ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಹದ ಮಳೆ: ಭತ್ತ ಬಿತ್ತನೆಯಲ್ಲಿ ರೈತ ಮಗ್ನ

ಕರೂರು ಬಾರಂಗಿ ಹೋಬಳಿಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ
Last Updated 16 ಜುಲೈ 2022, 4:18 IST
ಅಕ್ಷರ ಗಾತ್ರ

ತುಮರಿ: ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆದು ಸೂಕ್ತ ದರ ಸಿಗದೆ ನಷ್ಟ ಅನುಭವಿಸಿರುವ ಹಿನ್ನೀರಿನ ಅನ್ನದಾತರು, ಮುಂಗಾರಿನ
ಹಂಗಾಮಿನಲ್ಲಾದರೂ ಒಂದಿಷ್ಟು ಲಾಭ ಕಾಣಬಹುದು ಎಂಬ ಆಶಯದೊಂದಿಗೆ ಕೃಷಿ ಕಾಯಕಕ್ಕೆ ಮುಂದಾಗಿದ್ದಾರೆ.

ದ್ವೀಪದ ಕರೂರು ಬಾರಂಗಿ ಹೋಬಳಿಯಲ್ಲಿ ಈ ಭಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶರಾವತಿ ಎಡದಂಡೆಯ ನೆಲ್ಲಿಬೀಡು, ವಳೂರು, ಮರಾಠಿ ಚಂಗೊಳ್ಳಿ, ತುಮರಿ ಗ್ರಾಮದ ಮುಪ್ಪಾನೆ, ಕಳೂರು, ಹೆರಾಟೆ, ಆವಿಗೆ, ಕೊಡಸರ, ಬಿಳಿಗಾರು ಸುತ್ತಮುತ್ತ ಉತ್ತಮ ಮಳೆ ಆಗುತ್ತಿದೆ.

ಹೋಬಳಿಯಲ್ಲಿ ಜುಲೈ 10ರಂದು 63. 9 ಮಿ.ಮೀ ಮಳೆ ದಾಖಲಾಗಿದೆ.

ಗರಿಗೆದರಿದ ಮೊಳೆ ಕಟ್ಟುವ ಪ್ರಕ್ರಿಯೆ: ಈ ಭಾಗದಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗುತ್ತಿದ್ದು, ಕರೂರು ಹೋಬಳಿಯಲ್ಲಿ 979 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಸದ್ಯ ಶೇ 63ರಷ್ಟು ಮೊಳೆ ಕಟ್ಟಿದ ಭತ್ತ ಬಿತ್ತನೆಯಾಗಿದೆ. ತುಮರಿ ಕೃಷಿ ಕೇಂದ್ರದಲ್ಲಿ ಅಗತ್ಯ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದು ಇಂಟಾನ (ಕಪ್ಪು), 1001 ಇನ್ನು ಹಲವು ಭತ್ತದ ತಳಿಗಳನ್ನು ಈಗಾಗಲೇ ವಿತರಿಸಲಾಗಿದೆ.

ಭತ್ತದ ಬೀಜದ ಮೊಳೆ ಕಟ್ಟುವ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ರೈತರು ಉಳುಮೆ ಮಾಡಿ, ಬಿತ್ತನೆಗೆ ಜಮೀನು ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಭಾಗದಲ್ಲಿನ ಬರುವೆ, ಮರಾಠಿ, ಮಾರಲಗೋಡು, ಬೊಬ್ಬಿಗೆ, ಮರಾಠಿ, ಕಾರಣಿ, ಬಿಳಿಗಾರು ಭಾಗದಲ್ಲಿ ಈಗಾಗಲೇ ಬಹುತೇಕ ಭತ್ತದ ಬಿತ್ತನೆ ಕಾರ್ಯ ಮುಗಿದಿದೆ.

ಅಡಿಕೆಗೆ ಔಷಧ ಸಿಂಪಡಣೆ ತೊಡಕು: ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಕೊಳೆ ರೋಗಕ್ಕೆ ಔಷಧ ಸಿಂಪಡಣೆ ಕಾರ್ಯ ಮಳೆಯ ಆರ್ಭಟಕ್ಕೆ ಮಂದಗತಿಯಲ್ಲಿ ಸಾಗಿದೆ. ಕಳೆದ ಸಾಲಿನಲ್ಲಿ ಕಾಣಿಸಿಕೊಂಡಿದ್ದ ಸೈನಿಕ ಹುಳುಬಾಧೆ ಹಾಗೂ ಎಲೆ ಚುಕ್ಕೆ ರೋಗ ತಪ್ಪಿಸಲು ರೈತರು ಅಗತ್ಯ ಔಷಧೋಪಚಾರ ಕೈಗೊಳ್ಳುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

ಶುಂಠಿಗೆ ಪೂರಕ ವಾತಾವರಣ: ಜೂನ್‌ ಮೊದಲ ವಾರದಲ್ಲಿ ವಾಡಿಕೆ ಮಳೆ ಕೊರತೆಯಿಂದ ಶುಂಠಿ ಬೆಳೆಗೆ ಪೂರಕವಾಗಿತ್ತು. ಈಗಾಗಲೇ ಕೊಡಸರ, ಕರೂರು, ಮಾರಲಗೋಡು ಭಾಗದಲ್ಲಿ ಮೇ ಅಂತ್ಯ ಹಾಗೂ ಜೂನ್ ತಿಂಗಳಲ್ಲಿ ಬೆಳೆದ ಶುಂಠಿ ಬೆಳೆ ಚಿಗುರೊಡೆದು ಬೆಳವಣಿಗೆಯ ಹಂತದಲ್ಲಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಶುಂಠಿ ಬೆಳೆ ಮಧ್ಯೆ ಬಿನ್ಸ್, ಅವರೆ, ಬದನೆ, ಅರಿಶಿಣವನ್ನು ಸಹ ಬೆಳೆದಿದ್ದಾರೆ.

ರಸಗೊಬ್ಬರದ ಕೊರತೆ ಇಲ್ಲ: ರೈತರಿಗೆ ರಸಗೊಬ್ಬರ ಪೂರೈಕೆಗೆ ಅಧಿಕೃತ ಮಾರಾಟ ಮಳಿಗೆ ಇಲ್ಲದಿದ್ದರೂ ಇಲ್ಲಿನ ಸಹಕಾರ ಸಂಘದ ಮೂಲಕ ದೊರೆಯುತ್ತಿದೆ.

‘ತುಮರಿ ಸಹಕಾರ ಸಂಘದಲ್ಲಿ ಗೊಬ್ಬರದ ಕೊರತೆ ಇಲ್ಲ. ಬ್ಯಾಕೋಡು ಸಹಕಾರ ಸಂಘದ ಮೂಲಕ ಈಗಾಗಲೇ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಅಡಿಕೆ ಬೆಳೆಗಾರರಿಗೆ ತುತ್ತ, ಸುಣ್ಣವನ್ನು ಸಹ ಬೇಡಿಕೆಗೆ ತಕ್ಕಂತೆ ಪೂರೈಸಲಾಗುವುದು’ ಎಂದು ಬ್ಯಾಕೋಡು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಉತ್ತಮ ಮುಂಗಾರು ಮಳೆಯಾಗಿ ಗದ್ದೆಯಲ್ಲಿ ನೀರು ನಿಂತಿದ್ದರೂ ಅಪಾಯದ ಮಟ್ಟವನ್ನು ತಲುಪಿಲ್ಲ. ಕರೂರು ಬಾರಂಗಿ ಹೋಬಳಿಯಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗುತ್ತಿದ್ದು, ಜುಲೈ ತಿಂಗಳ ಅಂತ್ಯದೊಳಗೆ ನಿಗದಿತ ಗುರಿ ತಲುಪಲಾಗುವುದು. ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಕಾಶಿನಾಥ್ ಒಂಟೇಕರ್ ತಿಳಿಸಿದರು.

***

ಸಾಗರ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ರೈತರು ಕೃಷಿ ಇಲಾಖೆ ಸಲಹೆ ಸೂಚನೆ ಪಾಲಿಸಬೇಕು. ಬಿತ್ತನೆ ಕಾರ್ಯ ಆರಂಭಿಸಬೇಕು. ಕರೂರು ಹೋಬಳಿ ಭಾಗದಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ.

ಚಂದ್ರಪ್ಪ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ತುಮರಿ

***

ಯೋಜನಾಬದ್ಧವಾಗಿ ಕೃಷಿ ಕಾರ್ಯ ಕೈಗೊಂಡರೆ ಉತ್ತಮ ಬೆಳೆ ಬೆಳೆಯಬಹುದು. ಸರ್ಕಾರ ಡಿಎಪಿ ರಸಗೊಬ್ಬರದ ದರವನ್ನು ಕಡಿಮೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ.

ತಿಮ್ಮನಾಯ್ಕ, ಮಿಂಚ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT