ಕೈ ತಪ್ಪುವ ಹಾದಿಯಲ್ಲಿ ಮೌಲಾನಾ ಆಜಾದ್ ಶಾಲೆ

ಸಾಗರ: ಇಲ್ಲಿಗೆ ಮಂಜೂರಾಗಿರುವ ಮೌಲಾನಾ ಆಜಾದ್ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯು ಆಡಳಿತಾತ್ಮಕ ಗೊಂದಲ, ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಕೈ ತಪ್ಪುವ ಹಾದಿಯಲ್ಲಿದೆ. ಇದರಿಂದಾಗಿ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳು ಉಚಿತ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ಎದುರಾಗಿದೆ.
2018ನೇ ಸಾಲಿನಲ್ಲಿ ರಾಜ್ಯ ಸರ್ಕಾರ 200 ಆಂಗ್ಲ ಮಾಧ್ಯಮ ಶಾಲೆಗಳನ್ನು ಮೌಲಾನಾ ಆಜಾದ್ ಹೆಸರಿನಲ್ಲಿ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆಂದು ಮಂಜೂರು ಮಾಡಿತ್ತು. ಹೀಗೆ ಮಂಜೂರಾದ ಶಾಲೆಗಳ ಪೈಕಿ ಇಲ್ಲಿನ ಶಾಲೆ ಕೂಡ ಒಂದಾಗಿತ್ತು.
ಸರ್ಕಾರದ ನಿಯಮಾವಳಿ ಪ್ರಕಾರ ಮೌಲಾನಾ ಆಜಾದ್ ಶಾಲೆಯ ಪ್ರತಿ ತರಗತಿಯಲ್ಲಿ 60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಶೇ 50ರಷ್ಟು ಬಾಲಕಿಯರು ಇರಬೇಕು. ಮುಸ್ಲಿಂ, ಕ್ರಿಶ್ಚಿಯನ್, ಜೈನ ಹೀಗೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶೇ 75ರಷ್ಟು ಸೀಟು ಮೀಸಲಿರಿಸಲಾಗಿದೆ. ಉಳಿದ ಶೇ 25ರಷ್ಟು ಸೀಟುಗಳನ್ನು ಪರಿಶಿಷ್ಟ ಸಮುದಾಯದ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲಿಡಲಾಗಿದೆ.
ಎಂ.ಎಸ್ಸಿ ಪದವಿ ಪಡೆದಿರುವ ಶಿಕ್ಷಕರನ್ನು ಈ ಶಾಲೆಗಳಿಗೆ ನೇಮಕ ಮಾಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
2018ನೇ ಸಾಲಿನಲ್ಲಿ ಮೌಲಾನಾ ಆಜಾದ್ ಶಾಲೆ ಆರಂಭವಾದಾಗ ಇಲ್ಲಿನ ಕೆಳದಿ ರಸ್ತೆಯ ಉರ್ದು ಶಾಲೆಯಲ್ಲಿ ಖಾಲಿ ಇದ್ದ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕ್ರಮೇಣ ಆ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗ ಅಲ್ಲಿನ ತರಗತಿಗಳನ್ನು ಸೊರಬ ರಸ್ತೆಯ ಸಿದ್ದೇಶ್ವರ ಸರ್ಕಾರಿ ಶಾಲೆಗೆ ವರ್ಗಾಯಿಸಲಾಯಿತು.
ಆರಂಭದಲ್ಲಿ ಸಿದ್ದೇಶ್ವರ ಶಾಲೆಯ ಮೂರು ಕೊಠಡಿಗಳಲ್ಲಿ ಮೌಲಾನಾ ಆಜಾದ್ ಶಾಲೆಯ ತರಗತಿಗಳು ನಡೆಯುತ್ತಿದ್ದವು. ನಂತರ ಕೇವಲ ಒಂದು ಕೊಠಡಿಗೆ ಈ ಶಾಲೆಯ ತರಗತಿಗಳನ್ನು ಸೀಮಿತಗೊಳಿಸಲಾಯಿತು. ಇದೀಗ ಭೀಮನಕೋಣೆ ರಸ್ತೆಯ ಉರ್ದು ಶಾಲೆಗೆ ಈ ಶಾಲೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಸೂಚನೆ
ನೀಡಿದ್ದಾರೆ.
ಮೌಲಾನಾ ಆಜಾದ್ ಶಾಲೆಯಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಕೆಳದಿ ರಸ್ತೆ, ಸುಭಾಷ್ ನಗರ ಬಡಾವಣೆ ಮಕ್ಕಳು ಓದುತ್ತಿದ್ದಾರೆ. ಭೀಮನಕೋಣೆ ರಸ್ತೆಯ ಉರ್ದು ಶಾಲೆ ಕಟ್ಟಡಕ್ಕೆ ಮೌಲಾನಾ ಆಜಾದ್ ಶಾಲೆಯನ್ನು ಸ್ಥಳಾಂತರಿಸಿದರೆ ಈ ಭಾಗದ ಮಕ್ಕಳನ್ನು ಅಲ್ಲಿಗೆ ಕಳುಹಿಸುವುದು ಪೋಷಕರಿಗೆ ಕಷ್ಟಸಾಧ್ಯವಾಗುತ್ತದೆ.
ಸ್ವಂತ ಕಟ್ಟಡವಿಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲೂ ಶಾಲೆಯನ್ನು ನಡೆಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಇದಕ್ಕೆ ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ನಡುವೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 50 ಲಕ್ಷ ಮಂಜೂರು ಮಾಡಿದ್ದರೂ ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೆಳದಿ ರಸ್ತೆಯ ಉರ್ದು ಶಾಲೆ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಿ ಅಲ್ಲಿ ಮೌಲಾನಾ ಆಜಾದ್ ಶಾಲೆ ಆರಂಭಿಸಿದರೆ ಪಕ್ಕದಲ್ಲಿರುವ ಈದ್ಗಾ ಮೈದಾನಕ್ಕೆ ಹಾಗೂ ಕೆಲವು ಖಾಸಗಿ ಸ್ವತ್ತುಗಳಿಗೆ ತೊಂದರೆಯಾಗುತ್ತದೆ ಎಂದು ಸ್ಥಳೀಯರು ಈಗಾಗಲೇ ಉಪವಿಭಾಗಾಧಿಕಾರಿ ಕಚೇರಿಗೆ ತಮ್ಮ ಅಹವಾಲು ಸಲ್ಲಿಸಿದ್ದಾರೆ.
ಕೆಳದಿ ರಸ್ತೆಯ ಉರ್ದು ಶಾಲೆಯಲ್ಲಿ ಈಗಿರುವ ಕಟ್ಟಡದ ಸ್ಥಳದಲ್ಲೇ ನೂತನ ಕಟ್ಟಡ ನಿರ್ಮಾಣವಾಗುತ್ತದೆ. ಅಷ್ಟಕ್ಕೂ ಮೌಲಾನಾ ಆಜಾದ್ ಶಾಲೆ ವಸತಿ ಶಾಲೆಯಲ್ಲ. ಇಲ್ಲಿ ನೂತನ ಕಟ್ಟಡ ನಿರ್ಮಿಸುವುದರಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ತೊಂದರೆಯಾಗುವುದಿಲ್ಲ ಎಂಬುದು ಮೌಲಾನಾ ಆಜಾದ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರ ವಾದ.ಶಿಕ್ಷಣ ಇಲಾಖೆಯೇ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದರೆ, ಇದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಿಷಯ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಆಡಳಿತಾತ್ಮಕ ಗೊಂದಲದಿಂದಾಗಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಮಕ್ಕಳಿಗೆ ಮಂಜೂರಾದ ಶಾಲೆ ಬೇರೆ ಊರಿಗೆ ಸ್ಥಳಾಂತರಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕೋಟ್...
ಮೌಲಾನಾ ಆಜಾದ್ ಶಾಲೆ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಕೆಳದಿ ರಸ್ತೆಯಲ್ಲಿರುವ ಉರ್ದು ಶಾಲೆಯ ಕಟ್ಟಡದ ಸ್ಥಳದಲ್ಲೇ ಶಾಲೆಯ ನೂತನ ಕಟ್ಟಡ ನಿರ್ಮಾಣವಾದರೆ ಯಾರಿಗೂ ತೊಂದರೆಯಿಲ್ಲ.
ಐ.ಎನ್. ಸುರೇಶ್ ಬಾಬು, ಅಧ್ಯಕ್ಷರು, ನಗರ ಕಾಂಗ್ರೆಸ್ ಘಟಕ
ಮೌಲಾನಾ ಆಜಾದ್ ಶಾಲೆ ವಿಷಯದಲ್ಲಿ ಶಿಕ್ಷಣ ಇಲಾಖೆಯ ಮೇಲೆ ಅನಗತ್ಯವಾಗಿ ಕೆಲವರು ಗೂಬೆ ಕೂರಿಸುತ್ತಿದ್ದಾರೆ. ಈ ಶಾಲೆಯ ಕಟ್ಟಡದ ನಿರ್ಮಾಣದ ಜವಾಬ್ದಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ್ದೇ ಹೊರತು ಶಿಕ್ಷಣ ಇಲಾಖೆಗಲ್ಲ.
ಬಿಂಬ ಕೆ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ, ಸಾಗರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.