ಶಿವಮೊಗ್ಗ: ಹಸಿರು ಹೊದಿಕೆ, ತಂಪು ಹವೆಯ ನವಿರುತನಕ್ಕೆ ಹೆಸರಾಗಿದ್ದ ಶಿವಮೊಗ್ಗ, ಏಪ್ರಿಲ್ ಮಧ್ಯಭಾಗಕ್ಕೆ ಕಾಲಿಡುತ್ತಿದ್ದಂತೆಯೇ ಕಾದ ಹೆಂಚಿನಂತಾಗಿದೆ. ಬಿರುಬಿಸಿಲು ಕುದಿ ಹೆಸರಿನಂತೆ ಕಾಡುತ್ತಿದ್ದು, ಸೆಕೆಗೆ ಜನರು ತತ್ತರಿಸಿದ್ದಾರೆ. ಬಿಸಿಲ ಝಳಕ್ಕೆ ಪ್ರಾಣಿ–ಪಕ್ಷಿಗಳು ಬಸವಳಿದಿವೆ. ನೆರಳು, ತಂಪು, ನೀರಿನ ಪಸೆ ಹುಡುಕಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಕಳೆದ ನಾಲ್ಕು ದಿನಗಳಿಂದ ಬಿಸಿಲಿನ ತಾಪ ಶಿವಮೊಗ್ಗದಲ್ಲಿ 36.5 ಡಿಗ್ರಿಯಿಂದ 37.2 ಡಿಗ್ರಿವರೆಗೆ ತಲುಪಿದೆ. ಈಚಿನ ವರ್ಷಗಳಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗಿದೆ. ಇದೆಲ್ಲವೂ ಜಾಗತಿಕ ಹವಾಮಾನ ಬದಲಾವಣೆಯ ಫಲ ಎಂದು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಶ್ರೀಧರ್ ಹೇಳುತ್ತಾರೆ.

ಬಿಸಿಲಿನ ರಣಸ್ವರೂಪದಿಂದ ಪ್ರಾಣಿ–ಪಕ್ಷಿಗಳ ರಕ್ಷಣೆಗೆ ಇಲ್ಲಿನ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಆಡಳಿತ ವಿಶೇಷ ವ್ಯವಸ್ಥೆ ಮಾಡಿದೆ. ಪ್ರಾಣಿ ಹಾಗೂ ಪಕ್ಷಿಗಳ ನೆಲೆಯಲ್ಲಿ ವಿಶೇಷ ಸ್ಪ್ರಿಂಕ್ಲರ್ ಗಳ ವ್ಯವಸ್ಥೆ ಮಾಡಿದ್ದು, ನಿರಂತರವಾಗಿ ನೀರಿನ ಸಿಂಚನದ ಮೂಲಕ ತಾಪಮಾನ ತಗ್ಗಿಸಲಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಪೂರಕವಾಗಿ ಪ್ರಾಣಿಗಳ ದೇಹಕ್ಕೆ ಒಗ್ಗುವ ಆಹಾರ ನೀಡಲು ಊಟದ ಮೆನು ಕೂಡ ಬದಲಾಯಿಸಿದೆ.

ಮೃಗಾಲಯ ಮಾತ್ರವಲ್ಲ ಅದಕ್ಕೆ ಹೊಂದಿಕೊಂಡಂತೆ 253.3 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಸಫಾರಿ ಪ್ರದೇಶದಲ್ಲಿನ ಎಲ್ಲ ಕೆರೆ ಹಾಗೂ ಕೊಳಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಹೂಳು ತೆಗೆದಿದ್ದು, ಅಲ್ಲಿ ಸಂಗ್ರಹವಾದ ನೀರು ಬೇಸಿಗೆಯ ಸಂಕಷ್ಟ ತಪ್ಪಿಸಿಕೊಳ್ಳಲು ಅಲ್ಲಿನ ಪ್ರಾಣಿಗಳಿಗೆ ನೆರವಾಗಿದೆ. ಜೊತೆಗೆ ಅಲ್ಲಿನ ಕಾಟಿ ಸಫಾರಿಯಲ್ಲಿ ಸ್ಪ್ರಿಂಕ್ಲರ್ಗಳನ್ನು ಅಳವಡಿಸಿದ್ದು, ಅದು ಚೆಲ್ಲುವ ಕೃತಕ ಮಳೆಯ ನಡುವೆ ನಿಂತ ಕಾಡುಕೋಣಗಳ ಹಿಂಡು ಆಹಾರ ಸೇವನೆ ಮಾಡುತ್ತಿದ್ದ ನೋಟ ಕಂಡುಬಂತು.

ಪಕ್ಷಿಗಳಿಗೆ ವಿಶೇಷ ನಿಗಾ: ಬಿಸಿಲ ಝಳದಿಂದ ರಕ್ಷಣೆಗೆ ಪಕ್ಷಿಗಳ ವಿಭಾಗದಲ್ಲಿರುವ ಮೃಗಾಲಯದ ಎಲ್ಲ ಬಾನಾಡಿಗಳ ಮೇಲೂ ಈ ಬಾರಿ ವಿಶೇಷ ನಿಗಾ ವಹಿಸಲಾಗಿದೆ. ಕಲ್ಲಂಗಡಿ, ಕರಬೂಜ ಸೇರಿದಂತೆ ಹಣ್ಣು–ತರಕಾರಿಗಳನ್ನು ವಿಶೇಷವಾಗಿ ಸಿದ್ಧಪಡಿಸಲಾದ ಐಸ್ ಪ್ಯಾಕ್ಗಳಲ್ಲಿ ಇಟ್ಟು ಪಕ್ಷಿಗಳಿಗೆ ಕೊಡಲಾಗುತ್ತಿದೆ. ಚಿಕನ್, ಮಟನ್ ಸೇರಿದಂತೆ ಮಾಂಸವನ್ನು ತಂಪಾಗಿಸಿ ನಂತರ ಪ್ರಾಣಿಗಳಿಗೆ ಕೊಡಲಾಗುತ್ತಿದೆ. ಅದಕ್ಕೆ ಬಯಾಲಜಿಸ್ಟ್ ನೆರವು ಪಡೆಯಲಾಗುತ್ತಿದೆ ಎಂದು ಡಿಆರ್ಎಫ್ಒ ಮಲ್ಲಿಕಾರ್ಜುನ್ ಹೇಳುತ್ತಾರೆ.

ದಕ್ಷಿಣ ಅಮೆರಿಕ, ಚೀನಾ ಮೂಲದ ಲೇಡಿ ಅಮ್ಹೆರ್ಸ್ಟ್ ಫೆಸೆಂಟ್, ಸನ್ ಕೊನ್ಯೂರ್, ಮಕಾವ್ ಸೇರಿದಂತೆ ವಿದೇಶಿ ಹಕ್ಕಿಗಳನ್ನು ಇಲ್ಲಿನ ಬಿಸಿ ಹವೆಯಿಂದ ರಕ್ಷಿಸಲು ಫಾಗರ್ ಕೂಡ ಅಳವಡಿಸಲಾಗಿದೆ. ಅವುಗಳಿಗೆ ಹಣ್ಣು–ಹಂಪಲು ಜೊತೆಗೆ ಎಲೆಕ್ಟ್ರೊಲೈಟ್ನಂತಹ ಉತ್ತೇಜಕಗಳನ್ನು ನೀಡಲಾಗುತ್ತಿದೆ.

‘ಬಿಸಿ ಗಾಳಿಯಿಂದ ರಕ್ಷಣೆ ಪಡೆದು ದೇಹದ ಉಷ್ಣಾಂಶದಲ್ಲಿ ಸಮತೋಲನ ಸಾಧಿಸಲು ಕಾಡು ಕೋಣಗಳಿಗೆ ಸ್ಪ್ರಿಂಕ್ಲರ್ ಜೆಟ್ ನೆರವಿನ ಜೊತೆಗೆ ಅಲ್ಲಲ್ಲಿ ಮರಗಳಿಗೆ ಉಪ್ಪಿನ ಉಂಡೆಗಳ (ಸಾಲ್ಟ್ ಲಿಕ್ಸ್) ಚೀಲ ಕಟ್ಟಲಾಗಿದೆ. ಅವುಗಳನ್ನು ನೆಕ್ಕುತ್ತಾ ಕಾಲ ಕಳೆಯುತ್ತವೆ’ ಎಂದು ಬಯಾಲಜಿಸ್ಟ್ ಸುಶ್ಮಿತಾ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-42-1594191149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.