ಶನಿವಾರ, ಮೇ 28, 2022
26 °C

ಕಾರ್ಖಾನೆಗಳ ನಗರ ಭದ್ರಾವತಿಯಲ್ಲಿ ಖಾಸಗೀಕರಣದ ಸದ್ದು

ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಬಾಗಿಲು ಮುಚ್ಚಿರುವ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಈಗ ನಿಧಾನವಾಗಿ ಖಾಸಗೀಕರಣದತ್ತ ಹೆಜ್ಜೆ ಇಡುತ್ತಿದೆ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಬಂಡವಾಳ ಹಿಂತೆಗೆತ ಪಟ್ಟಿಗೆ ಸೇರುವ ಮೂಲಕ ಜಾಗತಿಕ ಟೆಂಡರ್ ಪ್ರಕ್ರಿಯೆಯ ಹಾದಿಯಲ್ಲಿದೆ.

ಸರ್.ಎಂ. ವಿಶ್ವೇಶ್ವರಯ್ಯ ಅವರ ಬಹು ಆಸಕ್ತಿಯ ಕಾರ್ಖಾನೆಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಈ ಎರಡೂ ಕಾರ್ಖಾನೆಗಳು ಈಗ ಇತಿಹಾಸದ ಗರ್ಭ ಸೇರುವ ಮೂಲಕ ಖಾಸಗೀಕರಣದತ್ತ ಹೊರಳಿರುವುದು ಜಾಗತಿಕ ಅರ್ಥವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಎಂಪಿಎಂ ಕಾರ್ಖಾನೆ: ಉತ್ಪಾದನೆ ಸ್ಥಗಿತಗೊಂಡು ಆರು ವರ್ಷ ಪೂರೈಸಿರುವ ಮೈಸೂರು ಕಾಗದ ಕಾರ್ಖಾನೆಯನ್ನು ಅಧಿಕೃತವಾಗಿ ಅ.7ರಂದು ಮುಚ್ಚಲು ಆದೇಶಿಸಲಾಗಿದೆ.

ಸದ್ಯ ಇಲ್ಲಿರುವ 202 ನೌಕರರ ಭವಿಷ್ಯ ಕಾಪಾಡಲು ನ.9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದು ಅಗತ್ಯ ಕ್ರಮ ಜರುಗಿಸಲು ಸರ್ಕಾರದ ಕಡೆಯಿಂದ ಸೂಚನೆ ನೀಡಲಾಗಿದೆ. ಇದರಿಂದ ಖಾಸಗೀಕರಣ ಪ್ರಕ್ರಿಯೆಗೆ ಇದ್ದ ಬಹುದೊಡ್ಡ ತೊಡಕು ನಿವಾರಣೆಯಾಗಿದೆ.

ಆರು ವರ್ಷಗಳ ಹಿಂದೆ ಉತ್ಪಾದನೆ ಸ್ಥಗಿತವಾದ ಕೂಡಲೇ ಸ್ವಯಂ ನಿವೃತ್ತಿ ಯೋಜನೆ ಮೂಲಕ ನೌಕರರನ್ನು ಹೊರಕಳುಹಿಸುವ ಕೆಲಸವನ್ನು ಅಂದಿನ ಸರ್ಕಾರ ಹಾಗೂ ಆಡಳಿತ ಮಂಡಳಿ ಮಾಡಿತ್ತು. ಆದರೆ, ಈ ಯೋಜನೆ ನಿರಾಕರಿಸಿ ಬಾಕಿ ಉಳಿದಿದ್ದ 202 ಮಂದಿ ಕಾರ್ಮಿಕರು ತಮ್ಮ ಹಕ್ಕಿನ ರಕ್ಷಣೆಗಾಗಿ ನ್ಯಾಯಾಲಯ ಮೊರೆಹೋಗಿದ್ದರು. ಇದನ್ನು ಮನಗಂಡಿದ್ದ ಆಡಳಿತ ಮಂಡಳಿ ಹಾಗೂ ಸರ್ಕಾರ ಅವರನ್ನು ರಾಜ್ಯದ ಇನ್ನಿತರ ನಿಗಮ ಮಂಡಳಿಗಳಿಗೆ ಎರವಲು ಸೇವೆಗೆ ಕಳುಹಿಸುವ ಮೂಲಕ ನೌಕರರ ಭಾರ ತಗ್ಗಿಸಿಕೊಳ್ಳುವ ಕೆಲಸ ಮಾಡಿತ್ತು.

ಕಾರ್ಖಾನೆ ಮುಚ್ಚುವ ಆದೇಶ ಹೊರಬಿದ್ದ ಕೂಡಲೇ ಅವರನ್ನು ರಕ್ಷಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ನಡೆಸಿದ ಪ್ರಯತ್ನ ಫಲ ನೀಡಿದ್ದರಿಂದ ಸರ್ಕಾರವು ಕಾರ್ಮಿಕರ ಭದ್ರತೆಗೆ ಸೂಕ್ತ ನಿರ್ಧಾರ ತೆಗೆದುಕೊಂಡಿದೆ.

‘ನಮಗೆ ರಕ್ಷಣೆಯ ಭರವಸೆ ಸಿಕ್ಕಿದೆ. ಇದು ಫಲಪ್ರದವಾದರೆ ಕೆಲಸದ ಭದ್ರತೆ ಖಾತ್ರಿಯಾಗುತ್ತದೆ. ಸರ್ಕಾರ ಕಾರ್ಖಾನೆಯನ್ನು ಮುಂದೆ ಯಾವುದಾದರೂ ರೂಪದಲ್ಲಿ ಆರಂಭಿಸುವ ಮೂಲಕ ಯುವಕರಿಗೆ ಉದ್ಯೋಗ ಕೊಡಬಹುದೆಂಬ ನಿರೀಕ್ಷೆ ಹೊಂದಿದ್ದೇವೆ’ ಎನ್ನುತ್ತಾರೆ ಹಾಲಿ ಕಾರ್ಮಿಕ ಮುಖಂಡ ಎಸ್. ಚಂದ್ರಶೇಖರ್.

ಕಾರ್ಖಾನೆ ಆರಂಭಿಸುವ ಸಂಬಂಧ ಈಗಾಗಲೇ ಹಲವು ರೀತಿಯ ಪ್ರಯತ್ನ ಸರ್ಕಾರದ ಕಡೆಯಿಂದ ನಡೆದಿದೆ. ಇದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಎಂಪಿಎಂ ಅರಣ್ಯ ಪ್ರದೇಶವನ್ನು ಸರ್ಕಾರ ಕಾರ್ಖಾನೆಗೆ ಲೀಸ್ ಕೊಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ ಎನ್ನುತ್ತಾರೆ ಅಧಿಕಾರಿಗಳು.

‘ಈ ಹಿಂದೆಯೇ ‘ಝಿರೋ ಮ್ಯಾನ್ ಪವರ್’ ಮಾಡುವ ಮೂಲಕ ಕಾರ್ಖಾನೆಯನ್ನು ಖಾಸಗೀಕರಣ, ಸಹಭಾಗಿತ್ವ ಇಲ್ಲವೇ ಬೇರಾವುದಾದರೂ ರೂಪದಲ್ಲಿ ಆರಂಭಿಸಬೇಕು ಎಂಬ ಚಿಂತನೆ ನಡೆದಿದೆ. ಕೂಡಲೇ ಎಂಪಿಎಂ ಆರಂಭಿಸಬೇಕು ಎಂಬುದು ತಮ್ಮ ಆಗ್ರಹ’ಎನ್ನುತ್ತಾರೆ ಶಾಸಕ ಬಿ.ಕೆ. ಸಂಗಮೇಶ್ವರ.

***

ಎಂಪಿಎಂ ಕಾರ್ಖಾನೆಯನ್ನು ಯಾವುದಾದರೂ ವ್ಯವಸ್ಥೆ ಮೂಲಕ ಶೀಘ್ರವಾಗಿ ಆರಂಭ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕು. ವಿಐಎಸ್ಎಲ್ ಖಾಸಗೀಕರಣ ಪ್ರಕ್ರಿಯೆ ಬಿಟ್ಟು ಹೆಚ್ಚಿನ ಬಂಡವಾಳ ತೊಡಗಿಸಿ ಉನ್ನತೀಕರಣದ ಮೂಲಕ ಕಾರ್ಖಾನೆ ನಡೆಯುವಂತೆ ಮಾಡಬೇಕು.

- ಬಿ.ಕೆ. ಸಂಗಮೇಶ್ವರ, ಶಾಸಕ

***

ವಿಐಎಸ್ಎಲ್ ಕಾರ್ಖಾನೆ ಉತ್ಪಾದನೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಫಲವಾಗಿ ಈಗ ಗುತ್ತಿಗೆ ಕಾರ್ಮಿಕರಿಗೆ ಒಂದಿಷ್ಟು ನೆಮ್ಮದಿಯ ರೀತಿಯಲ್ಲಿ ಕೆಲಸ ಸಿಗಲು ಆರಂಭಿಸಿದೆ. ಇದನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಂಪಿಎಂ ಕಾರ್ಖಾನೆ ಆರಂಭಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ

- ಬಿ.ವೈ. ರಾಘವೇಂದ್ರ, ಸಂಸದ

***

ಚೇತರಿಕೆ ಕಾಣುತ್ತಿರುವ ಶತಮಾನದ ವಿಐಎಸ್‌ಎಲ್‌

ಭಾರತೀಯ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿ ಮುನ್ನಡೆದ ವಿಐಎಸ್ಎಲ್ ಕಳೆದೊಂದು ವರ್ಷದಿಂದ ನಿರಂತರವಾಗಿ ಉತ್ಪಾದನೆ ನಡೆಸುವ ಮೂಲಕ ಲಾಭದ ಹಳಿಗೆ ಮರಳಿದೆ.

‘ವರ್ಷದ ಹಿಂದೆ ಕಾರ್ಖಾನೆ ಪರಿಸ್ಥಿತಿ ಹೀಗಿರಲಿಲ್ಲ. ದಿನ ಬೆಳಗಾದರೆ ಗುತ್ತಿಗೆ ಕಾರ್ಮಿಕರು ಕೆಲಸಕ್ಕಾಗಿ ಹೋರಾಟ ಮಾಡುವ ಸ್ಥಿತಿ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಕೆಲಸದ ಕೊರತೆ ಇದ್ದರೂ ಮುಂಚಿನ ಪ್ರಮಾಣದಲ್ಲಿ ಇಲ್ಲ’ ಎನ್ನುತ್ತಾರೆ ಕಾರ್ಮಿಕ ಗುರುರಾಜ್.

ಗುತ್ತಿಗೆ ಕಾರ್ಮಿಕರೇ ಹೆಚ್ಚಿರುವ ಈ ಕಾರ್ಖಾನೆಯಲ್ಲಿ ಉತ್ಪಾದನೆ ಕೊರತೆ ಎದುರಾದ ಕಾರಣ ತಿಂಗಳಿಗೆ 13 ದಿನಗಳು ಮಾತ್ರ ಕೆಲಸ ನಿಗದಿ ಮಾಡಲಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಗಳಿಂದ ಬರುತ್ತಿರುವ ಉತ್ಪಾದನಾ ಬೇಡಿಕೆ ಸಹಜವಾಗಿ ಕೆಲಸದ ದಿನಗಳನ್ನು ಹೆಚ್ಚು ಮಾಡಲು ನೆರವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ವಿಐಎಸ್ಎಲ್ ಚೇತರಿಕೆ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ. ಇದೇ ರೀತಿ ಮುನ್ನಡೆದರೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ಉದ್ಯೋಗ ಸಿಗುವ ಜತೆಗೆ ಜಿಲ್ಲೆಯ ಆರ್ಥಿಕ ಬಲವರ್ಧನೆ ಸಹ ಹೆಚ್ಚಲಿದೆ’ ಎನ್ನುತ್ತಾರೆ ಉದ್ಯಮಿ ಶಿವಾಜಿರಾವ್.

ಉಕ್ಕು ಪ್ರಾಧಿಕಾರದ ವಿಐಎಸ್ಎಲ್ ಸೇರಿ ಮೂರು ಅಂಗಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ದಶಕದಿಂದ ನಡೆದಿದೆ. ಇದಕ್ಕೆ ಒಂದಿಷ್ಟು ವೇಗ ಕೊಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಈಗಾಗಲೇ ಕರೆದಿದ್ದ ಟೆಂಡರ್ ಪ್ರಕ್ರಿಯೆಗೆ ಹಲವು ಖಾಸಗಿ ಕಂಪನಿಗಳು ಸ್ಪರ್ಧೆಗೆ ಇಳಿದಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತಿಯಾದಲ್ಲಿ ತಮ್ಮ ಪರಿಸ್ಥಿತಿ ಎತ್ತ ಸಾಗಲಿದೆ ಎಂಬುದೇ ಸದ್ಯ ಕಾರ್ಮಿಕರ ನಡುವೆ ಇರುವ ಆತಂಕವಾಗಿದೆ.

‘ಕಾರ್ಮಿಕರ ಹಿತಕ್ಕೆ ಧಕ್ಕೆಯಾಗದಂತೆ ಸರ್ಕಾರ ಕಾರ್ಖಾನೆ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕರ ಪರ ಹೋರಾಟಗಾರ ಜಿ. ಧರ್ಮಪ್ರಸಾದ್.

ದಶಕದಿಂದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಬೆಂದಿರುವ ಇಲ್ಲಿನ ನೌಕರರ ಪಾಲಿಗೆ ಒಂದಿಷ್ಟು ನೆಮ್ಮದಿಯ ವಾತಾವರಣ ಕಾಣಿಸಿಕೊಳ್ಳುವ ಪರಿಸ್ಥಿತಿ ಸದ್ಯಕ್ಕಿಲ್ಲಿ ಕಂಡುಬರುತ್ತಿದೆ. ಇದಕ್ಕೆ ವೇಗ ಕೊಡುವ ಕೆಲಸ ನಡೆದಲ್ಲಿ ಕೈಗಾರಿಕಾ ನಗರದ ಆರ್ಥಿಕ ಚೈತನ್ಯ ವೃದ್ಧಿಸುವ ಜತೆಗೆ ಜಿಲ್ಲೆಯ ಆರ್ಥಿಕ ಶಕ್ತಿಗೆ ಮತ್ತಷ್ಟು ಬಲ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು