ಭಾನುವಾರ, ಆಗಸ್ಟ್ 14, 2022
26 °C

ಪ್ರಾಮಾಣಿಕ ಕಾರ್ಯಕರ್ತರನ್ನು ಗೆಲ್ಲಿಸಿ; ಸಚಿವ ಈಶ್ವರಪ್ಪ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಶ್ರಮಿಸಿದ ಪ್ರಾಮಾಣಿಕ ಕಾರ್ಯಕರ್ತರನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.

ಪಟ್ಟಣ ಸಮೀಪದ ಕುಮದ್ವತಿ ಕೇಂದ್ರೀಯ ಶಾಲೆ ಸಭಾಂಗಣದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಪಕ್ಷದ ಮುಖಂಡರು ಸಂಸದ ಹಾಗೂ ಶಾಸಕರಾಗಲು ಹಳ್ಳಿಗಳಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಕಾರ್ಯಕರ್ತರನ್ನು ಗೆಲ್ಲಿಸಿ ಅಧಿಕಾರ ನೀಡಬೇಕು. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ತೀರ್ಮಾನಕ್ಕೆ ಕಾರ್ಯಕರ್ತರು ಬದ್ಧರಾಗಿರಬೇಕು. ಪಕ್ಷದವರೇ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಬಿಡಬಾರದು. ಅವರ ಮನ ಓಲೈಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಚುನಾವಣೆ ಬಂತೆಂದರೆ ಕಾಂಗ್ರೆಸ್‌ನವರಿಗೆ ಆತಂಕವಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತದೆ ಎನ್ನುತ್ತಾರೆ. ಆದರೆ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿರುವುದನ್ನು ನೋಡಿದ್ದೇವೆ. ಯಾವುದೇ ಚುನಾವಣೆ ಬಂದರೂ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಿಂದೂಗಳ ಹತ್ಯೆ ಮಾಡಿದ್ದ ಗೋ ಕಳ್ಳರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಲವ್‌ ಜಿಹಾದ್‌ ವಿಷಯದಲ್ಲಿ ಹಗುರವಾಗಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ‘ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಸಿದ್ಧಾಂತ ಹಾಗೂ ದೇಶದ ಅಭಿವೃದ್ಧಿಯ ಚಿಂತನೆಯನ್ನು ಹೊಂದಿದೆ. ಗಾಂಧೀಜಿ ಗ್ರಾಮ ಸ್ವರಾಜ್ ಕನಸನ್ನು ಸಕಾರಗೊಳಿಸಲು ಗ್ರಾಮ ಪಂಚಾಯಿತಿ ಪ್ರಮುಖವಾಗಿದ್ದು, ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯ ದೊರಕಿಸುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಸರ್ಕಾರ ಪರ ಅಲೆ ಇರುತ್ತದೆ. ಈ ಅಲೆಯನ್ನು ಸರಿಯಾದ ರೀತಿ ಚುನಾವಣೆಯಲ್ಲಿ ಉಪಯೋಗಿಸಿಕೊಳ್ಳಬೇಕು. ಒಟ್ಟಾಗಿ ಚುನಾವಣೆ ಎದುರಿಸಬೇಕು. ಎಚ್ಚರಿಕೆಯಿಂದ ಅಭ್ಯರ್ಥಿ ಆಯ್ಕೆ ಮಾಡಬೇಕು. ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸಿ ಹೆಚ್ಚು ಸ್ಥಾನ ಗೆಲ್ಲಬೇಕು’ ಎಂದರು.

ಸೊರಬ ಶಾಸಕ ಕುಮಾರ್ ಬಂಗಾರಪ್ಪ, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಸರಿನಲ್ಲಿ ಜನಸೇವೆ ಮಾಡುವ ಪ್ರಾಮಾಣಿಕ ವ್ಯಕ್ತಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಆಂತರಿಕ ಪ್ರಜಾಪ್ರಭುತ್ವ ಇಟ್ಟುಕೊಂಡು ಚುನಾವಣೆ ಎದುರಿಸಬೇಕು’ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಎಚ್‌. ಹಾಲಪ್ಪ ಹರತಾಳು, ವಿಧಾನಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ರುದ್ರೇಗೌಡ್ರು, ಮಾಜಿ ಸದಸ್ಯ ಆರ್‌.ಕೆ. ಸಿದ್ರಾಮಣ್ಣ, ಮಾಜಿ ಶಾಸಕ ಸ್ವಾಮಿರಾವ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜ್, ಪ್ರಕೋಷ್ಠಗಳ ಅಧ್ಯಕ್ಷ ಭಾನುಪ್ರಕಾಶ್, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಪ್ರಸನ್ನ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶನಾಯ್ಕ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಮುಖಂಡರಾದ ಗಿರೀಶ್‌ಪಟೇಲ್, ವೀರೇಂದ್ರ ಪಾಟೀಲ್‌, ಗುರುಪ್ರಸನ್ನ, ಗಣಪತಿ, ಲೋಕನಾಥ್, ಕೆ.ಆರ್. ಗಣೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು