ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 6,200 ಹೆಕ್ಟೇರ್‌ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡ ರೋಗ

Last Updated 26 ಸೆಪ್ಟೆಂಬರ್ 2022, 4:53 IST
ಅಕ್ಷರ ಗಾತ್ರ

ಶಿವಮೊಗ್ಗ: ಅಧಿಕ ಮಳೆ ಹಾಗೂ ಶೀತ ವಾತಾವರಣದಿಂದಾಗಿ ಮಲೆನಾಡಿನಲ್ಲಿ ಅಡಿಕೆಗೆ ಕೊಳೆ ರೋಗದ ಆತಂಕದ ನಡುವೆಯೇ ಈಗ ಎಲೆಚುಕ್ಕಿ ರೋಗದ ಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ಮರದಲ್ಲಿ ಚಿನ್ನದ ಬೆಳೆಯ ಕನಸಿಗೆ ಇವು ಕೊಳ್ಳಿ ಇಡುತ್ತಿವೆ. ಇದರಿಂದ ಬೇಸತ್ತ ಬೆಳೆಗಾರರು ಬೀದಿಗೆ ಇಳಿದಿದ್ದಾರೆ.

ಎಲೆಚುಕ್ಕಿ ರೋಗದಿಂದ ಹಾನಿಗೀಡಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಸರ್ಕಾರದ ಗಮನ ಸೆಳೆದಿದ್ದಾರೆ.

ಈ ನಡುವೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ತೋಟಗಳಿಗೆ ತೆರಳಿ ಎಲೆಗಳ ಮೇಲಿನ ಚುಕ್ಕಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ ಹಾಗೂ ಔಷಧೋಪಚಾರದ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಕೊಳೆ ರೋಗ ಹಾಗೂ ಎಲೆಚುಕ್ಕಿ ಬಾಧೆ ಮಲೆನಾಡಿನ ಅಡಿಕೆ ಬೆಳೆಗಾರರನ್ನು ದುಃಸ್ವಪ್ನವಾಗಿ ಕಾಡುತ್ತಿವೆ. ಈ ಬಗ್ಗೆ ಈ ವಾರದ ನಮ್ಮ ಜನ ನಮ್ಮ ಧ್ವನಿ ಬೆಳಕು ಚೆಲ್ಲಿದೆ.

6,200 ಹೆಕ್ಟೇರ್ ಪ್ರದೇಶದಲ್ಲಿ ಬಾಧೆ: ‘ಜಿಲ್ಲೆಯಲ್ಲಿ 6,200 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ರೈತರಿಗೆ ಔಷಧ ಕೊಡಲು ಇಲಾಖೆಯಿಂದ ಪ್ರಕ್ರಿಯೆ ಆರಂಭಿಸಿದ್ದೇವೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಎನ್.ಪ್ರಕಾಶ್ ಹೇಳುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಈ ರೋಗ ಮೊದಲು ಕಾಣಿಸಿಕೊಂಡಿತ್ತು. ಹಂತ ಹಂತವಾಗಿ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಪ್ರತಿ ವರ್ಷ ಒಂದೊಂದು ಭಾಗದಲ್ಲಿ ಹೆಚ್ಚುತ್ತಾ ಹೋಗುತ್ತಿದೆ. ವಾತಾವರಣದಲ್ಲಿ ಆರ್ದ್ರತೆ ಶೇ 85ಕ್ಕಿಂತ ಹೆಚ್ಚು ಆದಾಗ, ಬಿಸಿಲು ಕಡಿಮೆ ಆಗಿ ಮಳೆ ಹೆಚ್ಚಾದಾಗ
ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಗೊಬ್ಬರ ಹಾಗೂ ಮಣ್ಣಿನಲ್ಲಿನ ಪೋಷಕಾಂಶ ನೀರಿನಲ್ಲಿ ಕೊಚ್ಚಿ ಹೋಗಿರುತ್ತದೆ. ಹೀಗಾಗಿ ಪೋಷಕಾಂಶ ಮರಗಳಿಗೆ ತಕ್ಕನಾಗಿ ಸಿಗದು. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಕಾಯಿಲೆ ಬರುತ್ತದೆ. ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಗಿಡಗಳಲ್ಲಿ ಆತಂಕ ಮೂಡಿಸುತ್ತದೆ. ಎಲೆಗಳು ಬೇಗ ಹಳದಿಯಾಗಿ, ವಯಸ್ಸಾದಂತಾಗಿ ಉದುರಲು ಆರಂಭಿಸುತ್ತವೆ. ಎಲೆಗಳು ಕಡಿಮೆ ಆದಾಗ ಗಿಡಕ್ಕೆ ಆಹಾರದ ಕೊರತೆ ಆಗಿ ಸೊರಗುತ್ತದೆ. ಆಗಲೂ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಬಾಧಿತವಾಗುತ್ತದೆ.

‘ಈ ಭಾಗದಲ್ಲಿ ಕೊಲ್ಯಾಟೊ ಟ್ರೈಕಂ, ಫೆಸ್ಟೊಫಿಲಾ ಹಾಗೂ ಫಿಲ್ಲೊಸಿಕ್ಸ್ಟಾ ಹೀಗೆ ಮೂರು ತರಹದ ಶಿಲೀಂಧ್ರಗಳು ಎಲೆಚುಕ್ಕಿ ರೋಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಮೂರು ಈಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ. ಕೊಳೆ ರೋಗಕ್ಕೆ ಕಾಯಿಗೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಎಲೆ ಭಾಗಕ್ಕೆ, ಎಲೆ ಕೆಳಭಾಗಕ್ಕೆ ಸಿಂಪಡಿಸಿದರೆ
ಎಲೆಚುಕ್ಕಿ ರೋಗ ನಿಯಂತ್ರಣ ಸಾಧ್ಯ. ರೋಗಗ್ರಸ್ತ ಎಲೆಗಳು ಶಿಲೀಂದ್ರ ಬೆಳವಣಿಗೆಗೆ ಸಹಕಾರಿ ಆಗುವುದುರಿಂದ ಅವುಗಳನ್ನು ಕಿತ್ತು ರಾಶಿ ಹಾಕಿ ಸುಡಬೇಕು. ಹೆಚ್ಚು ಆತಂಕದ ಅಗತ್ಯವಿಲ್ಲ. ಇದು ಮನುಷ್ಯರಲ್ಲಿ ಕಾಣುವ ಶೀತ, ಜ್ವರದ ರೀತಿ. ಆದರೆ, ಸ್ವಲ್ಪ ಮುನ್ನೆಚ್ಚರಿಕೆ ಬೇಕು’ ಎಂದು ಪ್ರಕಾಶ್ ಹೇಳುತ್ತಾರೆ.

‘ರೈತರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿಫಾರಸ್ಸು ಮಾಡಿದ ಔಷಧ ಕೊಡಬೇಕು. ಕೊಟ್ಟಿಗೆ ಗೊಬ್ಬರ ಕೊಡುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ಮಣ್ಣು ಕೊಚ್ಚಿ ಹೋಗದಂತೆ ಬದು, ನೀರು ಇಂಗಲು ಬಸಿ ಕಾಲುವೆ ನಿರ್ಮಿಸಿದರೆ ಸೂಕ್ತ’ ಎಂದು ಸಲಹೆ ನೀಡುತ್ತಾರೆ.

***

ಸಿಗದ ಪೂರಕ ಔಷಧ: ರೈತರು ಕಂಗಾಲು

ನಿರಂಜನ ವಿ

ತೀರ್ಥಹಳ್ಳಿ: ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆಯಾದ ಉತ್ಸಾಹದಲ್ಲಿದ್ದ ರೈತರನ್ನು ಎಲೆಚುಕ್ಕಿ ರೋಗ ನಿದ್ದೆಗೆಡಿಸಿದೆ. ಕಳೆದ 3 ವರ್ಷಗಳಿಂದ ಆಗುಂಬೆ ಹೋಬಳಿಯಲ್ಲಿ ರೋಗದ ಲಕ್ಷಣ ಹೆಚ್ಚಾಗಿ ಕಾಣಿಸಿಕೊಂಡಿದೆ. ನಿಖರ ಔಷಧ ಕಂಡು ಹಿಡಿಯುವಲ್ಲಿ ತಜ್ಞರು ವಿಫಲವಾಗಿದ್ದು, ಸರ್ಕಾರ ಮತ್ತು ಸಂಶೋಧನಾ ಕೇಂದ್ರಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಬೆಳೆಗಾರರಿಂದ ಕೇಳಿ ಬಂದಿದೆ.

ಅತಿಯಾಗಿ ಮಳೆ ಸುರಿಯುವ ಸಹ್ಯಾದ್ರಿ ಶ್ರೇಣಿಯಲ್ಲಿ ಅಡಿಕೆ ಮರಗಳು ಇದ್ದಕ್ಕಿದ್ದಂತೆ ಒಣಗಲಾರಂಭಿಸಿವೆ. ವಾತಾವರಣದಲ್ಲಾದ ಏರುಪೇರು ಇಡೀ ತೋಟಗಳನ್ನೇ ನಾಶ ಮಾಡುವ ಆತಂಕ ಸೃಷ್ಟಿಸಿದೆ. ಕೃಷಿ ತಜ್ಞರು ಶಿಫಾರಸ್ಸು ಮಾಡಿದ ಔಷಧ ಕೆಲಸ ಮಾಡುತ್ತಿಲ್ಲ. ರೈತರೇ ಪ್ರಯೋಗಕ್ಕೆ ಇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಬಿದರಗೋಡು, ಹೊನ್ನೇತಾಳು, ನಾಲೂರು, ಆಗುಂಬೆ, ಅರೇಹಳ್ಳಿ, ಮೇಗರವಳ್ಳಿ, ಹೆಗ್ಗೋಡು, ಹೊಸಹಳ್ಳಿ, ತೀರ್ಥಮುತ್ತೂರು, ಬಸವಾನಿ, ಸಾಲೂರು, ಮುಳುಬಾಗಿಲು, ಹುಂಚದಕಟ್ಟೆ, ಕೋಣಂದೂರು, ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಡಿಕೆ ಎಲೆಚುಕ್ಕಿ ತೀವ್ರವಾಗಿ ಬಾಧಿಸಿದೆ. ಅಡಿಕೆ ಗರಿಗಳಿಗೆ ಸಂಪೂರ್ಣ ಚುಕ್ಕಿ ತಗುಲಿದ್ದು, ಸಸಿಗಳಲ್ಲೂ ರೋಗದ ಲಕ್ಷಣಗಳಿವೆ.

ತಜ್ಞರ ಸಲಹೆ ವಿಫಲ: ಎಲೆಗಳಿಗೆ ತಾಗುವಂತೆ ಬೋರ್ಡೊ ದ್ರಾವಣ ಸಿಂಪಡಿಸಬೇಕು. ತೀವ್ರತೆ ಗಮನಿಸಿ ತಜ್ಞರ ಸಲಹೆಯಂತೆ 30 ದಿನಗಳ ಬಳಿಕ ಹೆಕ್ಸಕೊನಜೋಲ್‌ ಶಿಲೀಂದ್ರ ನಾಶಕ ಸಿಂಪಡಿಸಬೇಕು. ತೋಟಕ್ಕೆ ಕೆರೆಗೋಡು ಬಳಸುವುದನ್ನು ನಿಲ್ಲಿಸಬೇಕು. ಕೆರೆಗೋಡನ್ನು ಕಾಂಪೋಸ್ಟ್‌ ಮಾಡಿ ಬಳಸಿದರೆ ಉತ್ತಮ ಎಂಬುದು ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಲಹೆ. ಇವುಗಳನ್ನು ಸರಿಯಾಗಿ ಅನುಸರಿಸುತ್ತಿದ್ದರೂ ಪರಿಣಾಮಕಾರಿಯಾಗಿಲ್ಲ ಎಂಬುದು ರೈತರ ಅಳಲಾಗಿದೆ.

***

ಮುಂದೇನು ಎಂಬ ಆತಂಕ ಬೆಳೆಗಾರರದ್ದು

ರವಿ ನಾಗರಕೊಡಿಗೆ

ಹೊಸನಗರ: ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ತೀವ್ರಗತಿಯಲ್ಲಿ ಕಾಣಿಸಿಕೊಂಡಿದೆ. ಇದರಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ರೋಗಬಾಧೆ ಹೀಗೆ ಮುಂದುವರಿದರೆ ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ಕಳೆದ ವರ್ಷ ಆರಂಭ: ಕಳೆದ ವರ್ಷ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಕೆಲ ಭಾಗಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ರೋಗ ಬಾಧೆ ಹೆಚ್ಚಾಗಿ ಮರಗಳು ಸಾವು ಕಂಡ ನಂತರ ವಿಚಲಿತರಾದ ಬೆಳೆಗಾರರು ರೋಗ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದರು. ಕಂಡ ಕಂಡ ಔಷಧೋಪಚಾರ ಮಾಡಿ ಸೋತಿದ್ದರು.

ಅಂದು ತೋಟಗಳಿಗೆ ಭೇಟಿ ನೀಡಿದ್ದ ನವುಲೆಯ ಕೃಷಿ ಮತ್ತು ಅಡಿಕೆ ಸಂಶೋಧನಾಲಯ ಹಾಗೂ ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ತಂಡ ಪರಿಶೀಲಿಸಿ ಎಲೆಚುಕ್ಕಿ ರೋಗವು ಶೀಲಿಂದ್ರದಿಂದ ಹರಡುವ ರೋಗವಾಗಿದೆ. ನಿರಂತರ ಮಳೆ, ಹೆಚ್ಚು ತೇವಾಂಶ ರೋಗ ಹರಡಲು ಕಾರಣ. ಅಲ್ಲದೆ ಇಲ್ಲಿನ ಪೊಟ್ಯಾಶ್ ಬಳಕೆಯಿಂದ ರೋಗ ನಿಯಂತ್ರಣ ಮಾಡಬಹುದಾಗಿದೆ ಎಂದು ವರದಿ ನೀಡಿತ್ತು. ಇದರಿಂದ ರೈತರು ಪೊಟ್ಯಾಶ್ ಬಳಕೆ ಮಾಡಿದ್ದರು. ಆಗ ಪೊಟ್ಯಾಶ್‌ಗೆ ದಿಢೀರ್ ಬೇಡಿಕೆ ಉಂಟಾಗಿತ್ತು.

‘ನಗರ ಹೋಬಳಿಯಲ್ಲಿನ ಅಡಿಕೆ ತೋಟಗಳಲ್ಲಿ ಭಾರಿ ಪ್ರಮಾಣದಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸಿದೆ. ಎಲೆಯಲ್ಲಿ ಚುಕ್ಕಿಯಾಗಿ ಕಂಡು ಬಂದು ನಂತರ ಕಾಯಿಗೆ ವ್ಯಾಪಿಸಿ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಪುಟ್ಟನಾಯ್ಕ ಹೇಳುತ್ತಾರೆ.

***

ಆಗುಂಬೆ ಹೋಬಳಿಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಔಷಧ ಸಿಂಪರಣೆಗೆ ಅವಕಾಶ ಸಿಗುತ್ತಿಲ್ಲ. ರೋಗಕ್ಕೆ ಕಾರಣಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ವರ್ಷ ಔಷಧ ಲಭ್ಯವಾಗುತ್ತದೆ.

ರವಿಕುಮಾರ್‌ ಎಂ, ಮುಖ್ಯಸ್ಥರು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಸೀಬಿನಕೆರೆ

***

ವಾತಾವರಣದಲ್ಲಿನ ಬದಲಾವಣೆ ಹಾಗೂ ನಮ್ಮಿಂದ ಆದ ಲೋಪದಿಂದ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಆತಂಕ ಬೇಡ. ನಿಯಂತ್ರಣ ಮಾಡಬಹುದು.

ಜಿ.ಎನ್. ಪ್ರಕಾಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಶಿವಮೊಗ್ಗ

***

ಸಾಗರದ ಕರೂರು ಹೋಬಳಿಯಲ್ಲಿ ಮೊದಲು ನಂತರ ನಗರ, ಹುಂಚಾ ಹೋಬಳಿಯಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಒಮ್ಮೆ ರೋಗ ಕಾಣಿಸಿಕೊಂಡರೆ ಅಷ್ಟು ಸುಲಭದಲ್ಲಿ ರೋಗ ಹತೋಟಿಗೆ ಬರಲಾರದು. ಇದಕ್ಕೆ ಸರ್ಕಾರ ಪರಿಣಾಮಕಾರಿ ಯೋಜನೆ ಜಾರಿಗೊಳಿಸಿ, ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು.

ರವೀಂದ್ರ, ಅಧ್ಯಕ್ಷ, ರೈತ ಸಂಘ, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT