ಮಂಗಳವಾರ, ಜೂನ್ 28, 2022
23 °C
ಡಿ.ಎಸ್. ನಾಗಭೂಷಣ್‌ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಶಿವಾನಂದ ಕುಗ್ವೆ ಅನಿಸಿಕೆ

ಸಾರ್ವಜನಿಕ ಪ್ರಜ್ಞೆ ಜಾಗೃತಗೊಳಿಸಿದ ಸಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ಲೋಹಿಯಾರ ಚಿಂತನೆಯ ಜೊತೆಗೆ ಪ್ರಖರ ಗಾಂಧಿವಾದಿಯಾಗಿದ್ದ ಡಿ.ಎಸ್. ನಾಗಭೂಷಣ್‌ ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ನಮ್ಮ ನಡುವಿನ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.

ಇಲ್ಲಿನ ಎಸ್.ಎನ್. ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಸ್ಪಂದನ ರಂಗ ತಂಡ ಅಗಲಿದ ಸಾಹಿತಿ, ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ್‌ ಅವರಿಗೆ ಶನಿವಾರ ಏರ್ಪಡಿಸಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಡಿ.ಎಸ್.ಎನ್. ನುಡಿದಂತೆ ನಡೆದವರು. ಈ ಮೂಲಕ ನೈತಿಕ ಪ್ರಜ್ಞೆಯ ಎಚ್ಚರವನ್ನು ಎಲ್ಲರಲ್ಲಿ ಜಾಗೃತಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಸಮಾಜಮುಖಿ ಚಿಂತನೆ ಹೆಚ್ಚು ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಎನ್.ಎಂ. ಕುಲಕರ್ಣಿ, ‘ತಮ್ಮ ಕ್ರಿಯಾಶೀಲತೆಯ ಮೂಲಕ ಸಮಾಜದ ಬಿಕ್ಕಟ್ಟುಗಳಿಗೆ ಮುಖಾಮುಖಿ ಆಗುತ್ತಿದ್ದ ನಾಗಭೂಷಣ್‌ ಅವರ ಮಾದರಿ ಅತ್ಯಂತ ವಿಶಿಷ್ಟವಾದುದು. ‘ಗಾಂಧಿ ಕಥನ’ ಕೃತಿಯ ಮೂಲಕ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ವಿಶೇಷವಾದುದು’ ಎಂದು ಹೇಳಿದರು.

ಪತ್ರಕರ್ತ ಕೆ.ಎನ್. ವೆಂಕಟಗಿರಿ, ‘ಜಾಗತೀಕರಣಕ್ಕೆ ಮುಖಾಮುಖಿಯಾಗುವ ಹೊಸ ಪರ್ಯಾಯ ಮಾದರಿಗಳನ್ನು ನಮ್ಮೆದುರು ತೆರೆದಿಡುವ ಬಗ್ಗೆ ನಾಗಭೂಷಣ್‌ ಅವರು ಗಂಭೀರವಾಗಿ ಚಿಂತಿಸಿದ್ದರು. ಹೊಸ ತಲೆಮಾರನ್ನು ಆರೋಗ್ಯಪೂರ್ಣ ಸಂವಾದಕ್ಕೆ ಒಳಪಡಿಸುವ ಬದ್ಧತೆ ಅವರಲ್ಲಿ ನಿಚ್ಚಳವಾಗಿತ್ತು’ ಎಂದರು.

ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ, ‘ವರ್ತಮಾನದ ಬಿಕ್ಕಟ್ಟುಗಳಿಗೆ ಲೋಹಿಯಾ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ಚಿಂತನೆಗಳನ್ನು ಒಗ್ಗೂಡಿಸಿ ತಮ್ಮದೇ ಆದ ಪರಿಭಾಷೆಯಲ್ಲಿ ಪ್ರತಿಕ್ರಿಯಿಸುವ ಮೂಲಕ ವೈಚಾರಿಕ ವಲಯಕ್ಕೆ ಹೊಸ ಭರವಸೆ ಮೂಡಿಸಿದ್ದರು’ ಎಂದು ಹೇಳಿದರು. ಪತ್ರಕರ್ತ ಶೃಂಗೇಶ್, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ನಗರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್, ರಂಗ ನಟಿ ಎಂ.ವಿ. ಪ್ರತಿಭಾ ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ಕಬಸೆ ಅಶೋಕ ಮೂರ್ತಿ, ಮಹಮದ್‌ ಖಾಸಿಂ, ಯೇಸು ಪ್ರಕಾಶ್, ಎಸ್.ಎಂ. ಗಣಪತಿ, ಶೈಲೇಂದ್ರ ಬಂದಗದ್ದೆ, ಎನ್.ಡಿ. ವಸಂತಕುಮಾರ್, ವಿ. ಶಂಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.