ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡಿಎಫ್‌ ವಿವಾದಕ್ಕೆ ಜಾತಿ ರಾಜಕಾರಣದ ಬಣ್ಣ

Last Updated 21 ಮಾರ್ಚ್ 2022, 5:18 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಹಲ್ಲೆ, ಅಧ್ಯಕ್ಷರ ಆಯ್ಕೆಯಲ್ಲಿನ ಗೊಂದಲದ ವಿಷಯ ಈಗ ಜಾತಿ ರಾಜಕಾರಣದ ಬಣ್ಣ ಪಡೆದುಕೊಂಡಿದೆ.

ಪ್ರತಿಷ್ಠಾನದ ನಿಕಟಪೂರ್ವ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ ಅವರ ಮೇಲೆ ಹಲ್ಲೆ ನಡೆದಿರುವ ಸಂಬಂಧ ಬ್ರಾಹ್ಮಣ ಸಮುದಾಯದವರು ಒಂದೆಡೆ ಸಭೆ ನಡೆಸಿದ್ದರೆ, ಕಾರ್ಯದರ್ಶಿ ಜಗದೀಶ ಗೌಡ ಅವರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ವೀರಶೈವ ಸಮುದಾಯದವರು ಸಭೆ ಸಂಘಟಿಸಿದ್ದಾರೆ.

ಈ ಎರಡೂ ಸಭೆಗಳಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಎದುರೆ ಜಗದೀಶ್ ಗೌಡ ಹಾಗೂ ಶ್ರೀಪಾದ ಹೆಗಡೆ ಅವರ ಮೇಲೆ ಹಲ್ಲೆ ನಡೆದಿದ್ದರೂ ಅದನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅಲ್ಲದೆ ಹಲ್ಲೆ ನಡೆಸಿದವರ ಮೇಲೆ ಈವರೆಗೂ ಪ್ರಕರಣ ದಾಖಲಾಗದೆ ಇರುವುದು ಕೂಡ ಈ ಎರಡೂ ಸಮುದಾಯದವರ ಬೇಸರಕ್ಕೆ ಕಾರಣವಾಗಿದೆ.

ರಹಸ್ಯ ಸ್ಥಳವೊಂದರಲ್ಲಿ ಸಭೆ ನಡೆಸಿರುವ ಬ್ರಾಹ್ಮಣ ಸಮಾಜದ ಪ್ರಮುಖರು ಶ್ರೀಪಾದ ಹೆಗಡೆ ಅವರ ಮೇಲೆ ಎಂಡಿಎಫ್‌ನ ಸದಸ್ಯರಲ್ಲದವರು ಸಭೆಗೆ ನುಗ್ಗಿ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಷಯವನ್ನು ಬಿಜೆಪಿ ಮುಖಂಡರೂ ಆಗಿರುವ ಯು.ಎಚ್. ರಾಮಪ್ಪ ಖಚಿತಪಡಿಸಿದ್ದಾರೆ.

ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್ ಕುಮಾರ್, ಸಂಘ ಪರಿವಾರದ ಹಿರಿಯರಾದ ಅ.ಪು. ನಾರಾಯಣಪ್ಪ, ವಕೀಲ ಕೆ.ಎನ್. ಶ್ರೀಧರ್, ಮೂಗಿಮನೆ ಸುಬ್ರಾವ್ ಹೆಗಡೆ, ರವಿ ಕೈತೋಟ, ಸದಾಶಿವ ಸೇರಿ ಹಲವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿರಿಯ ಸಹಕಾರಿ ಮುಖಂಡ ಎಂ. ಹರನಾಥ ರಾವ್ ಅವರು, ‘ಸಂಸ್ಥೆಯ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಅವರಿಂದ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಶ್ರೀಪಾದ ಅವರನ್ನೇ ಅಧ್ಯಕ್ಷರನ್ನಾಗಿ ಮಾಡೋಣ’ ಎಂದು ಹೇಳಿದ್ದರು. ಆದರೆ ನಂತರ ದಿಢೀರನೆ ಅವರು ನಿಲುವು ಬದಲಿಸುವುದು ಎಷ್ಟು ಸರಿ ಎಂದು ಈ ಸಭೆಯಲ್ಲಿದ್ದವರು ಪ್ರಶ್ನಿಸಿದ್ದಾರೆ.

ಈ ನಡುವೆ ವೀರಶೈವ ಹಾಸ್ಟೆಲ್ ನಲ್ಲಿ ನಡೆದಿರುವ ವೀರಶೈವ ಮುಖಂಡರ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಶೇಖರಪ್ಪ ಗೌಡ, ವೀರಶೈವ ಯುವ ವೇದಿಕೆ ಅಧ್ಯಕ್ಷ ಚಂದ್ರಶೇಖರ್, ಅನಿಲ್ ಗೌಡ್ರು, ಚನ್ನಬಸಪ್ಪ ಗೌಡ್ರು, ವೀರೇಶ್ ಹಂದಿಗೋಡು, ಅನಿಲ್ ಬರದವಳ್ಳಿ, ಎಂ.ಆರ್. ಮಹೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ವೀರಶೈವ ಸಮುದಾಯದವರ ಪಾತ್ರ ಪ್ರಮುಖವಾಗಿದೆ. ಆದಾಗ್ಯೂ ಜಗದೀಶ ಗೌಡ ಅವರ ಮೇಲೆ ಶಾಸಕರ ಎದುರೆ ಹಲ್ಲೆ ನಡೆದಿರುವುದು ಅಮಾನವೀಯ ಘಟನೆಯಾಗಿದೆ ಎಂದು ಸಭೆಯಲ್ಲಿ ಖಂಡನೆ ವ್ಯಕ್ತವಾಗಿದೆ.

ಈ ಎರಡೂ ಸಮುದಾಯದವರು ಸಭೆ ಸೇರುತ್ತಿದ್ದಂತೆ ಶಾಸಕ ಎಚ್.ಹಾಲಪ್ಪ ಹರತಾಳು ಅವರು ತಾವು ಕೆ.ಎಚ್. ಶ್ರೀನಿವಾಸ್ ಅವರ ಲಿಖಿತ ಕೋರಿಕೆಯ ಮೇರೆಗೆ ಸಭೆಯಲ್ಲಿ ಭಾಗವಹಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶ್ರೀನಿವಾಸ್ ಅವರು ತಮಗೆ ಬರೆದಿರುವ ಪತ್ರವನ್ನು ಹಾಕಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.

ಶ್ರೀಪಾದ ಹೆಗಡೆ ಅವರು ನಿಯಮಬಾಹಿರವಾಗಿ ತಮ್ಮ ಪತ್ನಿ, ಮಗಳು, ಮಾವ, ನಾದಿನಿ, ಸಹೋದರ ಹಾಗೂ ಹತ್ತಿರ ಸಂಬಂಧಿಗಳನ್ನೇ ಎಂಡಿಎಫ್‌ನ ಸದಸ್ಯರನ್ನಾಗಿ ಮಾಡಿ ಸಂಸ್ಥೆಯನ್ನು ತಮ್ಮ ಖಾಸಗಿ ಆಸ್ತಿ ಮಾಡಿಕೊಳ್ಳಲು ಮುಂದಾಗಿದ್ದರು. ಇದನ್ನು ತಡೆಯುವುದು ಅನಿವಾರ್ಯವಾಗಿತ್ತು ಎಂದು ಕೂಡ ಹಾಲಪ್ಪ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ರಾಜಕೀಯವಾಗಿ ಹಾಲಪ್ಪ ಅವರಿಗೆ ಆಗಬಹುದಾದ ಹಿನ್ನಡೆಯನ್ನು ತಪ್ಪಿಸಲು ಅವರ ಬೆಂಬಲಿಗರು ಮುಂದಾಗಿದ್ದಾರೆ.

ಈ ನಡುವೆ ಹರನಾಥ ರಾಯರು ಅಥವಾ ಅವರ ಬೆಂಬಲಿಗರು ತಮ್ಮ ವಿರುದ್ಧ ದಾವೆ ದಾಖಲಿಸಬಹುದು ಎಂಬ ನಿರೀಕ್ಷೆಯಲ್ಲಿ ಅವರ ವಿರುದ್ಧ ಜಗದೀಶ ಗೌಡರು ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯೆಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಎಂಡಿಎಫ್ ವಿವಾದ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ.

ಕಣ್ಣೀರು ಹಾಕಿದ ಎಂಡಿಎಫ್ ಕಾರ್ಯದರ್ಶಿ ಜಗದೀಶ ಗೌಡ

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ತಮ್ಮ ಮೇಲೆ ಶಾಸಕ ಹಾಲಪ್ಪ ಅವರ ಬೆಂಬಲಿಗರಿಂದ ಹಲ್ಲೆ ನಡೆದಿರುವುದನ್ನು ನೆನಪಿಸಿಕೊಂಡ ಎಂಡಿಎಫ್ ಕಾರ್ಯದರ್ಶಿ ಜಗದೀಶ ಗೌಡ ವೀರಶೈವ ಮುಖಂಡರ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದಾರೆ. ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿದಾಗಲೂ ಅಲ್ಲಿಯೂ ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಫೋನ್ ಮಾಡಿ ಪೊಲೀಸರಿಂದ ರಕ್ಷಣೆ ಪಡೆಯಬೇಕಾಯಿತು ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT