ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮುಖ್ಯಮಂತ್ರಿ ಪರ ವೀರಶೈವ ಮಠಾಧೀಶರ ವಕಾಲತ್ತು

Last Updated 21 ಜುಲೈ 2021, 13:49 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಇಲ್ಲದಿದ್ದರೆ ಸಾಮೂಹಿಕ ಹೋರಾಟ ಅನಿವಾರ್ಯ ಎಂದು ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಎಚ್ಚರಿಸಿತು.

ಮಠಗಳು ಸಮಾಜದ ಕೇಂದ್ರಗಳು. ಸಮಾಜ ಸೇವೆ ಮುಖ್ಯ ಉದ್ದೇಶ. ಸೇವೆ ಮಾಡುವ ಜನರನ್ನು ಗೌರವಿಸುವುದು ಮಠಗಳ ಕೆಲಸ. ನಿಜವಾದ ಸೇವಾ ಧುರೀಣ ಬಿ.ಎಸ್.ಯಡಿಯೂರಪ್ಪ ಅವರನ್ನೇ ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಅಧಿಕಾರದಿಂದ ಕೆಳಗಿಳಿಸಬಾರದು ಎಂದು ಮಠಾಧೀಶರ ಪರಿಷತ್ ಅಧ್ಯಕ್ಷ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು.

ನಾಯಕತ್ವ ಬದಲಾವಣೆಗೆ ಕಾರಣಗಳೇ ಇಲ್ಲ. ಅಗೋಚರವಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ಸುಗಮವಾಗಿ ನಡೆಯುತ್ತಿರುವ ಸರ್ಕಾರ ಬದಲಾವಣೆ ಮಾಡುವುದು ಅಭಿವೃದ್ಧಿ ತಡೆದಂತೆ. ಯಡಿಯೂರಪ್ಪ ಅವರು ಇಡೀ ರಾಜ್ಯದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಎಲ್ಲ ಬಡವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ಜನರಿಗೆ ಒಂದು ಸುಭದ್ರ ಸರ್ಕಾರ ಬೇಕಿತ್ತು. ಅಂತಹ ಸರ್ಕಾರವನ್ನು ಯಡಿಯೂರಪ್ಪ ನೀಡಿದ್ದಾರೆ. ಪುರಸಭೆ ಅಧ್ಯಕ್ಷರಾಗಿದ್ದವರು ಮುಖ್ಯಮಂತ್ರಿ ಪಟ್ಟವೇರಲು ಅವರ ಜನಪರ ಹೋರಾಟಗಳೇ ಕಾರಣ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಪಡೆಯಲು ಯಡಿಯೂರಪ್ಪ ಕಾರಣವಾಗಿದ್ದಾರೆ. ಅಂತಹ ಜನನಾಯಕರಿಗೆ ಗೌರವದಿಂದ ಅವಧಿ ಪೂರೈಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಾಮೂಹಿಕ ಹೋರಾಟ ಸಜ್ಜುಗೊಳಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ತವರು ಜಿಲ್ಲೆಗೂ ಯಡಿಯೂರಪ್ಪ ಕೊಡುಗೆ ಅಪಾರ. ವೈದ್ಯಕೀಯ ಕಾಲೇಜು, ನೀರಾವರಿ ಯೋಜನೆಗಳು, ಉಡುತಡಿ ಅಭಿವೃದ್ಧಿ, ಮಠಗಳಿಗೆ ಪ್ರೋತ್ಸಾಹ, ಕೊರೊನಾ ಸಮಯದಲ್ಲೂ ನಿರಂತರ ಅಭಿವೃದ್ಧಿ ಮಾಡಿದ್ದಾರೆ. ಪೂರ್ಣವಾಗಿ ಕೆಲಸ ಮಾಡಲು ಬಿಡಬೇಕು. ಇದು ಮಠಾಧೀಶರ ಒತ್ತಾಯ ಅಷ್ಟೆ ಅಲ್ಲ, ಜನಸಾಮಾನ್ಯರ ಆಗ್ರಹವೂ ಆಗಿದೆ. ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಬಿಜೆಪಿ ಮೇಲೂ ಪರಿಣಾಮ ಬೀರುತ್ತದೆ. ಈ ಹಿಂದೆಯೂ ಈ ಮಾತು ಹೇಳಿದ್ದೆವು. ಈಗಲೂ ಅದೇ ಮಾತು ಹೇಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಸಿದ್ಧ ಸ್ವಾಮೀಜಿ, ತೊಗರ್ಸಿ ಮಠದ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಬಳ್ಳಿಗಾವಿಯ ಶಿವಲಿಂಗೇಶ್ವರ ಸ್ವಾಮೀಜಿ, ದುಗ್ಲಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಡಾ.ಮಹಾಂತ ಸ್ವಾಮೀಜಿ, ಶಿರಾಳಕೊಪ್ಪ ವಿರಕ್ತ ಮಠದ ಸಿದ್ಧೇಶ್ವರ ಸ್ವಾಮೀಜಿ, ತಾಳಗುಪ್ಪದ ಸಿದ್ಧವೀರ ಸ್ವಾಮೀಜಿ, ಮೂಡಿಯ ಸದಾಶಿವ ಸ್ವಾಮೀಜಿ, ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಕ್ಯಾತ್ಯನೂರು ಹಿರೇಮಠದ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆಯ ಅಭಿನವ ಚನ್ನಬಸವ ಸ್ವಾಮೀಜಿ, ತೊಗರ್ಸಿಯ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಲಕ್ಕವಳ್ಳಿಯ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಹಾರನಹಳ್ಳಿಯ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಚೌಕಿ ಮಠದ ನೀಲಕಂಠ ಸ್ವಾಮೀಜಿ, ಅರಕೆರೆಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT