ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ₹33ರಿಂದ ₹190ಕ್ಕೆ ಹೆಚ್ಚಳ: ಸಾಗರ ಉಪವಿಭಾಗೀಯ ಆಸ್ಪತ್ರೆ ಟೆಂಡರ್‌ ಅಕ್ರಮ

ಉಪವಿಭಾಗೀಯ ಆಸ್ಪತ್ರೆ: ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ
Last Updated 9 ಜೂನ್ 2022, 4:39 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಆಹಾರ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

ಆಸ್ಪತ್ರೆಯ ಒಳ ರೋಗಿಗಳಿಗೆ ಊಟ ಪೂರೈಸುವ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಈ ಸಮಯದಲ್ಲಿ ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ನಿಯಮಗಳನ್ನು ಮಾರ್ಪಾಡು ಮಾಡಲಾಗಿದೆ.

ಈವರೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮಗು ಆಸ್ಪತ್ರೆಯ ಒಳ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲೇ ಇರುವ ಅಡುಗೆ ಕೋಣೆಯಲ್ಲಿ ಆಹಾರ ಸಿದ್ಧಪಡಿಸಿ ಪೂರೈಸಲಾಗುತ್ತಿತ್ತು. ಹೀಗೆ ಆಸ್ಪತ್ರೆಯಲ್ಲೇ ಅಡುಗೆ ಸಿದ್ಧಪಡಿಸುತ್ತಿದ್ದಾಗ ಬೆಳಗಿನ ಕಾಫಿ, ಬ್ರೆಡ್, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ರೋಗಿಯೊಬ್ಬರಿಗೆ ₹ 33 ಖರ್ಚು ಬರುತ್ತಿತ್ತು.

ಈ ವರ್ಷ ಆಸ್ಪತ್ರೆಯಿಂದ ಹೊರಗೆ ಆಹಾರವನ್ನು ಸಿದ್ಧಪಡಿಸಿ ಪೂರೈಸುವ ನಿಯಮವನ್ನು ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ ರೋಗಿಯೊಬ್ಬರ ಊಟಕ್ಕೆ ವೆಚ್ಚ ಮಾಡುತ್ತಿರುವುದು ₹190. ಅಂದರೆ ಈ ಹಿಂದೆ ತಿಂಗಳಿಗೆ ₹ 1.50 ಲಕ್ಷ ಮಾತ್ರ ಖರ್ಚಾಗುತ್ತಿತ್ತು. ಈಗಿನ ವ್ಯವಸ್ಥೆಯಂತೆ ತಿಂಗಳಿಗೆ ₹8.55 ಲಕ್ಷ ಖರ್ಚಾಗುತ್ತದೆ.

ಹಿಂದಿನ ವ್ಯವಸ್ಥೆಯಲ್ಲಿ ಊಟದ ವೆಚ್ಚ ವರ್ಷಕ್ಕೆ ₹18.5 ಲಕ್ಷ ಆಗುತ್ತಿದ್ದರೆ, ಹೊಸ ವ್ಯವಸ್ಥೆಯಲ್ಲಿ ₹1.26 ಕೋಟಿ ವೆಚ್ಚವಾಗುತ್ತಿದೆ. ಈಗ ಊಟದ ಜೊತೆಗೆ ಹೆಚ್ಚುವರಿಯಾಗಿ ಎರಡು ಮೊಟ್ಟೆ, ಬಾಳೆಹಣ್ಣು, ಪಲ್ಯ ನೀಡಲಾಗುತ್ತಿದೆ. ಜೊತೆಗೆ ಗ್ಯಾಸ್, ಹಾಲು ಪೂರೈಕೆ ವೆಚ್ಚವನ್ನು ಸಿದ್ಧಪಡಿಸಿದ ಆಹಾರ ಪೂರೈಸುವವರೇ ಭರಿಸಬೇಕು.

2021ನೇ ಸಾಲಿನ ಡಿಸೆಂಬರ್ 10ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಮನೆ, ಗ್ರೂಪ್ ಡಿ. ನೌಕರರು, ಅಡುಗೆಯವರು, ನೀರಿನ ಸೌಲಭ್ಯವಿದ್ದರೆ ಅಲ್ಲಿಯೇ ಆಹಾರ ಸಿದ್ಧಪಡಿಸಬೇಕು. ಹೊರಗಿನಿಂದ ಸಿದ್ದಪಡಿಸಿ ತರಬಾರದು. ಒಂದು ವೇಳೆ ಆ ರೀತಿ ಮಾಡಿದಲ್ಲಿ ಅದಕ್ಕೆ ಆಸ್ಪತ್ರೆಯ ಮುಖ್ಯಸ್ಥರೇ ಜವಾಬ್ಧಾರರಾಗುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಇಲ್ಲಿನ ಆಸ್ಪತ್ರೆಯಲ್ಲಿ ಅಡುಗೆ ಕೋಣೆ, ಸಿಬ್ಬಂದಿ ಇತರೆ ಸೌಲಭ್ಯಗಳಿದ್ದರೂ ಈ ವರ್ಷ ಆಸ್ಪತ್ರೆಯ ಮುಖ್ಯಸ್ಥರು ಹೊರಗಡೆ ಸಿದ್ಧಪಡಿಸಿದ ಆಹಾರ ಪೂರೈಸುವ ಸಂಬಂಧ ಪತ್ರ ವ್ಯವಹಾರ ನಡೆಸಿ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ವಿಶೇಷವೆಂದರೆ ಸಂಬಂಧಪಟ್ಟ ಪ್ರಕ್ರಿಯೆ ಕೇವಲ ಎರಡು ದಿನಗಳಲ್ಲಿ ಮುಕ್ತಾಯಗೊಂಡಿದೆ.

ಇಲ್ಲಿನ ಆಸ್ಪತ್ರೆಯ ಈಗಿನ ಮುಖ್ಯಸ್ಥರು ಈ ಹಿಂದೆ ಕಡೂರಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇದೀಗ ಟೆಂಡರ್ ನ ಗುತ್ತಿಗೆ ಹಿಡಿದಿರುವ ದಯಾನಂದ ಎಂಬುವವರು ಕಡೂರಿನವರೇ ಆಗಿದ್ದಾರೆ. ಹೀಗಾಗಿ ಟೆಂಡರ್ ವ್ಯವಹರಣೆಯಲ್ಲಿ ಸ್ವಜನ ಪಕ್ಷಪಾತ ನಡೆದಿದೆ ಎಂಬ ದೂರುಗಳು ಕೇಳಿಬಂದಿವೆ.

ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಟೆಂಡರ್ ಕುರಿತು ಅನುಮೋದನೆ ಪಡೆಯದೆ ಪ್ರಕ್ರಿಯೆ ನಡೆಸಿರುವುದು ಕೂಡ ಅನುಮಾನಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT