ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಜೊತೆ ಸಂಪರ್ಕ ಆರೋಪ: ತಲೆಮರೆಸಿಕೊಂಡ ಶಾರಿಕ್‌ಗೆ ಮತೀನ್ ನಂಟು?

ಎನ್‌ಐಎ ಹುಡುಕುತ್ತಿರುವ ಅಬ್ದುಲ್ ಮತೀನ್
Last Updated 22 ಸೆಪ್ಟೆಂಬರ್ 2022, 4:36 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಷೇಧಿತ ಸಂಘಟನೆ ಐಎಸ್‌ ಜೊತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ಈಗ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹುಡುಕುತ್ತಿರುವ ಅಬ್ದುಲ್ ಮತೀನ್ ಅಹಮದ್ ತಾಹಾ (26) ಜೊತೆ ಸಂಪರ್ಕ ಇತ್ತೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಬ್ದುಲ್ ಮತೀನ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೀನು ಮಾರ್ಕೆಟ್ ರಸ್ತೆ ನಿವಾಸಿ. ಈಗ ತಲೆಮರೆಸಿಕೊಂಡಿರುವ ಶಾರಿಕ್ ಕೂಡ ಅಲ್ಲಿಯವನು.

ಮತೀನ್ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದು ಅರ್ಧಕ್ಕೆ ಬಿಟ್ಟಿದ್ದಾನೆ. ಆತನ ವಿರುದ್ಧ ನಿಷೇಧಿತ ‘ಅಲ್‌ ಹಿಂದ್‌ ಐಎಸ್‌’ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಬೆಂಗಳೂರಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ 2020ರ ಜನವರಿ 1ರಂದು ಎಫ್‌ಐಆರ್ ದಾಖಲಾಗಿದೆ. ಆಗಿನಿಂದ ತಲೆಮರೆಸಿಕೊಂಡಿದ್ದಾನೆ. ಮತೀನ್ ಪತ್ತೆಗೆ ಸುಳಿವು ನೀಡಿದವರಿಗೆ ₹ 3 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ 2020ರಲ್ಲೇ ಘೋಷಿಸಿದೆ.

ತಮಿಳುನಾಡಿನ ಹಿಂದೂ ಮುಖಂಡರೊಬ್ಬರ ಹತ್ಯೆ ಆರೋಪದ ಮೇಲೆಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ‘ಅಲ್ ಹಿಂದ್ ಐಎಸ್’ ಸಂಘಟನೆಯ ಮೆಹಬೂಬ್ ಪಾಶಾ ಹಾಗೂ ಖಾಜಾ ಮೊಯಿದ್ದೀನ್ ಸೇರಿದಂತೆ 12 ಜನರನ್ನು ಬಂಧಿಸಲಾಗಿತ್ತು. ಗುರಪ್ಪನ ಪಾಳ್ಯದಲ್ಲಿದ್ದ ಅಬ್ದುಲ್ ಮತೀನ್ ಮನೆಯಲ್ಲಿಯೇ ಬಂಧಿತರು ಸಭೆ ನಡೆಸಿದ್ದು ವಿಚಾರಣೆ ವೇಳೆ ಬಯಲಾಗಿತ್ತು.

ಮತೀನ್ ತಂದೆ ಮನ್ಸೂರ್ ಅಹಮದ್ ನಿವೃತ್ತ ಸೈನಿಕ. ‘ಮನೆಗೆ ಆಧಾರ ಆಗಬೇಕಿದ್ದ ಮಗನಿಗೆ ಉಗ್ರರ ನಂಟು ಎಲ್ಲಿಂದ ಬಂತೋ ಗೊತ್ತಿಲ್ಲ. ಮಗ ಕಾಣೆಯಾದ ನಂತರ ನೆಮ್ಮದಿ ಕಳೆದುಕೊಂಡಿದ್ದೇವೆ’ ಎಂದು ನೋವು ತೋಡಿಕೊಂಡರು. ‘ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿ ಶಾರಿಕ್ 20 ದಿನಗಳಿಂದ ಮನೆಗೆ ಬಂದಿಲ್ಲ. 40 ದಿನಗಳ ಹಿಂದಷ್ಟೇ ಆತನ ತಂದೆ ತೀರಿಕೊಂಡಿದ್ದಾರೆ‘ ಎಂದು ಮಲತಾಯಿ ಶಬಾನಾ ಬಾನು ಹೇಳುತ್ತಾರೆ. ಶಾರಿಕ್ ಬಿ.ಕಾಂ ಪದವೀಧರ. ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ.

ಬಂಧಿತರು ಅಬ್ದುಲ್ ಮತೀನ್ ಮೂಲಕ ಐಎಸ್ ಸಂಪರ್ಕಕ್ಕೆ ಬಂದಿರಬಹುದೇ ಎಂಬುದು ಇನ್ನೂ ಖಚಿತವಾಗಿಲ್ಲ. ಮುಖ್ಯ ಆರೋಪಿ ಶಾರಿಕ್‌ ಬಂಧನದ ನಂತರ ಗೊತ್ತಾಗಲಿದೆ.

- ಬಿ.ಎಂ.ಲಕ್ಷ್ಮೀಪ್ರಸಾದ್, ಎಸ್‌.ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT