ಶಿವಮೊಗ್ಗ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಿಗ್ಗೆ ನಡೆದ ಈ ವ್ಯವಸ್ಥಿತ ಕಾರ್ಯಾಚರಣೆಯಿಂದ ಮಲೆನಾಡಿನ ಮರಳು ಮಾಫಿಯಾ ತಲ್ಲಣಗೊಂಡಿದೆ.

‘ತುಷಾರ’ (ತುಂಗಭದ್ರಾ, ಶರಾವತಿ ನದಿಗಳ ರಕ್ಷಣೆ) ಹೆಸರಲ್ಲಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಪ್ರತೀ ಹಂತವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಖುದ್ದಾಗಿ ನಿರ್ವಹಣೆ ಮಾಡಿದ್ದಾರೆ. ವಿಶೇಷವೆಂದರೆ ಲೋಕಾಯುಕ್ತ ಪೊಲೀಸರ ತಂಡ ಬೆಳಿಗ್ಗೆ ಅಕ್ರಮ ಮರಳು ಕ್ವಾರಿಗಳ ಮೇಲೆ ದಾಳಿ ಮಾಡುವವರೆಗೂ ಕಾರ್ಯಾಚರಣೆಯ ವಿಚಾರ ಶಿವಮೊಗ್ಗ ಜಿಲ್ಲಾಡಳಿತಕ್ಕೂ ಗೊತ್ತಿರಲಿಲ್ಲ. ಜಿಲ್ಲೆಯ ಪೊಲೀಸರಿಗೂ ಮಾಹಿತಿ ಕೊಟ್ಟಿರಲಿಲ್ಲ. ಅಷ್ಟೊಂದು ಗೋಪ್ಯತೆ ಕಾಯ್ದುಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಎರಡು ತಿಂಗಳಿಂದ ಸಿದ್ಧತೆ: ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ಸೂಚನೆಯ ಮೇರೆಗೆ ದೊಡ್ಡಮಟ್ಟದಲ್ಲಿ ಅಕ್ರಮ ಮರಳು ಕ್ವಾರಿಗಳ ಮೇಲೆ ದಾಳಿ ಸಂಘಟಿಸಲು ಕಳೆದ ಎರಡು ತಿಂಗಳಿಂದ ಸ್ಥಳೀಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಕಾರ್ಯಾಚರಣೆಯ ಗೋಪ್ಯತೆ ಕಾಯ್ದುಕೊಳ್ಳಲು ‘ತುಷಾರ’ ಹೆಸರಲ್ಲಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗಿತ್ತು.

ಅಕ್ರಮದ ಹಿಂದಿರುವವರು, ಅವರಿಗೆ ಇರುವ ಶ್ರೀರಕ್ಷೆಯ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಲಾಗಿತ್ತು. ಜೊತೆಗೆ ಎಲ್ಲೆಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗೂಗಲ್ ನಕ್ಷೆ ಹಾಗೂ ಚಿತ್ರಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿತ್ತು. ಶಿವಮೊಗ್ಗ ಮಾತ್ರವಲ್ಲದೇ ದೂರದ ಬೆಳಗಾವಿ, ಪಕ್ಕದ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲೆಲ್ಲಿ ದಾಳಿ: ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಹಾಡೋನಹಳ್ಳಿ, ಭದ್ರಾವತಿ ತಾಲ್ಲೂಕಿನ ಮಂಗೋಟೆ, ಸನ್ಯಾಸಿಕೋಡಮಗ್ಗಿ, ನಿಂಬೆಗೊಂದಿ, ನಾಗಸಮುದ್ರ, ಡಣಾಯಕಪುರ, ಕೂಡ್ಲಿಯ ಭದ್ರಾ ಹಾಗೂ ತುಂಗಾ ನದಿ ದಂಡೆ, ಭದ್ರಾಪುರ, ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ, ಮಹಿಷಿ, ತೂದೂರು, ಹೊಸಹಳ್ಳಿ, ಆಚೆಪೇಟೆ, ಕೆದಲಗುಡ್ಡೆ, ಸುತ್ತಾ, ಕಲ್ಲುಹಳ್ಳ, ಹರಿದ್ರಾವತಿ, ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ, ಗೀಜಗ, ಬಿಲ್ಲುಸಾಗರ, ಎಡಚಿಟ್ಟಿ, ಮಂಣಸೆಟ್ಟೆ, ಮುಡುಗೊಪ್ಪದ ತುಂಗಾ–ಭದ್ರಾ ಹಾಗೂ ಶರಾವತಿ ನದಿಗಳಲ್ಲಿನ ಅಕ್ರಮ ಕ್ವಾರಿಗಳ ಮೇಲೆ 15 ತಂಡಗಳಾಗಿ ದಾಳಿ ನಡೆಸಲಾಗಿದೆ. ಕ್ವಾರಿಗಳ ಎಲ್ಲ ಮಾಹಿತಿ ಮೊದಲೇ ಹೊಂದಿದ್ದ ಎಸ್ಪಿ ಎಂ.ಎಸ್.ಕೌಲಾಪುರೆ ಹಾಗೂ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಕಾರ್ಯಾಚರಣೆ ವೇಳೆ ತಂಡಗಳ ನಡುವೆ ಸಮನ್ವಯ ಸಾಧಿಸಿದ್ದರು.

ಅಕ್ರಮ ಮರಳು ಕ್ವಾರಿಗಳು ಮಾತ್ರವಲ್ಲದೇ ಶಿವಮೊಗ್ಗದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಯ ಮೇಲೂ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರ ತಂಡ, ದಬ್ಬಣಗದ್ದೆಯಲ್ಲಿ ಮರಳು ಸಾಗಾಣಿಕೆ ಮಾಡುವವರಿಗೆ ₹ 1,08 ಕೋಟಿ ದಂಡ ಹಾಕಿದ್ದರೂ ಅದನ್ನು ವಸೂಲಿ ಮಾಡದಿರುವುದು ಹಾಗೂ ನಾಗಸಮುದ್ರದಲ್ಲಿ ದಂಡ ಹಾಕಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಪತ್ರಕರ್ತರಿಗೂ ನೋಟಿಸ್?: ಅಕ್ರಮ ಮರಳುಗಣಿಗಾರಿಕೆಯಲ್ಲಿ ತೊಡಗಿರುವವರೊಂದಿಗೆ ಸಂಪರ್ಕ ಹಾಗೂ ಪಾಲುದಾರಿಕೆ ಹೊಂದಿರುವ ಮಾಹಿತಿ, ಸಾಕ್ಷ್ಯ ಲಭ್ಯದ ಹಿನ್ನೆಲೆಯಲ್ಲಿ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು, ತೀರ್ಥಹಳ್ಳಿಯ ತಲಾ ಒಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪತ್ರಕರ್ತರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ವಂಚನೆ

ಕೇಂದ್ರದ ಅರಣ್ಯ, ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ದೊರೆತಿಲ್ಲ ಎಂಬ ಕಾರಣದಿಂದ ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಅಧಿಕೃತ ಮರಳು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶ ಕೊಟ್ಟಿಲ್ಲ. ಆದರೂ ಅಧಿಕಾರಿಗಳ ಮೂಗಿನ ನೇರಕ್ಕೇ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆದಿದೆ.

ವಿಚಿತ್ರವೆಂದರೆ ಈ ಹಿಂದೆ ಅಧಿಕೃತ ಎಂದು ಗುರುತಿಸಿದ್ದ ಕ್ವಾರಿಗಳಲ್ಲಿಯೇ ಮರಳು ತೆಗೆಯಲಾಗಿದ್ದರೂ ಯಾವುದೇ ರಾಯಧನ ಪಾವತಿಸದೇ ಮರಳು ಸಾಗಣೆ ಆಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ವಂಚನೆ ಆಗಿದೆ.

ಅಧಿಕೃತ ಗಣಿಗಾರಿಕೆಗೆ ತಾಂತ್ರಿಕ ತೊಂದರೆಯ ನೆಪ ಮುಂದಿಡುತ್ತಿದ್ದ ಅಧಿಕಾರಿಗಳು, ಜಿಲ್ಲೆಯಲ್ಲಿ ಮರಳಿಗೆ ಅಭಾವ ಆದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಅಭಿವೃದ್ಧಿ ಕಾಮಗಾರಿ ಕುಂಠಿತವಾಗಲಿವೆ ಎಂಬ ‘ಕಾಳಜಿ’ಯಿಂದ ಅನಧಿಕೃತ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳುತ್ತಾರೆ.

ಕಾನೂನಿನ ಬಿಗಿ ಕುಣಿಕೆ..

ಮರಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರ ವಿರುದ್ಧ ಕಠಿಣ ಕಾಯ್ದೆ, ನಿಯಮಾವಳಿ ಅನ್ವಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಂಎಂಆರ್ಡಿ (ಮೈನ್ಸ್ ಅಂಡ್ ಮಿನರಲ್ಸ್), ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ)ದ ಆದೇಶದ ಅನ್ವಯ ರೂಪುಗೊಂಡ ಪರಿಸರ ಸಂರಕ್ಷಣಾ ಕಾಯ್ದೆ, ಕರ್ನಾಟಕ ಮೈನ್ಸ್ ಅಂಡ್ ಮಿನರಲ್ಸ್ ರೂಲ್ಸ್, ಜೆಸಿಬಿ, ಹಿಟ್ಯಾಚಿ, ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿರುವುದಕ್ಕೆ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದ ಪಿಡಿಪಿಪಿ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಹಾಗೂ ನದಿ ನೀರು ರಕ್ಷಣೆ ಕುರಿತಾದ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಿ ಮರಳುಗಳ್ಳರ ವಿರುದ್ಧ ಕಾನೂನಿನ ಕುಣಿಕೆ ಬಿಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.