ಶನಿವಾರ, ಸೆಪ್ಟೆಂಬರ್ 18, 2021
30 °C
ದೆಹಲಿ ನಾಯಕರಿಗೆ ಶ್ರೀಶೈಲ ಸ್ವಾಮೀಜಿ ಸಲಹೆ

ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸಲು ಯಡಿಯೂರಪ್ಪಗೆ ಸಹಕಾರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ‘ವೀರಶೈವ ಸಮಾಜದ ಪ್ರಶ್ನಾತೀತ ಹಾಗೂ ಪಕ್ಷಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಲು ದೆಹಲಿ ನಾಯಕರು ಸಹಕಾರ ನೀಡಬೇಕು. ಈ ಮೂಲಕ ಅವರಿಗೆ ಗೌರವಯುತವಾದ ಬೀಳ್ಕೊಡುಗೆ ನೀಡಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್‌ಜೆಪಿ ಐಟಿಐ ಕಾಲೇಜಿಗೆ ಭಾನುವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘ಸಮಾಜ ಹಾಗೂ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ಕಟ್ಟಿದವರು ಯಡಿಯೂರಪ್ಪ. ಅವರ ಕಾಲು ಎಳೆಯುವ ಕೆಲಸವನ್ನು ಅವರದೇ ಸಮಾಜದ ಕೆಲವು ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಅವರಿಗೂ ಮುಂದೆ ಅವಕಾಶಗಳು ಲಭಿಸಲಿವೆ. ಈಗ ಕಾಲು ಎಳೆಯುವ ಕೆಲಸ ಬಿಟ್ಟು ಎಲ್ಲರೂ ಯಡಿಯೂರಪ್ಪ ಅವರ
ಜತೆಗೆ ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಶಿಕಾರಿಪುರಕ್ಕೂ, ಶ್ರೀಶೈಲಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಹುಟ್ಟಿದ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಶ್ರೀಶೈಲದಲ್ಲಿ ಐಕ್ಯವಾದರು. ಅಕ್ಕಮಹಾದೇವಿ ಜನ್ಮಸ್ಥಳವಾದ ಉಡುತಡಿಯಲ್ಲಿ 75 ಅಡಿ ಎತ್ತರದ ಬೃಹತ್‌ ಗಾತ್ರದ ಅಕ್ಕಮಹಾದೇವಿ ಪುತ್ಥಳಿಯನ್ನು ಮತ್ತು ಒಂದು ಕಿ.ಮೀ. ಸುತ್ತಲೂ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ದೋಣಿವಿಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಇದರಲ್ಲಿ ನಾಡಿನ ಎಲ್ಲ ಶಿವಶರಣರ ಚರಿತ್ರೆಯನ್ನು ತಿಳಿಸುವ ಕಾಮಗಾರಿ ಬರದಿಂದ ಸಾಗಿದೆ’ ಎಂದು ಹೇಳಿದರು.

‘ತಾಳಗುಂದ, ಉಡುಗಣಿ ಹಾಗೂ ಹೊಸೂರು ಹೋಬಳಿಗಳ ಏತನೀರಾವರಿ ಯೋಜನೆಯ ಕೆಲಸ ಕೂಡ ಪೂರ್ಣಗೊಂಡಿದ್ದು, ಶೀಘ್ರ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಶಿಕಾರಿಪುರಕ್ಕೆ ರೈಲು ತರುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ನೀಡಿದ್ದು, ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಕೆಲಸ ಕೂಡ ಮುಗಿದಿದೆ’ ಎಂದರು.

ಯಡಿಯೂರಪ್ಪ ಮದುವೆಗೆ ಮೈತ್ರಾದೇವಿ ಅವರ ತಂದೆಯನ್ನು ಒಪ್ಪಿಸಿದ್ದೇ ಶ್ರೀಶೈಲ ಸ್ವಾಮೀಜಿ: ತೊಗರ್ಸಿ ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಶ್ರೀಶೈಲ ಪೀಠದ ಪೂರ್ವದ ಸ್ವಾಮೀಜಿ ಅವರಿಗೆ ಮೈತ್ರಾದೇವಿ ಅವರ ತಂದೆ ಯಡಿಯೂರಪ್ಪ ಅವರ ಜಾತಕವನ್ನು ತೋರಿಸಿದಾಗ, ‘ಧೈರ್ಯವಾಗಿ ಮದುವೆ ಮಾಡಿ, ಈತ ಮುಂದೆ ಬಹುದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ’ ಎಂದು ಭವಿಷ್ಯ ನುಡಿಯುವ ಮೂಲಕ ಮದುವೆಗೆ ಒಪ್ಪಿಸಿದ್ದರಂತೆ. ಅದೇ ರೀತಿ ಬಿ.ವೈ.ರಾಘವೇಂದ್ರ ಪುರಸಭೆಯ ಸದಸ್ಯರಾಗಿದ್ದಾಗ ಲೋಕಸಭೆಗೆ ಸ್ಪರ್ಧೆ ಮಾಡಿಸುವಂತೆ ಮೊದಲು ಯಡಿಯೂರಪ್ಪ ಅವರಿಗೆ ಸ್ವಾಮೀಜಿ ಅವರೆ ನಿರ್ದೇಶನ ನೀಡಿದ್ದರು. ಭವಿಷ್ಯದ ನುಡಿಗಳು ಅಕ್ಷರಶಃಹ ನಿಜವಾಗಿವೆ’ ಎಂದು ಸ್ಮರಿಸಿದರು.

ಅಭಿನವ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಎಸ್‌ಜೆಪಿ ಕಾರ್ಯದರ್ಶಿ ಡಾ.ಮುರುಘರಾಜ್, ಟ್ರಸ್ಟಿಗಳಾದ ಎಚ್.ಎಂ.ಗಂಗಮ್ಮ, ಸುನಂದಮ್ಮ ರುದ್ರಪ್ಪ, ಕೆಎಸ್‌ಡಿಎಲ್ ನಿರ್ದೇಶಕಿ ನಿವೇದಿತಾ ರಾಜು, ಟೌನ್ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ, ಪುರಸಭಾ ಮಾಜಿ ಅಧ್ಯಕ್ಷ ಎ.ಸಿ.ಚನ್ನವೀರಪ್ಪ, ಪ್ರಾಂಶುಪಾಲರಾದ ರುದ್ರಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು