ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ಕುಲಾಂತರಿ ಬೆಳೆಗಳನ್ನು ನಿರ್ಮೂಲನೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕುಲಾಂತರಿ ಬೆಳೆಗಳ ಕುರಿತಂತೆ ರಾಷ್ಟ್ರೀಯ ನೀತಿ ರೂಪಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದನ್ನು ರೂಪಿಸುವ ಮುನ್ನ ರೈತರ ಮತ್ತು ಜನರೊಂದಿಗೆ ಸಮಾಲೋಚನೆ ಕೂಡ ಮಾಡಬೇಕು ಎಂದು ನ್ಯಾಯಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಆದರೆ ಕೇಂದ್ರ ಸರ್ಕಾರ ಇದ್ಯಾವುದನ್ನು ಸಹ ಮಾಡುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ರೈತರ ಕೃಷಿ ಉತ್ಪಾದನಾ ಪರಿಸ್ಥಿತಿ ಮತ್ತು ಅವರ ಸಾಮಾಜಿಕ ಹಾಗೂ ಆರ್ಥಿಕ ಸನ್ನಿವೇಶಗಳ ವೈವಿದ್ಯಮಯವಾಗಿವೆ. ಕೃಷಿ ಪದ್ಧತಿಯಲ್ಲಿ ಕಾರ್ಪೋರೇಟ್ ನಿಯಂತ್ರಣ ತಪ್ಪಿಸಬೇಕು. ಅವರಿಂದಾಗಿ ಸಾಕಷ್ಟು ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಕುಲಾಂತರಿ ಬೆಳೆಗಳಿಂದ ಕೃಷಿ ಉತ್ಪಾದಕರು ಮತ್ತು ಗ್ರಾಹಕರಿಗೆ ಸಾಕಷ್ಟು ತೊಂದರೆ ಆಗುತ್ತದೆ. ಕೃಷಿಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ. ಆದರೆ ಸರ್ಕಾರದ ನೀತಿಗಳಿಂದಾಗಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಉಳಿಯುವುದು ಅನುಮಾನವಿದೆ ಎಂದು ಆತಂಕ ವ್ಯಕ್ತಪಡಿಸಿದರು.