ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಬಯಸಿ ಬರುವುದಕ್ಕಿಂತ ಅರಸಿ ಬರಬೇಕು: ಸಿರಿಗೆರೆ ಶ್ರೀ

ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ
Last Updated 11 ಮೇ 2022, 2:43 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪ್ರಶಸ್ತಿ ಅರ್ಜಿ ಸಲ್ಲಿಸಿ ತೆಗೆದುಕೊಳ್ಳುವಂತಹುದಲ್ಲ. ಅದು ನಮ್ಮ ಸಾಧನೆಯನ್ನು ಅರಸಿ ಬರಬೇಕು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಲಗಾನ್ ಮಂದಿರದಲ್ಲಿ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ವಾರ್ಷಿಕೋತ್ಸವ– 2022 ಸಮಾರಂಭದಲ್ಲಿ 21ನೇ ಸಾಲಿನ ಚೈತನ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಶಸ್ತಿಗಳಲ್ಲಿ ಎರಡು ವಿಧಗಳಿವೆ. ಒಂದು ಅರ್ಜಿ ಸಲ್ಲಿಸಿ ಪಡೆಯುವುದು. ಇನ್ನೊಂದು ಅರ್ಜಿ ಸಲ್ಲಿಸದೇ ಅವರ ಕಾರ್ಯಚಟುವಟಿಕೆ ಗಮನಿಸಿ ಜನರೇ ನೀಡಿ ಗೌರವಿಸುವುದು. ಪ್ರಶಸ್ತಿ ವಿಜೇತರು ಬೇರೆ, ಪ್ರಶಸ್ತಿಗೆ ಭಾಜನರಾಗುವುದು ಬೇರೆ. ಹೊಗಳಿಕೆ ತೆಗಳಿಕೆಗೆ ಮೂಲವಾಗುತ್ತದೆ ಎಂದು ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ ಎಂದರು.

ಧರ್ಮ ಎಂದರೆ ಹೊಡೆದಾಡುವುದಲ್ಲ. ಧರ್ಮ ಎಂಬುದು ಜನರ ಮಧ್ಯೆಯೇ ಬೆಳೆದದ್ದು. ಧರ್ಮ ಎಂದರೆ ಒಗ್ಗಟ್ಟಿನ ಮೂಲಮಂತ್ರ. ಯಾವ ಜಾತಿ ಮತ್ತು ಧರ್ಮ ಹಾಗೂ ಧರ್ಮ ಗುರುಗಳು ಹೊಡೆದಾಡುವುದನ್ನು ಕಲಿಸುವುದಿಲ್ಲ. ಶಾಂತಿಯೇ ಎಲ್ಲಾ ಧರ್ಮದ ಮೂಲಮಂತ್ರ ಎಂಬುದನ್ನು ಅರಿತು ಬಾಳಬೇಕು. ಸಮಾಜ ಸೇವೆಯನ್ನು ತನ್ನಿಂದಾದಷ್ಟು ಮಾಡಬೇಕು. ಸಮಾಜಸೇವೆ ಮಾಡುವ ಸಂಘ, ಸಂಸ್ಥೆಗಳಿಗೆ ನೆರವಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಕ್ಲಿಫರ್ಡ್ ರೋಷನ್ ಪಿಂಟೊ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸೇವೆಯ ಮೂಲಕ ಜನರ ಪ್ರೀತಿ ಗಳಿಸಿದ ಕ್ಷಣಗಳನ್ನು ಈ ಸಂಸ್ಥೆ ಅನುಭವಿಸುತ್ತಿದೆ. ಪ್ರತಿಯೊಬ್ಬರ ಕಷ್ಟ ಗುರುತಿಸಿ ಅವರಿಗೆ ಸಹಾಯಹಸ್ತ ಚಾಚಿದರೆ, ಅವರಿಗೆ ನೆರವು ನೀಡಿದರೆ ದೇವರ ಸೇವೆ ಮಾಡುತ್ತಿದ್ದೇವೆ ಎನ್ನುವ ಭಾವ ನಮ್ಮದು’ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಮಾತನಾಡಿ, ‘ಹೃದಯದಲ್ಲಿ ಮಾನವೀಯತೆ ಇರಬೇಕು. ಸಂಸ್ಥೆಯು ಮಹಿಳೆಯರ ಸಬಲೀಕರಣಕ್ಕೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಉದ್ಯೋಗ ಕಲ್ಪಿಸಲು ಮಹತ್ತರ ಪಾತ್ರ ವಹಿಸಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ‘ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಗ್ರಾಮೀಣ ಭಾಗದಲ್ಲಿ ಆರೋಗ್ಯ, ಶಿಕ್ಷಣ ಕಲೆ, ಸಂಸ್ಕೃತಿಯನ್ನು ತಿಳಿಸುವಲ್ಲಿ ಸಂಸ್ಥೆ ಮಾದರಿಯಾಗಿ ಕೆಲಸ ಮಾಡಿದೆ’ ಎಂದರು.

ಕಾರ್ಯಕ್ರಮದಲ್ಲಿ ಡಾ.ಎಸ್.ಜೆ. ಲಿಯೊ ಡಿಸೋಜ ಮತ್ತು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಚೈತನ್ಯ ಶ್ರೀ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಚರ್ಚ್ ಬಿಷಪ್ ರೆ.ಡಾ.ಫ್ರಾನ್ಸಿಸ್ ಸೆರಾವೋ, ರೆ.ಪೆಲಿಕ್ಸ್ ಜೋಸೆಫ್ ನ್ಹೊರೋನಾ, ಫಾ.ಮೆಲ್ವಿನ್ ಜೋಸೆಫ್ ಪಿಂಟೊ, ಪ್ರೆಸಿಲ್ಲಾ ಮಾರ್ಟಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT