ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದಾಪುರದಲ್ಲಿ 1,200 ಮನೆಗಳು ಹಂಚಿಕೆಗೆ ಸಿದ್ಧ: ಈಶ್ವರಪ್ಪ

Last Updated 12 ಅಕ್ಟೋಬರ್ 2022, 4:30 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲ್ಲೂಕಿನ ಗೋವಿಂದಾಪುರದಲ್ಲಿ ಡಿಸೆಂಬರ್ ಅಂತ್ಯದೊಳಗೆ ಎರಡಂತಸ್ತಿನ 1,200 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಲಿದೆ. ಹಾಗಾಗಿ ಅಲ್ಲಿ ತ್ವರಿತವಾಗಿ ನೀರು, ವಿದ್ಯುತ್ ಮತ್ತು ಯುಜಿಡಿ ಸಂಪರ್ಕ ಕಲ್ಪಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಗುತ್ತಿಗೆದಾರರಿಗೆ ಸೂಚಿಸಿದರು.

ಮನೆಗಳ ಪ್ರಗತಿ ಕಾರ್ಯ ಕುರಿತು ಅಧಿಕಾರಿಗಳು ಮತ್ತು ಆಶ್ರಯ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿದ ಅವರು, ‘ಗೋವಿಂದಾಪುರದಲ್ಲಿ 125 ಬ್ಲಾಕ್‍ನಲ್ಲಿ 3,000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ 1,200 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಬೇಕಿದೆ. ಆದರೆ ಮೂಲಸೌಕರ್ಯ ಕಲ್ಪಿಸದೇ ಅವರಿಗೆ ಮನೆಗಳನ್ನು ಹಸ್ತಾಂತರಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ತುಂಗಾ ನದಿಯಿಂದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಆಶ್ರಯ ಬಡಾವಣೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಗೋವಿಂದಾಪುರದಲ್ಲಿ ಈಗಾಗಲೇ ಎರಡಂತಸ್ತಿನಲ್ಲಿ ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಇದುವರೆಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಜತೆಗೆ ವಿದ್ಯುತ್ ಮತ್ತು ಯುಜಿಡಿ ಸಂಪರ್ಕವನ್ನೂ ಕಲ್ಪಿಸಿಲ್ಲ, ಹಾಗಾಗಿ ತಕ್ಷಣವೇ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ವಿದ್ಯುತ್ ಮತ್ತು ಯುಜಿಡಿ ಸಂಪರ್ಕ ಕಲ್ಪಿಸಬೇಕು. ಮನೆ ಪೂರ್ಣಗೊಂಡು ವರ್ಷಗಟ್ಟಲೆ ಫಲಾನುಭವಿಗಳಿಗೆ ಹಸ್ತಾಂತರಿಸದಿದ್ದರೆ ನಮ್ಮಷ್ಟು ದಡ್ಡರು ಮತ್ತೊಬ್ಬರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಲಕ್ಷ್ಮಣ್, ರೇಣುಕಾ ನಾಗರಾಜ್, ಯಶೋದಾ ಇದ್ದರು.

ಮೂರು ತಿಂಗಳೊಳಗೆ ಮನೆಗಳನ್ನು ಕಟ್ಟಿಕೊಳ್ಳಲು ಸೂಚನೆ
ಬೊಮ್ಮನಕಟ್ಟೆಯಲ್ಲಿ ‘ಎ’ ಯಿಂದ ‘ಜಿ’ ಬ್ಲಾಕ್‍ವರೆಗೆ 20 ವರ್ಷಗಳಾದರೂ ಮನೆ ಕಟ್ಟಿಕೊಳ್ಳದ ಕಾರಣ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ಇತ್ತೀಚೆಗೆ ರದ್ದುಗೊಳಿಸಿತ್ತು. ಆದರೆ, ಸಂತ್ರಸ್ತರು ಅಳಲು ತೋಡಿಕೊಂಡ ಹಿನ್ನೆನಲೆಯಲ್ಲಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಕೆ.ಎಸ್. ಈಶ್ವರಪ್ಪ ಸೂಚಿಸಿದರು.

ಮೂರು ತಿಂಗಳೊಳಗೆ ಹಂಚಿಕೆಯಾದ ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು. ಇಲ್ಲವಾದರೆ ಆ ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ಅಡಿಪಾಯ ಬೇರೆಯವರದ್ದು ಮನೆ ಮತ್ತೊಬ್ಬರದು: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಎ ಯಿಂದ ಎಫ್ ಬ್ಲಾಕ್‍ವರೆಗೆ ಸಾವಿರಾರು ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆಯಾಗಿದ್ದರೂ ಕಳೆದ 20 ವರ್ಷಗಳಿಂದ ಮನೆ ಕಟ್ಟಿಕೊಳ್ಳದೇ ಸುಮ್ಮನಾಗಿದ್ದಾರೆ. ಆದರೆ ಬೊಮ್ಮನಕಟ್ಟೆಯ ಬಡಾವಣೆ ಬ್ಲಾಕ್‍ವೊಂದರಲ್ಲಿ ನಿವೇಶನ ಹಂಚಿಕೆಯಾದ ಫಲಾನುಭವಿ ಅಡಿಪಾಯ ಹಾಕಿದ್ದರು. ಆದರೆ ಇದೀಗ ಅದೇ ಅಡಿಪಾಯದ ಮೇಲೆ ಮತ್ತೊಬ್ಬರು ಮನೆ ಕಟ್ಟಿಕೊಂಡಿದ್ದು, ಸಂತ್ರಸ್ತ ಸೋಮವಾರ ಶಾಸಕ ಈಶ್ವರಪ್ಪ ಎದುರು ಅಳಲು ತೋಡಿಕೊಂಡರು. ತಕ್ಷಣವೇ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT