ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ: ₹ 2.81 ಕೋಟಿ ಉಳಿತಾಯ ಬಜೆಟ್

2021–22ನೇ ಸಾಲಿನ ಬಜೆಟ್‌ ಮಂಡಿಸಿದ ಅನಿತಾ ರವಿಶಂಕರ್
Last Updated 1 ಏಪ್ರಿಲ್ 2021, 7:48 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ 2021–22ನೇ ಸಾಲಿಗೆ ₹ 2.81 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ₹ 288 ಕೋಟಿ ಬಜೆಟ್ ಮಂಡಿಸಲಾಗಿದೆ. ವಿವಿಧ ವೆಚ್ಚಗಳ ಬಳಿಕ ₹ 2.81 ಕೋಟಿ ಉಳಿತಾಯವಾಗಲಿದೆ ಎಂದು ಬಜೆಟ್ ಪ್ರತಿಯಲ್ಲಿ ತಿಳಿಸಲಾಗಿದೆ.

ಏನೆಲ್ಲ ಘೋಷಣೆ ಮಾಡಲಾಗಿದೆ?: ಒಳಾಂಗಣದ ಕ್ರೀಡಾಂಗಣ: ಹುಡ್ಕೊ ಕಲ್ಲಹಳ್ಳಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನ ನಿರ್ಮಾಣ.

ಸುಶಾಸನ ಭವನ: ಎಲ್ಲ ವಾರ್ಡ್ ಸದಸ್ಯರಿಗೆ ಸಂಪರ್ಕ ಕೊಠಡಿಗಳ ನಿರ್ಮಾಣ, ಎಂಜಿನಿಯರ್‌ಗಳ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ.

ಕುಡಿಯುವ ನೀರಿನ ಘಟಕ: ಜನನಿಬಿಡ ಪ್ರದೇಶಗಳಲ್ಲಿ ಪಾವತಿಸಿ, ಉಪಯೋಗಿಸುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ₹ 5 ಲಕ್ಷ.

ಕೆರೆಗಳ ಕಾಯಕಲ್ಪ: ಆದ್ಯತೆ ಮೇರೆಗೆ ಹತ್ತು ಕೆರೆಗಳ ಅಭಿವೃದ್ಧಿ ಮಾಡಲು ಯೋಜನೆ. ಪಾಲಿಕೆ ಅನುದಾನದಿಂದ ಐದು ಕೆರೆಗಳು, ಉಳಿದ ಐದು ಕೆರೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ₹ 1 ಕೋಟಿ ಮೀಸಲಿಡಲಾಗಿದೆ.

ಪ್ಲಾಸ್ಟಿಕ್ ಮುಕ್ತ, ಹಸಿರು ಶಿವಮೊಗ್ಗ: ಶಿವಮೊಗ್ಗವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಅರಿವು ಮತ್ತು ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ₹ 10 ಲಕ್ಷ ಮೀಸಲಿಡಲಾಗಿದೆ. ಇನ್ನು 27 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ವರ್ಷ ನಗರದ ಉಳಿದ ಪಾರ್ಕ್‌ಗಳ ಅಭಿವೃದ್ಧಿಗೆ ಯೋಜಿಸಲಾಗಿದೆ.

ಪಾಲಿಕೆಗೆ ಸಿಬ್ಬಂದಿಗೆ ವಸತಿ ಗೃಹ, ವಿಮೆ: ಪಾಲಿಕೆಯ ಡಿ ಗ್ರೂಪ್ ನೌಕರರು ಮತ್ತು ನೀರು ಸರಬರಾಜು ಮಾಡುವ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲು ₹ 5 ಕೋಟಿ, ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ₹ 30 ಲಕ್ಷ, ಪಾಲಿಕೆ ಖಾಯಂ ನೌಕರರು ಮತ್ತು ಜನಪ್ರತಿನಿಧಿಗಳ ವೈದ್ಯಕೀಯ ವಿಮಾ ಯೋಜನೆಗೆ ₹ 50 ಲಕ್ಷ ಹಣ ನಿಗದಿಪ‍ಡಿಸಲಾಗಿದೆ.

ಹೊಸ ವಾಣಿಜ್ಯ ಸಂಕೀರ್ಣ: ವಿನೋಬನಗರದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದೆ. ಇನ್ನು ಗಾಂಧಿ ಬಜಾರ್‌ನಲ್ಲಿ ಬಟ್ಟೆ ಮಾರುಕಟ್ಟೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಾಣಕ್ಕೆ ಕಳೆದ ಬಜೆಟ್‍ನಲ್ಲಿ ₹ 50 ಲಕ್ಷ ಮೀಸಲಿಡಲಾಗಿತ್ತು. ಈ ಬಜೆಟ್‍ನಲ್ಲೂ ₹ 50 ಲಕ್ಷ ಮೀಸಲಿಡಲಾಗಿದೆ.

ಇ- ಶೌಚಾಲಯ, ಹೊಸ ಯಂತ್ರಗಳು: ನಗರದ ಸ್ವಚ್ಛತೆಗಾಗಿ ಸ್ವೀಪಿಂಗ್ ಮೆಷಿನ್ ಮತ್ತು ಘನ ತ್ಯಾಜ್ಯ ಸಾಗಣೆಗೆ ಎರಡು ಲಾರಿಗಳು, ಸಂಚಾರಿ ಶೌಚಾಲಯಗಳ ನಿರಂತರ ಬಳಕೆಗೆ ಎರಡು ಹೊಸ ಟ್ರ್ಯಾಕ್ಟರ್ ಖರೀದಿ, ನಗರದ ವಿವಿಧೆಡೆ ಇ–ಶೌಚಾಲಯ ನಿರ್ಮಾಣಕ್ಕೆ
₹ 2 ಕೋಟಿ ಮೀಸಲಿಡಲಾಗಿದೆ. ಇನ್ನು, ಮೂಲದಲ್ಲೇ ಘನ ತ್ಯಾಜ್ಯ ವಿಂಗಡಿಸುವ ಯೋಜನೆಯನ್ನು ಮುಂದುವರಿಸಲಾಗಿದೆ.

ಅಂಗವಿಕಲರಿಗೆ ಸಲಕರಣೆಗಳು: ಅಂಗವಿಕಲರಿಗೆ ವಿವಿಧ ಸಲಕರಣೆಗಳು ಮತ್ತು ಸೌಲಭ್ಯ ಕಲ್ಪಿಸಲು ಡಾ.ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿ ಯೋಜನೆಗೆ ₹ 20 ಲಕ್ಷ ಮೀಸಲಿಡಲಾಗಿದೆ. ಇನ್ನು, ಪಂಡಿತ್ ದೀನದಯಾಳ್ ಹೃದಯಸ್ಪರ್ಶಿ ಯೋಜನೆ ಅಡಿಯಲ್ಲಿ ನಿರ್ಗತಿಕರು, ಅನಾಥರಿಗಾಗಿ ಮಾದರಿ ಆಶ್ರಯ ತಾಣ ನಿರ್ಮಾಣಕ್ಕೆ ₹ 35 ಲಕ್ಷ ಮೀಸಲಿಡಲಾಗಿದೆ. ಸ್ಲಂ ಪ್ರದೇಶದಲ್ಲಿ ವಾಸವಾಗಿರುವವರ ಆರೋಗ್ಯಕ್ಕಾಗಿ ಆರೋಗ್ಯ ಭಾರತಿ ಯೋಜನೆ ರೂಪಿಸಲಾ ಗಿದ್ದು, ₹ 25 ಲಕ್ಷ ಮೀಸಲಿಡಲಾಗಿದೆ.

ಮಹಿಳೆಯರು, ಮಕ್ಕಳಿಗೆ ಯೋಜನೆ: ಬಾಲವಿಕಾಸ ಕೇಂದ್ರಗಳ ಮೂಲಕ ಮಕ್ಕಳ ಕಲೆ, ನಾಟಕ, ಆಟೋಟ ಚಟುವಟಿಕೆ ಪ್ರೋತ್ಸಾಹಿಸಲು ಲವಕುಶ ಮಕ್ಕಳ ಕಲ್ಯಾಣ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ₹ 10 ಲಕ್ಷ ಮೀಸಲಿಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗೆ ತಲಾ ₹ 10 ಸಾವಿರ ಮೊತ್ತದ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲವಾಗುವ ಕರಕುಶಲ, ಗುಡಿ ಕೈಗಾರಿಕೆ, ಕೌಶಲ ತರಬೇತಿ ಕಲ್ಪಿಸಲು ಕೆಳದಿ ರಾಣಿ ಚೆನ್ನಮ್ಮ ಮಹಿಳಾ ಯೋಜನೆ ಅಡಿಯಲ್ಲಿ ₹ 25 ಲಕ್ಷ ನಿಗದಿಪಡಿಸಲಾಗಿದೆ.

ಬೆಳ್ಳಿ ಮಂಡಲದ ಮೂಲಕ ಛಾಯಾಚಿತ್ರ: ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಬಯಲು ರಂಗಮಂದಿರಗಳ ನಿರ್ಮಾಣ, ಬೆಳ್ಳಿ ಮಂಡಲದ ಮೂಲಕ ಅತ್ಯುತ್ತಮ ಛಾಯಾಚಿತ್ರ ನಿರ್ಮಾಣಕ್ಕೆ ₹ 20 ಲಕ್ಷ ಮೀಸಲಿಡಲಾಗಿದೆ.

ಶಾಲೆಗಳ ದುರಸ್ತಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ: ತ್ರಿವಿಧ ದಾಸೋಹಿ ಡಾ.ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು, ಎನ್‍ಸಿಸಿ, ಎನ್‍ಎಸ್‍ಎಸ್‍, ಸ್ಕೌಟ್ಸ್ ಅಂಡ್‌ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಯೋಜಿಸಲಾಗಿದೆ.

ಕ್ರೀಡೆಗೆ ಪ್ರೋತ್ಸಾಹ ನೀಡಲು ಯೋಜನೆ: ರಾಷ್ಟ್ರೀಯ ಕ್ರೀಡೆಗಳು, ಸ್ವದೇಶಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗೆದ್ದು ಬಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ₹ 10 ಲಕ್ಷ ಮೀಸಲಿಡಲಾಗಿದೆ.

ಸ್ವ– ಉದ್ಯೋಗಕ್ಕೆ ಪ್ರೋತ್ಸಾಹ: ವಿವಿಧ ಬ್ಯಾಂಕುಗಳ ಮೂಲಕ ಸಾಲ ಪಡೆದು ಸ್ವ ಉದ್ಯೋಗ ನಡೆಸುವ ಯುವಕರಿಗೆ ಸಹಾಯಧನ, ಕೌಶಲ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಪ್ರೋತ್ಸಾಹ, ಉದ್ಯೋಗ ಮೇಳಗಳನ್ನು ಆಯೋಜಿಸಲು ₹ 25 ಲಕ್ಷ ಯೋಜನೆ ರೂಪಿಸಲಾಗಿದೆ.

ಸಭೆಯಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ!

ಮಹಾನಗರ ಪಾಲಿಕೆ 2021–22 ಸಾಲಿನ ಬಜೆಟ್ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಘೋಷಣೆಯಿಂದಾಗಿ ಪಾಲಿಕೆ ಸಭಾಂಗಣದಲ್ಲಿ ಕೆಲ ಕಾಲ ಗೊಂದಲ ನಿರ್ಮಾಣವಾಯಿತು.

ಬಿಜೆಪಿ ಸದಸ್ಯರು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಎಂದು ಕೂಗಿದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ‘ಕಳ್ಳ ಭಕ್ತರು’ ಎಂಬ ಘೋಷಣೆ ಮೊಳಗಿಸಿದರು.

ಬಜೆಟ್ ಭಾಷಣಕ್ಕೂ ಅಡ್ಡಿ: ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಬಜೆಟ್ ಭಾಷಣ ಆರಂಭಿಸಿದ ಬೆನ್ನಲ್ಲೇ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆ ಬಜೆಟ್ ಪ್ರತಿಯನ್ನು ಪೂರ್ಣವಾಗಿ ಓದಲು ಸಾಧ್ಯವಾಗದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು. ನಂತರ ಕೆಲ ಸಮಯ ವಿರೋಧ ಪಕ್ಷಗಳ ಘೋಷಣೆ ನಡುವೆಯೂ ಅನಿತಾ ರವಿಶಂಕರ್ ಬಜೆಟ್ ಪ್ರತಿಯನ್ನು
ಓದಿದರು.

ಬಜೆಟ್ ಭಾಷಣದ ಆರಂಭದಲ್ಲೇ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಬಾರಿ ಬಜೆಟ್‌ನಲ್ಲಿ ಘೋಷಣೆಯಾದ ಹೊಸ ಯೋಜನೆಗಳನ್ನೇ ಈವರೆಗೆ ಪೂರ್ಣಗೊಳಿಸಿಲ್ಲ. ಈಗ ಮತ್ತಷ್ಟು ಯೋಜನೆಗಳನ್ನು ಘೋಷಣೆ ಮಾಡಿದರೆ ಏನೂ ಪ್ರಯೋಜನ, ಮೊದಲು ಹಳೇ ಯೋಜನೆಗಳನ್ನು ಪೂರ್ಣಗೊಳಿಸಿ ಎಂದು ಕುಟುಕಿದರು.

ಟೇಬಲ್ ಎದುರು ಪ್ರತಿಭಟನೆ: ಬಜೆಟ್ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರಿಗೆ ಇತರೆ ಸದಸ್ಯರು ಬೆಂಬಲವಾಗಿ ನಿಂತರು. ಈ ಹಿಂದೆ ಘೋಷಣೆಯಾಗಿ ಪೂರ್ಣಗೊಳ್ಳದ ಯೋಜನೆಗಳ ಪಟ್ಟಿಯ ಬೋರ್ಡ್‌ಗಳನ್ನು ಹಿಡಿದು ಘೋಷಣೆ ಕೂಗಲು ಆರಂಭಿಸಿದರು. ಮೇಯರ್ ಟೇಬಲ್ ಮುಂಭಾಗ ಎಚ್.ಸಿ.ಯೋಗೀಶ್, ನಾಗರಾಜ್ ಕಂಕಾರಿ ಬಿ.ಎ.ರಮೇಶ್ ಹೆಗ್ಡೆ, ರೇಖಾ ರಂಗನಾಥ್ ಪ್ರತಿಭಟನೆ ನಡೆಸಿದರು.

***

ಕಾಂಗ್ರೆಸ್‌ನಿಂದ ಅತಿರೇಕದ ವರ್ತನೆ: ಆರೋಪ

‘2021–22ನೇ ಸಾಲಿನಲ್ಲಿ ₹ 28,567.90 ಲಕ್ಷದ ಬಜೆಟ್‌ ಮಂಡಿಸಲಾಗಿದೆ. ಇದು ₹ 2.81 ಕೋಟಿ ಉಳಿತಾಯ ಬಜೆಟ್ ಆಗಿದೆ. ಆದರೆ, ಕಾಂಗ್ರೆಸ್ ಇದನ್ನು ಚರ್ಚೆ ಮಾಡಲು ಸಾಧ್ಯವಿಲ್ಲವೆಂಬ ಸ್ಥಿತಿ ನಿರ್ಮಿಸಿದೆ’ ಎಂದು ಮೇಯರ್ ಸುನೀತಾ ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘5 ವರ್ಷದ ಯೋಜನೆ ಇದಾಗಿದೆ. ವಿಪಕ್ಷದ ಅಪಾದನೆ ಇದ್ದರೂ, ಬಜೆಟ್‌ನಲ್ಲಿ ಸರಿಯಾಗಿ ಭಾಗವಹಿಸಿದ್ದರೆ ಚರ್ಚೆ ಚೆನ್ನಾಗಿರುತ್ತಿತ್ತು. ಹಿಂದಿನ ಯೋಜನೆಗಳು ಕೊರೊನಾ ಕಾರಣ ಆರಂಭದ ಹಂತದಲ್ಲಿವೆ. ಗೋರಕ್ಷಣೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಬಸವಣ್ಣನ ಪುತ್ಥಳಿಯನ್ನು ಡಿವಿಎಸ್ ವೃತ್ತದ ಬಳಿ ಸ್ಥಾಪಿಸಲು ಪ್ರಯತ್ನ ನಡೆಸಲಾಗಿದೆ’ ಎಂದು ತಿಳಿಸಿದರು.

‘ಪಾಲಿಕೆಯಲ್ಲಿ ಕಾಂಗ್ರೆಸ್ ಚರ್ಚೆಗೆ ಇಳಿಯದೆ ಪ್ರತಿಭಟನೆ, ದೊಂಬಿ ಗಲಾಟೆಯಲ್ಲಿ ತೊಡಗಿದರೆ, ಅದನ್ನು ಹೊರಗಿಟ್ಟು ಸಭೆ ನಡೆಸಲಾಗುವುದು. ಜನರಿಗೆ ಬೇಕಾಗಿರುವುದು ಅಭಿವೃದ್ಧಿ. ಹಾಗಾಗಿ, ಅಭಿವೃದ್ಧಿಗೆ ವಿರೋಧವಾಗಿರುವ ಕಾಂಗ್ರೆಸ್ ಮತ್ತೆ ಮುಂದಿನ ದಿನಗಳಲ್ಲಿಯೂ ಪ್ರತಿಪಕ್ಷದಲ್ಲೇ ಕೂರಲಿದೆ’ ಎಂದು ಸದಸ್ಯ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.

‘ರಾಜ್ಯದಲ್ಲಿಯೇ ಮೊದಲು ಪರಿಸರ ಬಜೆಟ್ ಮಂಡಿಸಿದ ಪಾಲಿಕೆ ಶಿವಮೊಗ್ಗ. ವಿಶೇಷ ಕಲ್ಪನೆಯೊಂದಿಗೆ ಪಾಲಿಕೆ ಮುನ್ನಡೆಯುತ್ತಿದೆ. 43 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಪಾರ್ಕ್ ಅಭಿವೃದ್ಧಿ ನಡೆದಿದೆ’ ಎಂದರು.

‘ಇದುವರೆಗೂ ಕಾಂಗ್ರೆಸ್ ಅನುಪಾಲನಾ ವರದಿ ನೀಡಿರುವ ಬಗ್ಗೆ ಎಲ್ಲೂ ದಾಖಲೆಯೇ ಇಲ್ಲ. ಆದರೆ, ಬಿಜೆಪಿ ಅನುಪಾಲನಾ ವರದಿಯನ್ನು ಮಂಡಿಸಿದೆ. ಗೋಸಂರಕ್ಷಣೆ ಬಗ್ಗೆ ಕಾಂಗ್ರೆಸ್ ಮಾತನಾಡಿದ್ದೆ ಖುಷಿಯಾಗಿದೆ’ ಎಂದು ಕುಟುಕಿದರು.

ಈ ಬಾರಿಯ ಬಜೆಟ್‌ನಲ್ಲಿ ಪಾಲಿಕೆಯ ಡಿ ಗ್ರೂಪ್ ನೌಕರಿಗೆ ವಸತಿ ಭಾಗ್ಯ ಯೋಜನೆ, ಆಟದ ಮೈದಾನ ಸಂರಕ್ಷಣೆಗಾಗಿ ಯೋಜನೆ ರೂಪಿಸಲಾಗಿದೆ. ಸುಶಾಸನಕ್ಕೆ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಪೂರ್ಣಗೊಳ್ಳದ ಯೋಜನೆಗಳು

2019ರಲ್ಲಿ ಸಾಲಿನ ಬಜೆಟ್‌ನಲ್ಲಿ ಗೋವು ಸಂರಕ್ಷಣಾ ಯೋಜನೆಗೆ ₹ 50 ಲಕ್ಷ ಮೀಸಲಿಡಲಾಗಿದೆ. ಶ್ರೀ ವಿದ್ಯಾಸರಸ್ವತಿ ಯೋಜನೆಗೆ ₹ 40 ಲಕ್ಷ, ಲವಕುಶ ಮಕ್ಕಳ ಕಲ್ಯಾಣ ಯೋಜನೆಗೆ ₹ 10 ಲಕ್ಷ, ಡಾ.ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿಗೆ ₹ 20 ಲಕ್ಷ ಮೀಸಲಿಡಲಾಗಿತ್ತು. ಆದರೆ, ಈ ಯಾವ ಯೋಜನೆಗಳೂ ಜಾರಿಗೊಂಡಿಲ್ಲ.

ಅಜಿತ್ ಶ್ರೀ ಸೇವಾ ಯೋಜನೆಗೆ ₹ 25 ಲಕ್ಷ, ಪಂಡಿತ್ ದೀನ್ ದಯಾಳ್ ಹೃದಯ ಸ್ಪರ್ಶಿ ಯೋಜನೆಗೆ ₹ 35 ಲಕ್ಷ, ಪಾಲಿಕೆ ಕೆರೆಗಳ ಕಾಯಕಲ್ಪಕ್ಕೆ ₹1 ಕೋಟಿ, ಸ್ತ್ರೀ ಸಬಲೀಕರಣಕ್ಕೆ ₹ 10 ಸಾವಿರ, ನಗರದ ಮುಖ್ಯರಸ್ತೆಗಳ ಸೌಂದರ್ಯಕ್ಕೆ ₹ 50 ಲಕ್ಷ, ಜನ ಪ್ರತಿನಿಧಿಗಳ ಸಮಾಲೋಚನಾ ಕೊಠಡಿ ₹ 50 ಲಕ್ಷ, ಕಸಾಯಿ ಖಾನೆ ನಿರ್ಮಾಣಕ್ಕೆ ₹ 20 ಲಕ್ಷ ಹಣ ಮೀಸಲಿದ್ದರೂ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT