ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕುಸ್ಥಾಪನೆ ಆಗಿರುವ ಎಲ್ಲ ಕಾಮಗಾರಿ ಆರಂಭಿಸಿ: ಹಾಲಪ್ಪ ಹರತಾಳು

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹಾಲಪ್ಪ ಹರತಾಳು ಸೂಚನೆ
Last Updated 1 ಫೆಬ್ರುವರಿ 2023, 5:58 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನಲ್ಲಿ ಶಂಕುಸ್ಥಾಪನೆ ಆಗಿರುವ ಎಲ್ಲ ಕಾಮಗಾರಿಗಳ ಕೆಲಸಗಳನ್ನು ಕೂಡಲೇ ಆರಂಭಿಸುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸೂಚನೆ ನೀಡಿದ್ದಾರೆ.

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿರ್ಮಿತಿ ಕೇಂದ್ರ, ಕರ್ನಾಟಕ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ಕಾಮಗಾರಿಗಳನ್ನು ನಿರ್ವಹಿಸಬೇಕಾದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಯಾವುದೇ ನೆಪ ಹೇಳದೇ ಕೂಡಲೇ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ನಿರ್ದೇಶಿಸಿದರು.

‘ತಾಲ್ಲೂಕಿನ ಚಿಕ್ಕಮತ್ತೂರು ಗ್ರಾಮದಲ್ಲಿ ಏಳು ವಿದ್ಯುತ್ ಕಂಬಗಳನ್ನು ಕಿಡಿಗೇಡಿಗಳು ನಾಶಪಡಿಸಿರುವ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಮೆಸ್ಕಾಂ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದರು.

ಕಂಬಗಳನ್ನು ನಾಶಪಡಿಸಿರುವ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲ ಎಂಬ ಸಂಗತಿಯನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ‘ತಪ್ಪು ಮಾಡಿದವರು ಯಾರು ಎಂಬ ವಿಷಯ ಗೊತ್ತಿದ್ದರೂ ಅದನ್ನು ಪೊಲೀಸರಿಗೆ ಹೇಳಲು ಮೆಸ್ಕಾಂ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ’ ಎಂದು ಕೆಡಿಪಿ ಸದಸ್ಯರಾದ ದೇವೇಂದ್ರಪ್ಪ, ಸುವರ್ಣ ಟೀಕಪ್ಪ ದೂರಿದರು.

‘ರೈತರು ವಿದ್ಯುತ್ ಪರಿವರ್ತಕಕ್ಕಾಗಿ ಅರ್ಜಿ ಸಲ್ಲಿಸಿ ಅದನ್ನು ಪಡೆಯಲು ದೀರ್ಘಕಾಲ ಕಾದರೂ ದೊರಕುತ್ತಿಲ್ಲ, ರಿಪೇರಿ ಮಾಡಿದ ಪರಿವರ್ತಕಗಳು ಕೆಲವೇ ಸಮಯದ ನಂತರ ಮತ್ತೆ ರಿಪೇರಿಗೆ ಬರುತ್ತಿವೆ. ಗ್ರಾಮೀಣ ಭಾಗದಲ್ಲಿ ಹೇಳದೇ ಕೇಳದೇ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ’ ಎಂದು ದೇವೇಂದ್ರಪ್ಪ ತಮ್ಮ ಅಹವಾಲು ಮಂಡಿಸಿದರು.

ಜನವಸತಿ ಇರುವ, ಈಗಾಗಲೆ ಕೃಷಿ ಮಾಡುತ್ತಿರುವ ಪ್ರದೇಶವನ್ನು ಅಭಯಾರಣ್ಯ ಪಟ್ಟಿಯಿಂದ ಹೊರಗಿಡಬೇಕು ಎಂಬ ಸರ್ಕಾರಿ ಸುತ್ತೋಲೆ ಇದ್ದರೂ ಅದನ್ನು ಕಡೆಗಣಿಸಿ ಜನವಸತಿ ಇರುವ ಪ್ರದೇಶವನ್ನು ಅರಣ್ಯ ಪಟ್ಟಿಗೆ ಸೇರಿಸುತ್ತಿರುವ ಸಮಸ್ಯೆಯ ಕುರಿತು ಕೆಡಿಪಿ ಸದಸ್ಯ ಗೌತಮ್ ಕೆ.ಎಸ್. ಸಭೆಯ ಗಮನ ಸೆಳೆದರು.

‘ಗ್ರಾಮ ಲೆಕ್ಕಿಗರು ಯಾವಾಗಲೂ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಕೇಳಿದರೆ ಎ.ಸಿ., ತಹಶೀಲ್ದಾರರು ಮೀಟಿಂಗ್ ಕರೆದಿದ್ದಾರೆ ಎಂದು ಸಬೂಬು ಹೇಳಿ ಸದಾ ಸಾಗರದಲ್ಲಿರುತ್ತಾರೆ. ಈ ಬಗ್ಗೆ ಗಮನ ಹರಿಸಬೇಕಿದೆ’ ಎಂದು ಕೆಡಿಪಿ ಸದಸ್ಯ ಮಂಜಯ್ಯ ಜೈನ್ ಹೇಳಿದರು.

ಅಬಕಾರಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಲಪ್ಪ ಹರತಾಳು, ‘ನಾನು ಶಾಸಕನಾದ ನಂತರ ತಾಲ್ಲೂಕಿನಲ್ಲಿ ಹೊಸದಾಗಿ ಯಾವುದೇ ಎಂಎಸ್‌ಐಎಲ್ ಅಥವಾ ಇತರ ಮದ್ಯ ಮಾರಾಟ ಮಳಿಗೆಗೆ ಪರವಾನಗಿ ನೀಡಿಲ್ಲ. ಆದಾಗ್ಯೂ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಹೀಗಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ಸತ್ಯಾಂಶದ ಕುರಿತು ಪ್ರಕಟಣೆ ನೀಡಬೇಕು’ ಎಂದು ಸೂಚಿಸಿದರು.

ವಯೋ ನಿವೃತ್ತಿ ಹೊಂದಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ , ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಯೋಗೀಶ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT