ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಪಾಲು– ಸಮಬಾಳು ಆಶಯ ಮಣ್ಣುಪಾಲು: ಎಸ್.ಆರ್. ಹಿರೇಮಠ್

ಮೂರು ಕರಾಳ ಕೃಷಿ ಕಾಯ್ದೆ ವಿರೋಧಿಸಿ ಕಾಗೋಡಿನಿಂದ ಜನ ಜಾಗೃತಿ ಜಾಥಾದಲ್ಲಿ
Last Updated 10 ಮಾರ್ಚ್ 2022, 3:32 IST
ಅಕ್ಷರ ಗಾತ್ರ

ಸಾಗರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಯಿಂದಾಗಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯ ಮಣ್ಣು ಪಾಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಜನಾಂದೋಲನಗಳ ಮಹಾಮೈತ್ರಿ ಕಾಗೋಡಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಜನ ಜಾಗೃತಿ ಜಾಥಾಕ್ಕೆ ಕಾಗೋಡು ಗ್ರಾಮದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕರ್ನಾಟಕ ಭೂ ಸುಧಾರಣಾ ಕಾಯ್ದೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಾಗೂ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಜನ ವಿರೋಧಿ ಧೋರಣೆ ತೋರಿದೆ. ಈ ನೆಲದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮೃದ್ಧಿಯ ನಾಶಕ್ಕೆ ದಾರಿಯಾಗುವ ಕಾಯ್ದೆಗಳನ್ನು ತರುವ ಮೂಲಕ ಸರ್ಕಾರ ಶ್ರಮಿಕರ ಬದುಕಿಗೆ ಕೊಳ್ಳಿ ಇಡುತ್ತಿದೆ’ ಎಂದು ಅವರು ಕಿಡಿಕಾರಿದರು.

‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಯಾರು ಬೇಕಾದರೂ ಎಷ್ಟಾದರೂ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಕೊಟ್ಟಿರುವುದು ನಾಡಿಗೆ ದ್ರೋಹ ಬಗೆಯುವ ಕೆಲಸವಾಗಿದೆ. ಇದರಿಂದಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರು ಭೂಹೀನರಾಗಲಿದ್ದು ಭವಿಷ್ಯದಲ್ಲಿ ಆಹಾರ ಭದ್ರತೆಗೆ ಧಕ್ಕೆ ಉಂಟಾಗುವುದು ಖಚಿತ’ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರದ ಕಾಯ್ದೆ ತಿದ್ದುಪಡಿಯ ಧೋರಣೆ ನೋಡಿದರೆ ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸುವ ಹುನ್ನಾರ ಇರುವುದು ಎದ್ದು ಕಾಣುತ್ತಿದೆ. ಈ ಮೂಲಕ ರೈತರಿಗೆ ಸಹಸ್ರಾರು ಕೋಟಿ ರೂಪಾಯಿ ವಂಚನೆ ಮಾಡಲು ಸರ್ಕಾರ ಮುಂದಾಗಿದೆ. ಮಾರ್ಚ್ 15ಕ್ಕೆ ಜಾಥಾ ಮುಗಿಯಲಿದ್ದು ಅಂದಿನಿಂದ ಸರ್ಕಾರವನ್ನು ಎಚ್ಚರಿಸಲು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.

ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಸಿಗಂದೂರು, ‘ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮೂಲಕ ತಂದಿರುವ ಮೂರು ಕಾಯ್ದೆಗಳು ಕೃಷಿಕರು ಹಾಗೂ ಕೃಷಿ ವಲಯಕ್ಕೆ ಮಾರಕವಾಗಿದೆ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ರೈತರ ಒತ್ತಡಕ್ಕೆ ಮಣಿದು ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ಅವುಗಳನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ರೈತರ ಹಿತದ ಹೆಸರಿನಲ್ಲಿ ಕಾಯ್ದೆ ರೂಪಿಸಿ ರೈತರನ್ನೇ ಒಡೆದು ಆಳುವ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ರೈತ ಸಮುದಾಯದವರು ಮಾತ್ರವಲ್ಲದೇ ಕೃಷಿ ಉತ್ಪನ್ನಗಳನ್ನು ಬಳಸುವ ಪ್ರತಿಯೊಬ್ಬರೂ ಇಂತಹ ಧೋರಣೆ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ‘ರೈತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ರೀತಿಯಲ್ಲಿ ರಾಜ್ಯ ಸರ್ಕಾರ ಕಾಯ್ದೆಗಳನ್ನು ರೂಪಿಸುತ್ತಿರುವುದು ಕೃಷಿ ವಲಯಕ್ಕೆ ಕಂಟಕವಾಗಲಿದೆ. ಕೃಷಿ ಕ್ಷೇತ್ರವನ್ನು ಉದ್ಯಮಿಗಳಿಗೆ ಒತ್ತೆ ಇಡುವ ಹುನ್ನಾರವನ್ನು ಸರ್ಕಾರ ನಡೆಸಿದೆ’ ಎಂದು ಟೀಕಿಸಿದರು.

ಕಾಗೋಡು ಸತ್ಯಾಗ್ರಹದ ರೂವಾರಿ ಎಚ್. ಗಣಪತಿಯಪ್ಪ ಅವರ ಮನೆ ಇರುವ ವಡ್ನಾಲ ಗ್ರಾಮಕ್ಕೆ ಜಾಥಾದೊಂದಿಗೆ ತೆರಳಿದ ಪ್ರತಿಭಟನಕಾರರು ಗಣಪತಿಯಪ್ಪ ಅವರ ಸಮಾಧಿಗೆ ಗೌರವ ಸಲ್ಲಿಸಿದರು. ನಂತರ ನಗರ ಪೊಲೀಸ್ ಠಾಣೆ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ಜನಾಂದೋಲನಗಳ ಮಹಾಮೈತ್ರಿ ಒಕ್ಕೂಟದ ಪ್ರಮುಖರಾದ ಎನ್.ಡಿ. ವಸಂತಕುಮಾರ್, ರಾಜಪ್ಪ ಮಾಸ್ತರ್, ವಾಮದೇವ ಗೌಡ, ಭೀಮ್ ಆರ್ಮಿಯ ಶೋಭಾ, ರೈತ ಸಂಘದ ಕೆ.ಬಿ. ಸೇನಾಪತಿ ಗೌಡ, ಅರುಣಕುಮಾರ್ ಕಸವೆ, ಆಮ್ ಆದ್ಮಿ ಪಕ್ಷದ ಮನೋಹರ ಗೌಡ, ಅಮೃತ್ ರಾಸ್, ನವಲೇಶ್, ಸಬಾಸ್ಟಿನ್ ಗೋಮ್ಸ್, ಪ್ರಮುಖರಾದ ರಮೇಶ್ ಐಗಿನಬೈಲು, ಕನ್ನಪ್ಪ ಕಾಗೋಡು, ಗಾಮಪ್ಪ ಸೂರನಗದ್ದೆ, ಜಯಂತ್ ಯಲಕುಂದ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT