ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿ ಅವಾಂತರ ಸರಿಪಡಿಸಿ: ಈಶ್ವರಪ್ಪಗೆ ಪ್ರಸನ್ನಕುಮಾರ್ ಸಲಹೆ

Last Updated 2 ಜೂನ್ 2022, 8:33 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸ್ಮಾರ್ಟ್ ಸಿಟಿ ಯೋಜನೆ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದೆ. ಇದರ ರೂವಾರಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರರೂ ಆದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪಮುಖ್ಯಮಂತ್ರಿ ಸ್ಥಾನದವರೆಗೆ ಅವಕಾಶ ಪಡೆದಿದ್ದ ಈಶ್ವರಪ್ಪ ನಗರಕ್ಕೆ ಕೊಟ್ಟಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಸ್ಮಾರ್ಟ್ ಸಿಟಿ ಯೋಜನೆ ಉತ್ತಮ ಆಶಯದೊಂದಿಗೆ ಜಾರಿಯಾಗಿತ್ತು. ಅದು ಜಾರಿಯಾಗುವಾಗ ನಾವು ನಗರದ ಎಲ್ಲ ವಾರ್ಡ್‌ಗಳಲ್ಲಿ ನಾಗರಿಕರ ಸಮಿತಿಗಳನ್ನು ರಚಿಸಿ ಅವರಿಂದ ಸಲಹೆಗಳನ್ನು ಪಡೆದು ಯೋಜನೆ ಬರಮಾಡಿಕೊಂಡಿದ್ದೆವು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪುತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗಳನ್ನು ಇನ್ನಾದರೂ ತಿದ್ದಿಕೊಳ್ಳಲಿ’ ಎಂದು ಹೇಳಿದರು.

‘ಕೆ.ಎಸ್.ಈಶ್ವರಪ್ಪ ಅವರು ಶಾಸಕರೂ ಆಗಲಿ, ಮುಖ್ಯಮಂತ್ರಿಯೂ ಆಗಲಿ. ಆದರೆ, ಇದುವರೆಗೂ ಅವರು ಕಾಲದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ಅಪಖ್ಯಾತಿಯನ್ನು ಕೊನೆಗೊಳಿಸಿಕೊಳ್ಳಲಿ. ಅವರು ಕೆಟ್ಟ ಹೆಸರು ಪಡೆದು ಮನೆಗೆ ಹೋಗುವುದು ನಮಗೆ ಇಷ್ಟವಿಲ್ಲ. ಈಗಲಾದರೂ ತಮ್ಮ ಜವಾಬ್ದಾರಿ ಅರಿತು ನಡೆಯಬೇಕು’ ಎಂದು ಸಲಹೆ ನೀಡಿದರು.

ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಇನ್ನೂ ಜಾರಿಯಾಗಿಲ್ಲ. 59 ವಲಯಗಳಿವೆ. ಯಾವ ವಲಯವೂ ಪರಿಪೂರ್ಣಗೊಂಡಿಲ್ಲ. ಅವ್ಯವಸ್ಥೆಯ ಆಗರವಾಗಿದೆ ಎಂದರು.

‘ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಈಶ್ವರಪ್ಪ ನಿಲ್ಲಿಸಬೇಕು. ನಾನು ಶಾಸಕನಾಗಿದ್ದಾಗ ಆಚಾರ್ಯತ್ರಯರ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ನಾಲ್ಕೂವರೆ ವರ್ಷವಾದರೂ ಅವು ಇನ್ನೂ ಉದ್ಘಾಟನೆಯಾಗಿಲ್ಲ. ಇದರ ಜೊತೆಗೆ ಆಂಜನೇಯ ಸ್ವಾಮಿ ದೇವಾಲಯದ ಪ್ರಸಾದ ಕೊಠಡಿ ಕೂಡ ಕೆಡವಿದ್ದಾರೆ. ಹಿಂದೂ ಧರ್ಮದ ಹೆಸರು ಹೇಳಿಕೊಳ್ಳುತ್ತಾರೆ ವಿನಹ ಯಾವ ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿಲ್ಲ. ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಲಿ. ಭ್ರಷ್ಟಾಚಾರಕ್ಕೆ ಕೊನೆಯಾಡಲಿ. ಆಮೇಲೆ ರಾಜಕಾರಣದ ಮಾತನಾಡಲಿ’ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಟಿ. ಹಾಲಪ್ಪ, ಲಕ್ಷ್ಮಣ್, ದೀಪಕ್ ಸಿಂಗ್, ಪ್ರಸನ್ನ, ಶಿವಾನಂದ್, ಮಂಜುನಾಥ್, ಸುವರ್ಣಾ, ಚಂದ್ರು, ರಘು, ಶಾಮಸುಂದರ್, ವೆಂಕಟೇಶ್, ಮಂಜುನಾಥ್ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT