬೂಸವಾರಿ ಕಣ್ತುಂಬಿಕೊಳ್ಳಲು ಆಪ್ತರಿಗೆ
ನೆರವಾದರು.

ಮೆರವಣಿಗೆಯಲ್ಲಿ ಸಾಗಿ ಬಂದ ನಂದಿ ಕುಣಿತ, ವೀರಗಾಸೆ, ಕೀಲು ಕುದುರೆ, ಡೊಳ್ಳು ಕುಣಿತ, ಕರಾವಳಿಯ ಹುಲಿ ವೇಷಧಾರಿಗಳು, ಗೊಂಬೆ ಕುಣಿತ, ತಟ್ಟಿರಾಯ ಕಲಾ ತಂಡಗಳು ವಿಶೇಷ ಕಳೆ ತಂದವು. ಶಿವಾಜಿ ವೇಷಧಾರಿ ಟ್ರ್ಯಾಕ್ಟರ್‌ನಲ್ಲಿ ಸಾಗಿಬಂದರು.

ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಂಬೂ ಸವಾರಿ ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್‌, ದುರ್ಗಿಗುಡಿ ಮಾರ್ಗವಾಗಿ ಹಳೆ ಜೈಲ್‌ ರಸ್ತೆಯ ಮೂಲಕ ಹಾಯ್ದು ಬಂದು ಫ್ರೀಡಂ ಪಾರ್ಕ್ ತಲುಪಿತು. ಅಲ್ಲಿಂದ ಚಾಮುಂಡೇಶ್ವರಿ ಮೂರ್ತಿಯನ್ನು ಬೆಳ್ಳಿಯ ಅಂಬಾರಿಯೊಂದಿಗೆ ಹೂವಿನಿಂದ ಅಲಂಕರಿಸಿದ್ದ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾಯಿತು. ಇದೇ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಸುಬ್ಬನಹಳ್ಳಿ ರಾಜು ಮತ್ತು ರಾಜಪ್ಪ ನಡೆಸಿಕೊಟ್ಟ ಜಾನಪದ ಸಂಭ್ರಮದಲ್ಲಿ ನೆರೆದವರು ಹೆಜ್ಜೆಹಾಕಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಉಪಮೇಯರ್ ಶಂಕರ ಗನ್ನಿ, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಮಾಜಿ ಶಾಸಕ ಎಚ್‌.ಎಂ.ಚಂದ್ರಶೇಖರಪ್ಪ, ಸದಸ್ಯರಾದ ಎಚ್‌.ಸಿ.ಯೋಗೀಶ, ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಎಸ್.ಜಿ.ರಾಜು,ಎಸ್. ಜ್ಞಾನೇಶ್ವರ್, ಎಸ್. ಶಿವಕುಮಾರ್, ಧೀರರಾಜ್ ಹೊನ್ನವಿಲೆ, ಯಮುನಾ ರಂಗೇಗೌಡ, ಆಶಾ ಚಂದ್ರಪ್ಪ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಮುಖಂಡರಾದ, ಎಸ್‌. ದತ್ತಾತ್ರಿ, ಕೆ.ಇ. ಕಾಂತೇಶ್, ಎನ್‌. ರಮೇಶ್, ಫಾಲಾಕ್ಷಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್ ಮೆರವಣಿಗೆಯಲ್ಲಿ ಸಾಗಿದರು.

ರಾವಣ ಸಂಹಾರ, ಸಿಡಿ ಮದ್ದು ಸಿಡಿತ..

ಫ್ರೀಡಂ ಪಾರ್ಕ್‌ನಲ್ಲಿ ಸಿದ್ಧಪಡಿಸಿದ್ದ ಭವ್ಯ ವೇದಿಕೆ ಮೇಲೆ ಸಂಜೆ ತಹಶೀಲ್ದಾರ್‌ ನಾಗರಾಜ್ ಅಂಬು ಛೇದಿಸಿದರು. ಈ ವೇಳೆ ಮಲೆನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ನಾಗರಾಜ್ ಗಮನ ಸೆಳೆದರು. ನಂತರ ಅಲ್ಲೇ ಪ್ರತಿಷ್ಠಾಪಿಸಿದ್ದ 10 ತಲೆಯ ರಾವಣನ ಪ್ರತಿಕೃತಿಯನ್ನು ಅಗ್ನಿ ಮೂಲಕ ಸಂಹರಿಸಲಾಯಿತು. ಈ ಸಂದರ್ಭದಲ್ಲಿ ಆಕರ್ಷಕ ಸಿಡಿಮದ್ದು ಸಿಡಿದವು. ಬಾನೆತ್ತರಕ್ಕೆ ಹರಡಿದ ಸಿಡಿಮದ್ದುಗಳ ಚಿತ್ತಾರವನ್ನು ನೆರೆದವರು ಕಣ್ತುಂಬಿಕೊಂಡರು. ನಂತರ ಎಲ್ಲರೂ ಬನ್ನಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT