ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಅಮಲು ಸೃಷ್ಟಿಸಿದ ಅಪರಾಧ ಜಗತ್ತು

ಡ್ರೋನ್‌ ಬಳಸಿ ಹೊಲಗಳಲ್ಲಿ ಗಾಂಜಾ ಬೆಳೆ ಪತ್ತೆ, ಸದ್ಯದಲ್ಲೇ ಬರಲಿವೆ ಟೆಸ್ಟಿಂಗ್‌ ಕಿಟ್‌ಗಳು
Last Updated 27 ಸೆಪ್ಟೆಂಬರ್ 2021, 6:47 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ದಟ್ಟ ಕಾಡುಗಳಲ್ಲಿ ಎರಡು ದಶಕಗಳಿಂದ ದಂಧೆಯಾಗಿರುವ ಗಾಂಜಾ ಘಮಲು ವೇಗವಾಗಿ ಹರಡುತ್ತಿದ್ದು, ಇತರೆ ಅಪರಾಧ ಚಟುವಟಿಕೆಗೂ ಮೂಲವಾಗಿದೆ.

ಮಲೆನಾಡಿಗೆ ಗಾಂಜಾ ಹೊಸದೇನಲ್ಲ. ಗ್ರಾಮೀಣ ಭಾಗದ ಕೆಲವೆಡೆ ಬಳಕೆಯಿತ್ತು. ಅತ್ಯಂತ ಖಾಸಗಿಯಾಗಿ, ಸೀಮಿತವಾಗಿ ಬಳಕೆಯಾಗುತ್ತಿತ್ತು. ಎರಡು ದಶಕಗಳಿಂದ ಈ ದಂಧೆ ವಾಣಿಜ್ಯ ಸ್ವರೂಪ ಪಡೆದಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾರಾಟ ಜಾಲ ವಿಸ್ತರಿಸಿಕೊಂಡಿದೆ. ಮಲೆನಾಡಿನ ರೈತರು ಅರಿವಿದ್ದೋ, ಅರಿವಿಲ್ಲದೆಯೋ ಹಣದಾಸೆಗೆ ಈ ಜಾಲದಲ್ಲಿ ಸಿಲುಕಿ ಅಪರಾಧಿಗಳಾಗುತ್ತಿದ್ದಾರೆ.

ಮುಖ್ಯವಾಗಿ ಮಲೆನಾಡಿನ ಹೊಲ, ತೋಟಗಳಲ್ಲಿ ಉಪ ಬೆಳೆಯಂತೆ ಈ ಗಾಂಜಾ ಬೆಳೆಯಲಾಗುತ್ತಿದೆ. ಒಂದೊಂದು ಹೊಲದಲ್ಲಿ ಹತ್ತಿಪ್ಪತ್ತು ಗಿಡಗಳಿಂದ ಹಿಡಿದು ನೂರಾರು ಗಿಡಗಳವರೆಗೆ ಪೋಷಿಸಲಾಗುತ್ತಿದೆ. ಈ ಬೆಳೆಯ ಹಿಂದೆ ವ್ಯವಸ್ಥಿತ ಜಾಲವೇ ಇದೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಭೇದಿಸುತ್ತಿದ್ದಾರೆ. ಗಾಂಜಾದ ಮೂಲ ಪತ್ತೆ ಇದುವರೆಗೂ ಸಾಧ್ಯವಾಗಿಲ್ಲ.

ಮಲೆನಾಡಿನ ಕಾಡಿನಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲವು ಮಧ್ಯವರ್ತಿಗಳು ಗಾಂಜಾ ಬೀಜಗಳನ್ನು ನೀಡುತ್ತಾರೆ. ಗಾಂಜಾ ಬೆಳೆದ ಬಳಿಕ ತಾವೇ ಖರೀದಿಸುತ್ತಾರೆ. ಹಣದಾಸೆಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಯೋಚಿಸದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆಜೋಳದ ನಡುವಿನಲ್ಲಿ ಗುಟ್ಟಾಗಿ ಬೆಳೆಯುತ್ತಿದ್ದಾರೆ. ಯಾರ ಕಣ್ಣಿಗೂ ಸಿಗದೆ ವ್ಯವಹಾರ ಪೂರೈಸಿಕೊಂಡು ಕಾಸು ಮಾಡಿಕೊಳ್ಳುವ ಸಾಕಷ್ಟು ಮಂದಿ ಇದ್ದಾರೆ. ಆದರೆ, ಕೆಲವರು ಅಬಕಾರಿ ಅಧಿಕಾರಿಗಳು, ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲು ಪಾಲಾಗಿ, ತಮ್ಮನ್ನೇ ನಂಬಿಕೊಂಡ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ.

ಡ್ರೋನ್‌ ಮೂಲಕ ಪತ್ತೆ:

ಕಳೆದ ವರ್ಷ ಅಬಕಾರಿ ಇಲಾಖೆ ಡ್ರೋನ್‌ ಮೂಲಕ ಗಾಂಜಾ ಬೆಳೆ ಪತ್ತೆ ಹಚ್ಚಲು ವಿಶೇಷ ಪ್ರಯತ್ನ ನಡೆಸಿತು. ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಯಿತು. ಹಲವರ ಬಂಧನವಾಯಿತು. ಆದರೂ, ಈ ದಂಧೆಗೆ ಕಡಿವಾಣ ಬಿದ್ದಿಲ್ಲ.

ಕೆಲವು ವರ್ಷಗಳ ಹಿಂದಿನಿಂದ ಪೊಲೀಸರು ಕೂಡ ಗಂಭೀರ ಪ್ರಯತ್ನ ನಡೆಸಿ ಗಾಂಜಾ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ಹಲವೆಡೆ ದಾಳಿ ನಡೆಸಿ, ಅಪಾರ ಪ್ರಮಾಣದ ಗಾಂಜಾ, ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಮಾರಾಟ ಜಾಲ:

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಯ ನಡುವೆ ಗಾಂಜಾ ಬೆಳೆಗೆ ನಗರ ಪ್ರದೇಶವೇ ಮಾರುಕಟ್ಟೆ. ನಗರದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಾಂಜಾ ಪ್ರಕರಣಗಳು ಈಗ ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿವೆ. ನಗರ ಪ್ರದೇಶದ ಯುವಕರು ಹೆಚ್ಚು ದಾಸರಾಗುತ್ತಿದ್ದಾರೆ.

ಅಪರಾಧದ ಜೊತೆ
ಗಾಂಜಾ ನಂಟು:

ನಗರದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದರು ಎಂಬ ಅಂಶ ಗಂಭೀರವಾದುದು. ಗಾಂಜಾ ಮತ್ತಿನಲ್ಲಿ ಆರೋಪಿಗಳು ಹಲ್ಲೆ, ಕೊಲೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಈಚೆಗೆ ಗಾಂಜಾ ಸೇವಿಸಿ ಹಲ್ಲೆ ನಡೆಸಿದ್ದ ಯುವಕರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದರು. ಯುವಕರು ಹಾಡಹಗಲೇ ಲಾಂಗು, ಮಚ್ಚು ಹಿಡಿದುಕೊಂಡು ದರೋಡೆಗಿಳಿದಿದ್ದರು.

ಜಿಲ್ಲೆಯಲ್ಲಿ ಗಾಂಜಾ ಪ್ರಕರಣದಲ್ಲಿ ಕಾರಾಗೃಹ ಸೇರುತ್ತಿರುವ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಒಬ್ಬ ಆರೋಪಿಯಾದರೂ ಜಿಲ್ಲಾ ಕಾರಾಗೃಹ ಸೇರುತ್ತಿದ್ದಾರೆ. ಜೈಲು ಸೇರಿ ಕೆಲವೇ ದಿನಗಳಲ್ಲಿ ಅವರು ಬಿಡುಗಡೆಯಾಗುತ್ತಿದ್ದಾರೆ. ಹೊರ ಬಂದವರು ಮತ್ತೆ ಗಾಂಜಾ ದಂಧೆಯಲ್ಲಿ ತೊಡಗುತ್ತಿದ್ದಾರೆ.

ಒಣ ಗಾಂಜಾವನ್ನು ಚೀಲಗಟ್ಟಲೇ ಸಾಗಣೆ ಮಾಡುವುದಕ್ಕೆ ಶಿವಮೊಗ್ಗ ಮಂಡಗದ್ದೆಯ ಮಾರ್ಗವನ್ನು ಪೆಡ್ಲರ್‌ಗಳು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೀನು ಹೋಟೆಲ್‌ಗಳೇ ಪೆಡ್ಲರ್‌ಗಳಿಗೆ ಗಾಂಜಾ ವಿನಿಮಯಕ್ಕೆ ಪ್ರಮುಖ ಅಡ್ಡೆಗಳಾಗಿವೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ ಹಿಂಭಾಗದ ಬೈಪಾಸ್‌ ರಸ್ತೆ, ಸೂಳೆಬೈಲು, ಟಿಪ್ಪುನಗರ, ಆರ್‌ಎಂಎಲ್‌ ನಗರ, ಅಣ್ಣಾ ನಗರ, ತುಂಗಾ ನಗರ, ಬುದ್ಧನಗರ ಹೀಗೆ ಹಲವು ಬಡಾವಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಇದೆ.

ಅಪರಾಧ ಕೃತ್ಯಗಳಿಗೆ ಕಡಿವಾಣ ಅಗತ್ಯ

ಗಾಂಜಾ ಸೇವನೆಗೆ ಬಲಿಯಾಗಿರುವ ಯುವಕರು ದರೋಡೆ, ಸುಲಿಗೆ, ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ. ನಗರದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳಲ್ಲಿ ನಡೆಯುತ್ತಿರುವ ದರೋಡೆ, ವಾಹನ ಹಾಗೂ ಮನೆಗಳ್ಳತನ ಪ್ರಕರಣಗಳಿಂದಾಗಿ ನಿವಾಸಿಗಳು ಭಯಭೀತರಾಗಿ ಜೀವಿಸುವಂತಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರು, ಹಿರಿಯರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ನಾಗರಿಕರು ವಾಯುವಿಹಾರಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ಪಾಲಿಕೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಬೀದಿದೀಪ ಇಲ್ಲದಿರುವುದು, ಪಾರ್ಕ್‌ಗಳು ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಳು ಗಾಂಜಾ ಹಾಗೂ ಮದ್ಯವ್ಯಸನಿಗಳಿಗೆ ಆಶ್ರಯ ತಾಣಗಳಾಗಿವೆ.
ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸ್ ಗಸ್ತು ಸಮರ್ಪಕವಾಗಿಲ್ಲ. ಪೊಲೀಸ್‌ ಅಧಿಕಾರಿಗಳಿಗೆ ದೂರು ನೀಡದ ಬಳಿಕವೂ ಪ್ರಕರಣಗಳು ಮತ್ತೆ ನಡೆಯುತ್ತಿರುವುದು ನಿವಾಸಿಗಳಲ್ಲಿ ಹೆಚ್ಚಿನ ಭಯ ಹುಟ್ಟಿಸಿದೆ. ಇದರಿಂದ ಈಚೆಗೆ ನಿವಾಸಿಗಳೇ ರಾತ್ರಿ ವೇಳೆ ಗಸ್ತು ತಿರುಗಲು ಶುರು ಮಾಡಿದ್ದಾರೆ.
‘ಗೃಹ ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಗೃಹ ಸಚಿವರ ತವರಲ್ಲೇ ಅಪರಾಧ ಚಟುವಟಿಕೆ ನಡೆಯುತ್ತಿರುವುದು ನಾಚಿಗೇಡಿನ ಸಂಗತಿ. ಸರ್ಕಾರ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಸೂಕ್ತ ಗಸ್ತು ವ್ಯವಸ್ಥೆ ಕಲ್ಪಿಸಬೇಕು. ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಬೇಕು. ಜನರು ನೆಮ್ಮದಿ ಜೀವನ ನಡೆಸುವಂತಾಗಬೇಕು’ ಎನ್ನುತ್ತಾರೆ ಗೋಪಾಲಗೌಡ, ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಜಿ.ಡಿ. ಮಂಜುನಾಥ್.

ಕೃಷಿ ಭೂಮಿಯಲ್ಲಿ ಬೆಳೆಯುತ್ತಿರುವ ಗಾಂಜಾ

ಶಿಕಾರಿಪುರ: ಕೃಷಿ ಭೂಮಿಯಲ್ಲಿ ಗಾಂಜಾ ಗಿಡ ಬೆಳೆಯುವುದು ಹಾಗೂ ಗಾಂಜಾ ಗಿಡ ಸಾಗಣೆಯ ಹಲವು ಪ್ರಕರಣಗಳು ತಾಲ್ಲೂಕಿನಲ್ಲಿ ಕಂಡುಬಂದಿವೆ.

ಕೃಷಿ ಭೂಮಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಹಲವು ಬಾರಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಹುತೇಕ ಆರೋಪಿಗಳು ಮೆಕ್ಕೆಜೋಳ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದರು. 2020ರಲ್ಲಿ ಗಾಂಜಾ ಬೆಳೆದ ಹಾಗೂ ಸಾಗಾಣಿಕೆ ವಿರುದ್ಧ ಹತ್ತು ಪ್ರಕರಣಗಳು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದವು. ಗಾಂಜಾ ಪ್ರಕರಣದ ಹಲವು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ತಾಲ್ಲೂಕಿನಿಂದ ಹೊರ ಜಿಲ್ಲೆಗಳಿಗೆ ಗಾಂಜಾ ಗಿಡಗಳು ಸಾಗಾಟವಾಗುತ್ತಿದೆ ಎಂಬ ಮಾತುಗಳು ತಾಲ್ಲೂಕಿನಲ್ಲಿ ಕೇಳಿಬರುತ್ತಿವೆ. ತಾಲ್ಲೂಕಿನಲ್ಲಿ ಯುವ ಸಮುದಾಯ ಗಾಂಜಾ ಸೇವನೆಯಲ್ಲಿ ತೊಡಗಿದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ.

ಸದ್ಯದಲ್ಲೇ ಗಾಂಜಾ ವ್ಯಸನಿಗಳನ್ನು ಪತ್ತೆಹಚ್ಚಲು ಟೆಸ್ಟಿಂಗ್‌ ಕಿಟ್‌ಗಳು ಬರಲಿವೆ. ಇದರಿಂದ ದಂಧೆಗೆ ಕಡಿವಾಣ ಬೀಳಲಿದೆ. ನಗರ ಪ್ರದೇಶದಿಂದ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಆರೋಪಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

–ಲಕ್ಷ್ಮೀಪ್ರಸಾದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಗಾಂಜಾ ಸೇವನೆ ಮಾಡಿದ ಯುವಕರು ಬೈಕ್‌ಗಳಲ್ಲಿ ಯಾವ ಭಯ ಇಲ್ಲದೇ ತಿರುಗಾಡುತ್ತಿದ್ದಾರೆ. ಇವರು ಎಲ್ಲೆಂದರಲ್ಲಿ ಗಲಾಟೆಗೆ ಇಳಿಯುತ್ತಾರೆ. ಗಾಂಜಾ ಪ್ರಕರಣಗಳಿಗೆ ಕಡಿವಾಣ ಬೀಳದಿದ್ದರೆ ಮುಂದೆ ಹಗಲಲ್ಲೇ ರಸ್ತೆಯಲ್ಲಿ ಓಡಾಡುವುದಕ್ಕೆ ಜನರು ಭಯಪಡಬೇಕಾದ ಸ್ಥಿತಿ ಬರಲಿದೆ.

–ಎಂ.ರಾಜು, ಅಧ್ಯಕ್ಷ, ಸ್ವಾಮಿ ವಿವೇಕಾನಂದ ಬಡಾವಣೆ ‘ಎ’ ಬ್ಲಾಕ್ ನಿವಾಸಿಗಳ ಸಂಘ

ಕಾಲೇಜುಗಳ ಆವರಣದಲ್ಲಿ ಗುಪ್ತವಾಗಿ ಗಾಂಜಾ ಮಾರಾಟ ನಡೆಯುತ್ತಿದೆ. ಕೊರೊನಾ ಕಾರಣ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಪೊಲೀಸ್‌ ಇಲಾಖೆಯಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ ವಿದ್ಯಾರ್ಥಿಗಳು ಇದರಿಂದ ಹೊರಬರಲು ಆಗದೇ ಒದ್ದಾಡುತ್ತಿದ್ದಾರೆ. ವಿದ್ಯಾರ್ಥಿಗಳೇ ಏಜೆಂಟ್‌ಗಳಾಗಿ ಮಾರಾಟದಲ್ಲಿ ತೊಡಗಿರುವುದು ದೊಡ್ಡ ದುರಂತ.

–ಆರ್‌. ರವಿ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT