ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯ ಸಾಂಪ್ರದಾಯಿಕ ಜ್ಞಾನಕ್ಕೆ ಮನ್ನಣೆ ಅಗತ್ಯ: ಶಿವಾನಂದ ಕಳವೆ

ಜಾಗತಿಕ ತಾಪಮಾನ ಮತ್ತು ಕೃಷಿ ಕುರಿತ ಜಾಗೃತಿ ಸಮಾವೇಶದಲ್ಲಿ ಶಿವಾನಂದ ಕಳವೆ ಅಭಿಮತ
Last Updated 30 ಮೇ 2022, 4:02 IST
ಅಕ್ಷರ ಗಾತ್ರ

ಸಾಗರ: ಜಾಗತಿಕ ತಾಪಮಾನ ಏರುತ್ತಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಹಲವು ರೀತಿಯ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಇದನ್ನು ಎದುರಿಸಲು ಕೃಷಿಯ ನೆಲಮೂಲದ ಸಾಂಪ್ರದಾಯಿಕ ಜ್ಞಾನಕ್ಕೆ ಮನ್ನಣೆ ದೊರಕಬೇಕಿದೆ ಎಂದು ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಹೇಳಿದರು.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಮೈಸೂರಿನ ಉಳುಮೆ ಪ್ರತಿಷ್ಠಾನ ಹಾಗೂ ದೊಂಬೆಕೊಪ್ಪದ ಸಾರಾ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಜಾಗತಿಕ ತಾಪಮಾನ ಮತ್ತು ಕೃಷಿ ಕುರಿತ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜಾಗತಿಕ ತಾಪಮಾನ ಏರಿಕೆಯಿಂದ ಉದ್ಭವಿಸಿರುವ ಕೃಷಿ ಬಿಕ್ಕಟ್ಟುಗಳಿಗೆ ವಿಶ್ವವಿದ್ಯಾಲಯಗಳ ತಜ್ಞರು ಅಥವಾ ವಿದೇಶದವರ ಬಳಿ ಪರಿಹಾರ ಇಲ್ಲ. ಅದು ರೈತರಲ್ಲಿರುವ ಸಾಂಪ್ರದಾಯಿಕ ಜ್ಞಾನದಲ್ಲಿದೆ. ಸಿದ್ಧಸೂತ್ರಗಳಿಗೆ ಕಟ್ಟು ಬೀಳದೆ ಸಮಗ್ರವಾಗಿ ಕೃಷಿಯನ್ನು ನೋಡುವ ವಿಧಾನ ನಮ್ಮದಾದರೆ ಮಾತ್ರ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಸಿಗಳಿಗೆ ನೆರಳು ಕೊಡುವುದೇ ಸವಾಲಾಗಿದೆ. ನೆರಳಿಗಾಗಿ ಸಸಿಗಳಿಗೆ ಪ್ಲಾಸ್ಟಿಕ್ ಕವರ್, ಸೀರೆ ಹೊದಿಸುವ ಸನ್ನಿವೇಶ ನಿರ್ಮಾಣವಾಗಿದೆ. ನೆರಳಿಗಾಗಿ ಒಂದು ಸಸಿಯ ಪಕ್ಕದಲ್ಲಿ ಮತ್ತೊಂದು ಚಿಕ್ಕ ಸಸಿ ಬೆಳೆಸುವ ಸಾಧ್ಯತೆಯನ್ನು ನಾವು ಪರಿಶೀಲಿಸುತ್ತಿಲ್ಲ. ಇಂತಹ ಸರಳ ಸೂತ್ರಗಳು ನಮ್ಮ ಹತ್ತು ತಲೆಮಾರಿನ ಕೃಷಿಯ ಸಾಂಪ್ರದಾಯಿಕ ಜ್ಞಾನದಲ್ಲಿ ಇದೆ’ ಎಂದು ವಿವರಿಸಿದರು.

ಪಶ್ಚಿಮಘಟ್ಟದ ಮೇಲೆ ಜಾಗತಿಕ ತಾಪಮಾನದ ಪರಿಣಾಮ ಕುರಿತು ಝೂಮ್ ಆ್ಯಪ್ ಮೂಲಕ ಮಾತನಾಡಿದ ಪರಿಸರ ಬರಹಗಾರ ನಾಗೇಶ್ ಹೆಗಡೆ, ‘ಅಭಿವೃದ್ಧಿ ಯೋಜನೆಗಳ ಒತ್ತಡದಿಂದಾಗಿ ಪಶ್ಚಿಮಘಟ್ಟ ನಲುಗುತ್ತಿದೆ. ಹವಾಮಾನ ಬದಲಾವಣೆ ಎಂಬ ಮಹಾಸಂಕಟ ನಮ್ಮೆದುರು ನಿಂತಿದೆ. ಬರಗಾಲ, ಅತಿವೃಷ್ಟಿ, ಹಿಮಪಾತ, ಮೇಘಸ್ಫೋಟ ಅನೇಕ ಅನಾಹುತಗಳನ್ನು ತರುತ್ತಿದೆ’ ಎಂದರು.

ನಾಡಿನ ಕೆಲವರ ಅನುಕೂಲಕ್ಕೆ ಮಾತ್ರ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಈಗಿನ ಅಭಿವೃದ್ಧಿಯ ಮಾದರಿಯೇ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ ನಮ್ಮ ದೈನಂದಿನ ಬದುಕನ್ನು ತೀವ್ರವಾಗಿ ಬಾಧಿಸಲಿದೆ. ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ’ ಎಂದರು.

ಉಳುಮೆ ಪ್ರತಿಷ್ಠಾನದ ಅವಿನಾಶ್, ‘ವರ್ಷದಿಂದ ವರ್ಷಕ್ಕೆ ಚಂಡಮಾರುತದ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದರಿಂದಾಗಿ ಬೆಳೆಗಳಿಗೆ ರೋಗಗಳು ಬರುವುದು ಹೆಚ್ಚುತ್ತಿದೆ. ವರ್ಷದ 365 ದಿನಗಳಲ್ಲಿ 250 ದಿನ ಚಂಡಮಾರುತವೇ ಆದರೆ ಬೆಳೆಗಳಿಗೆ ಅಗತ್ಯವಿರುವ ಬೆಳಕು ಸಿಗದೆ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯುವುದು ಕಷ್ಟಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್, ಮೊಬೈಲ್ ಪೋನ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದೇ ಜಾಗತಿಕ ತಾಪಮಾನ ಕಡಿಮೆ ಮಾಡಲು ನಾವು ನೀಡಬಹುದಾದ ಕೊಡುಗೆ. ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ನಡೆಯಬೇಕು’ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ‘ಆಧುನಿಕ ಕೃಷಿ ಪದ್ಧತಿ ಮೂಲಕ ರಾಸಾಯನಿಕಗಳ ಬಳಕೆ ಹೆಚ್ಚಾಗಿರುವುದು ಜಾಗತಿಕ ತಾಪಮಾನ ಏರಲು ಒಂದು ಕಾರಣವಾಗಿದೆ. ಈ ಬಗ್ಗೆ ಅವಲೋಕನ ನಡೆಸಿ ರಾಸಾಯನಿಕಮುಕ್ತ ಕೃಷಿ ಪದ್ಧತಿ ನಮ್ಮದಾಗಿ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ’ ಎಂದು ಎಚ್ಚರಿಸಿದರು.

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಯೇಸು ಪ್ರಕಾಶ್, ಸಾರಾ ಸಂಸ್ಥೆಯ ಧನುಷ್, ಮಂಜುನಾಥ ಬ್ಯಾಣದ್ ಇದ್ದರು. ಸಾಗರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನಂತರ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT