ಶನಿವಾರ, ಜನವರಿ 22, 2022
16 °C
ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ

ಸ್ಮಾರ್ಟ್‌ಸಿಟಿ: ₹ 394 ಕೋಟಿ ಖರ್ಚು; ಕಳಪೆ ಕಾಮಗಾರಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ಕಳಪೆಯಾಹಿವೆ. ಸೂಕ್ತ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಸ್ಮಾರ್ಟ್‌ಸಿಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಸ್ಮಾರ್ಟ್‌ಸಿಟಿ ಕಾಮಗಾರಿಗಳು ಆರಂಭವಾದ ದಿನದಿಂದ ಇಲ್ಲಿಯವರೆಗೆ ಸುಮಾರು ₹ 394.92 ಕೋಟಿ ಖರ್ಚಾಗಿದೆ ಎಂದು ಯೋಜನೆಯ ವರದಿಯಲ್ಲಿ ಹೇಳಲಾಗಿದೆ. ಈ ಯೋಜನೆಗೆ ₹ 494 ಕೋಟಿ ಮಂಜೂರಾಗಿದೆ. ಈಗ ₹ 99.08 ಕೋಟಿ ಮಾತ್ರ ಉಳಿದುಕೊಂಡಿದೆ.
₹ 394.92 ಕೋಟಿ ಎಲ್ಲಿ ಖರ್ಚಾಗಿದೆ ಎಂಬುದೇ ಗೊತ್ತಿಲ್ಲ. ಹಣವೆಲ್ಲ ಖರ್ಚು ಮಾಡುತ್ತಿದ್ದಾರೆ. ಆದರೆ, ಕಾಮಗಾರಿಗಳೇ ಇನ್ನು
ಮುಗಿಯುತ್ತಿಲ್ಲ‘ ಎಂದು ಪ್ರತಿಭಟನಕಾರರು ದೂರಿದರು.

‘ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಅನುಷ್ಠಾನ ಮಾಡುತ್ತಿರುವ ಮಹಾನಗರ ಪಾಲಿಕೆ ಆಯುಕ್ತರು ತಮ್ಮ ಹೊಣೆಗಾರಿಕೆಯನ್ನೇ ಮರೆತುಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಮಿಷನ್ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ ನೇರ ಆರೋಪ ಮಾಡಿದರು.

‘ಯಾವೊಬ್ಬ ಅರ್ಹ ಗುತ್ತಿಗೆದಾರನೂ ಇಲ್ಲಿ ಇಲ್ಲ. ಅನುಭವಗಳೇ ಇಲ್ಲದ ಗುತ್ತಿಗೆದಾರರಿಗೆ ಸ್ಮಾರ್ಟ್‌ಸಿಟಿ ಕೆಲಸ ನೀಡಲಾಗಿದೆ. ಯಾರು ಗುತ್ತಿಗೆದಾರ, ಕೆಲಸ ಹೇಗೆ ನಡೆಯುತ್ತಿದೆ. ಕಳಪೆ ಇದ್ದರೂ ಯಾಕೆ ಕೇಳುತ್ತಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಟೆಂಡರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಯೋಗೀಶ್, ರೇಖಾ ರಂಗನಾಥ್, ಮೆಹರಿಕ್ ಶರೀಫ್‌, ಶಾಮೀರ್ ಖಾನ್, ವೈ.ಎಚ್.ನಾಗರಾಜ್, ರಾಮೇಗೌಡ, ಜಿ.ಡಿ. ಮಂಜುನಾಥ್, ಎಚ್.ಪಿ.ಗಿರೀಶ್, ಚಂದ್ರಭೂಪಾಲ್, ಸೌಗಂಧಿಕಾ ರಘುನಾಥ್, ಚಿನ್ನಪ್ಪ, ವಿಜಯಲಕ್ಷ್ಮಿ ಪಾಟೀಲ್, ಸುವರ್ಣಾ, ಚಂದ್ರಕಲಾ, ಕವಿತಾ, ಮೂರ್ತಿ, ಆಸೀಫ್, ಪಂಡಿತ್‌ ವಿ.ವಿಶ್ವನಾಥ್, ನಾಗರಾಜ್, ಆರೀಫ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು