ಸೊರಬ: 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ತಾಲ್ಲೂಕಿನ ಹೆಸರಿ ಗ್ರಾಮದ ಯೋಧ ಶಿವಮೂರ್ತಿ ಅವರನ್ನು ಗ್ರಾಮಸ್ಥರು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಿದರು.
ಯೋಧ ಶಿವಮೂರ್ತಿ ಆಗಮನದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಶಿವಮೂರ್ತಿ ಅವರು ಭಾನುವಾರ ಸಂಜೆ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಬೆಳಗಿದರು. ಯುವಕರು ಚಿತ್ತಾಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಪಟ್ಟರು.
‘ದೇಶ ಸೇವೆ ತಮಗೆ ತೃಪ್ತಿ ತಂದಿದ್ದು, ಯುವ ಜನರು ದೇಶಪ್ರೇಮ ಬೆಳೆಸಿಕೊಳ್ಳಬೇಕು. 22 ವರ್ಷದ ಸುದೀರ್ಘ ಅನುಭವವನ್ನು ಶಾಲೆ,ಕಾಲೇಜುಗಳಲ್ಲಿ ಹಂಚಿಕೊಳ್ಳುತ್ತೇನೆ. ಇದರಿಂದ ಮಕ್ಕಳಿಗೆ ಸೇನೆಗೆ ಸೇರುವ ಪ್ರೇರಣೆ ದೊರೆಯಲಿದೆ’ ಎಂದು ಶಿವಮೂರ್ತಿ ತಿಳಿಸಿದರು.
ಸ್ನೇಹಿತರು, ಬಂಧು, ಬಳಗದವರು, ನೆರೆಹೊರೆಯ ಗ್ರಾಮಸ್ಥರು ಶಿವಮೂರ್ತಿ ಅವರನ್ನು ಅಭಿನಂದಿಸಿದರು. ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಇಂಡುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಮೂರ್ತಿ, ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ರಮೇಶ, ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್, ಉಮೇಶ್, ನಿಂಗಮ್ಮ, ರಾಜಪ್ಪ, ನೇಮಪ್ಪ ಇದ್ದರು.